ನವದೆಹಲಿ: 2021ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಇಂಗ್ಲೆಂಡ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಹ್ವಾನ ನೀಡಿದ್ದಾರೆ.
ಇಂಗ್ಲೆಂಡ್ ಪ್ರಧಾನಿ ಭಾರತದ ಗಣರಾಜ್ಯೋತ್ಸವ ಪೆರೇಡ್ಗೆ ಅತಿಥಿ ಆಗಿ ಆಗಮಿಸಿದ್ದು 1993ರಲ್ಲೇ ಕೊನೆ. ಈಗ 27 ವರ್ಷಗಳ ನಂತರ ಬ್ರಿಟನ್ ಪ್ರಧಾನಿಗೆ ಆಹ್ವಾನ ನೀಡಲಾಗಿದೆ. ಬೋರಿಸ್ ಜಾನ್ಸನ್ ಭಾರತದ ಆಮಂತ್ರಣ ಸ್ವೀಕರಿಸಿದರೆ ಮುಂದಿನ ವರ್ಷದ ಗಣಾರಾಜ್ಯೋತ್ಸವಕ್ಕೆ ಮುಖ್ಯ ಅತಿಥಿ ಆಗಲಿದ್ದಾರೆ. ನವೆಂಬರ್ 27ರಂದು ಮೋದಿ ಹಾಗೂ ಬೋರಿಸ್ ಜಾನ್ಸನ್ ದೂರವಾಣಿ ಮೂಲಕ ಮಾತನಾಡಿದ್ದಾರಂತೆ. ಈ ವೇಳೆ ಮೋದಿ ಔಪಚಾರಿಕವಾಗಿ ಬ್ರಿಟನ್ ಪ್ರಧಾನಿಯನ್ನು ಆಹ್ವಾನಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಬ್ರಿಟಿಷ್ ರಾಯಭಾರಿ ಕಚೇರಿ ಅಧಿಕಾರಿಗಳು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.
ನವೆಂಬರ್ ತಿಂಗಳಲ್ಲಿ ಇಂಗ್ಲೆಡ್ ಹಾಗೂ ಭಾರತದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದರು. ಈ ವೇಳೆ ಭವಿಷ್ಯದಲ್ಲಿ ನಡೆಯಲಿರುವ ಒಪ್ಪಂದಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಎರಡೂ ದೇಶಗಳು ಆಮದು-ರಫ್ತಿನ ವಿಚಾರಗಳ ಬಗ್ಗೆಯೂ ಚರ್ಚೆ ನಡೆದಿದೆ.
ಈ ಭೇಟಿ ಮುಖ್ಯವೇಕೆ?:
ಭಾರತ ಹಾಗೂ ಬ್ರಿಟನ್ ಸಂಬಂಧ ಈ ಮೊದಲಿನಿಂದಲೂ ಉತ್ತಮವಾಗಿದೆ. ಒಂದೊಮ್ಮೆ ಬೋರಿಸ್ ಜಾನ್ಸನ್ ಈ ಬಾರಿ ಭಾರತಕ್ಕೆ ಭೇಟಿ ನೀಡಿದರೆ ಎರಡೂ ರಾಷ್ಟ್ರಗಳ ಸಂಬಂಧ ಮತ್ತಷ್ಟು ಉತ್ತಮಗೊಳ್ಳಲಿದೆ. ಅಷ್ಟೇ ಅಲ್ಲ, ಸಾಕಷ್ಟು ಒಪ್ಪಂದಗಳು ಕೂಡ ನಡೆಯುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ಈ ಭೇಟಿ ತುಂಬಾನೇ ಪ್ರಮುಖವಾಗಲಿದೆ.
ಇದನ್ನೂ ಓದಿ: ನರೇಂದ್ರ ಮೋದಿ ಈಗ ಅತಿ ದೀರ್ಘಾವಧಿಯ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿ!