ದೇಶದಲ್ಲಿ ಸುಸ್ಥಿರ ರಸ್ತೆ, ಹೆದ್ದಾರಿ ನಿರ್ಮಾಣ, ಅಪಘಾತ ತಡೆ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಲವು ವಿಶಿಷ್ಟ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಹಾಗೇ, ಇತ್ತೀಚೆಗೆ ವಾಹನಗಳ ಕರ್ಕಶ ಹಾರ್ನ್ ತಪ್ಪಿಸುವ ದೃಷ್ಟಿಯಿಂದ ಇನ್ನು ಮುಂದೆ ವಾಹನಗಳ ಹಾರ್ನ್ಗಳಿಗೆ ಹಿಂದೂಸ್ತಾನಿ ಸಂಗೀತ ವಾದ್ಯಗಳ ದನಿಯನ್ನು ಅಳವಡಿಸುವ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೆದ್ದಾರಿ ಮತ್ತು ರಸ್ತೆ ಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ಹಾಗೇ, ಈಗೊಂದು ಹೊಸ ವಿಷಯವನ್ನು ತಿಳಿಸಿದ್ದಾರೆ. ಅತಿ ಶೀಘ್ರದಲ್ಲೇ ದೆಹಲಿ ಮತ್ತು ರಾಜಸ್ಥಾನದ ಜೈಪುರದ ಮಧ್ಯೆ ಎಲೆಕ್ಟ್ರಿಕ್ ಹೆದ್ದಾರಿ (Electric Highway) ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.
ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣ ಕೇಂದ್ರ ಸರ್ಕಾರದ ಕನಸಿನ ಯೋಜನೆಯಾಗಿದೆ. ಈ ಬಗ್ಗೆ ವಿದೇಶೀ ಕಂಪನಿಗಳೊಟ್ಟಿಗೆ ಮಾತುಕತೆ ನಡೆಸಲಾಗುತ್ತಿದೆ. ಅದು ಅಂತಿಮವಾಗುತ್ತಿದ್ದಂತೆ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಹಾಗೊಮ್ಮೆ ಎಲ್ಲ ಸರಿಯಾಗಿ ದೆಹಲಿ ಮತ್ತು ಜೈಪುರ ನಡುವೆ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣಗೊಂಡರೆ ಅದು ದೇಶದ ಮೊದಲ ಎಲೆಕ್ಟ್ರಿಕ್ ಹೈವೇ ಎನ್ನಿಸಿಕೊಳ್ಳಲಿದೆ. ಇನ್ನು ಇದರೊಟ್ಟಿಗೆ ದೆಹಲಿ ಮತ್ತು ಮುಂಬೈ ಮಧ್ಯೆಯೂ ಕೂಡ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣ ಸಂಬಂಧ ಸ್ವೀಡಿಶ್ ಸಂಸ್ಥೆಯೊಟ್ಟಿಗೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ಎಲೆಕ್ಟ್ರಿಕ್ ಹೆದ್ದಾರಿ?
ನಮ್ಮಲ್ಲಿ ಬಹುತೇಕರಿಗೆ ಇದು ಹೊಸ ಶಬ್ದ. ಜಗತ್ತಿನಲ್ಲೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣ ಮಾಡಿದ ದೇಶ ಸ್ವೀಡನ್. ಇದೀಗ ಜರ್ಮನಿಯಲ್ಲೂ ಇದೆ. ಹಾಗೇ ಭಾರತ ಕೂಡ ಮೊದಲ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ. ಇಡೀ ಜಗತ್ತಿನಲ್ಲಿ ಪೆಟ್ರೋಲ್, ಡೀಸೆಲ್ಗೆ ಪರ್ಯಯ ಇಂಧನಗಳ ಹುಡುಕಾಟ ನಡೆದಿದೆ. ಅದರಲ್ಲಿ ಸದ್ಯ ಹೆಚ್ಚಾಗಿ ಪ್ರಸಿದ್ಧಿಯಾಗಿದ್ದು, ಎಲೆಕ್ಟ್ರಿಕ್ ವಾಹನಗಳು. ಹೆಚ್ಚು ಜನರು ವಿದ್ಯುಚ್ಚಾಲಿತ ವಾಹನಗಳ ಬಳಕೆ, ಖರೀದಿಗೆ ಮುಂದಾಗುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಎಲೆಕ್ಟ್ರಿಕ್ ಹೈವೇ ನಿರ್ಮಾಣ ಮಾಡುವುದರಿಂದ, ಇದರ ಮೂಲಕ ಚಲಿಸುವ ವಿದ್ಯುಚ್ಚಾಲಿತ ವಾಹನಗಳಿಗೆ, ಅದು ಬಸ್, ಟ್ರಕ್ ಯಾವುದೇ ಇರಬಹುದು ತುಂಬ ಅನುಕೂಲವಾಗುತ್ತದೆ. ವಾಹನಗಳು ಈ ಹೆದ್ದಾರಿಯಿಂದ ವಿದ್ಯುತ್ ಶಕ್ತಿ ಪಡೆದು ಸಾಗುತ್ತವೆ.
ನಮ್ಮಲ್ಲಿ ವಿದ್ಯುಚ್ಚಾಲಿತ ವಾಹನಗಳೆಂದರೆ ಬೈಕ್, ಕಾರಿನಂತಹ ಸಣ್ಣ ವಾಹನಗಳು ಎಂದೇ ಭಾವಿಸಲಾಗಿದೆ. ಆದರೆ ಬಸ್, ಟ್ರಕ್, ದೊಡ್ಡ ಲಾರಿಗಳೂ ಕೂಡ ವಿದ್ಯುಚ್ಚಾಲಿತ ಇಂಜಿನ್ ಪಡೆಯಬಹುದು. ಭವಿಷ್ಯದಲ್ಲಿ ಈ ವಿದ್ಯುಚ್ಚಾಲಿತ ವಾಹನಗಳ ಸಂಖ್ಯೆಯೇ ಹೆಚ್ಚಾಗಲಿದೆ. ಅಷ್ಟೇ ಅಲ್ಲ, ಈಗ ಇರುವ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳನ್ನೂ ವಿದ್ಯುಚ್ಚಾಲಿತ ಅಥವಾ ಬೇರೆ ಇನ್ಯಾವುದೇ ಪರ್ಯಾಯ ಇಂಧನ ಚಾಲಿತಗೊಳಿಸುವ ಕ್ರಮಕ್ಕೂ ಕೇಂದ್ರ ಸರ್ಕಾರ ಈಗಾಗಲೇ ಮುಂದಾಗಿದೆ.
ಇದನ್ನೂ ಓದಿ: ಗಾಂಧೀಜಿಯನ್ನೇ ಬಿಟ್ಟಿಲ್ಲ, ಇನ್ನು ನೀವ್ಯಾವ ಲೆಕ್ಕ? ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ
IPL 2021: 8 ತಂಡಗಳು, 8 ಸವಾಲುಗಳು; ಸಮಸ್ಯೆಗಳನ್ನು ಮೆಟ್ಟಿನಿಂತವರಿಗೆ ಒಲಿಯಲಿದೆ ಚಾಂಪಿಯನ್ ಪಟ್ಟ
Published On - 4:18 pm, Sat, 18 September 21