ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ನಿಮ್ಮ ಮಗನಿಗೆ ಕಿವಿಹಿಂಡಿ ಬುದ್ಧಿ ಹೇಳಿ: ನರೇಂದ್ರ ಮೋದಿ ತಾಯಿಗೆ ಪತ್ರ ಬರೆದ ಪಂಜಾಬ್ ರೈತ
ಕೇಂದ್ರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಸೂಚನೆ ಕಾಣದ ಹಿನ್ನೆಲೆಯಲ್ಲಿ ಕೊನೇ ಅಸ್ತ್ರವೆಂಬಂತೆ ರೈತ ಹರ್ಪ್ರೀತ್ ಸಿಂಗ್ ಪ್ರಧಾನಿಯವರ ಪ್ರೀತಿಯ ತಾಯಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಭಾವನಾತ್ಮಕ ಅಸ್ತ್ರ ಪ್ರಯೋಗ ಮಾಡಿದ್ದಾರೆ.
ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ತನ್ನ ದೃಢನಿಲುವು ಸ್ಪಷ್ಟಪಡಿಸಿಲ್ಲ. ಹೀಗಾಗಿ ರೈತ ಪ್ರತಿನಿಧಿಗಳೊಂದಿಗಿನ 11ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ.
ಈ ಮಧ್ಯೆ ಪಂಜಾಬ್ನ ಫಿರೋಜ್ಪುರ ಜಿಲ್ಲೆಯ ರೈತನೊಬ್ಬ ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಅವರಿಗೆ ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ನೀವೇ ನಿಮ್ಮ ಮಗನಿಗೆ ಕಿವಿಹಿಂಡಿ ಬುದ್ಧಿ ಹೇಳಿ. ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಹೇಳಿ ಎಂದು ಮನವಿ ಮಾಡಿದ್ದಾರೆ.
ಹರ್ಪ್ರೀತ್ ಸಿಂಗ್ ಅವರು ಈ ಪತ್ರ ಬರೆದಿದ್ದು, ನಾನು ಅತ್ಯಂತ ಭಾರವಾದ ಹೃದಯದಿಂದ ಈ ಪತ್ರ ಬರೆಯುತ್ತಿದ್ದೇನೆ. ಇಡೀ ದೇಶಕ್ಕೆ ಅನ್ನ ನೀಡುತ್ತಿರುವ ರೈತರು ಇಂದು ದೆಹಲಿಯಲ್ಲಿ, ಅತ್ಯಂತ ಚಳಿಯಲ್ಲಿ ರಸ್ತೆ ಮೇಲೆ ಮಲಗುತ್ತಿದ್ದಾರೆ. ಇದಕ್ಕೆ ಕಾರಣ ಆ ಮೂರು ಕೃಷಿ ಕಾಯ್ದೆಗಳು. ಹೀಗೆ ಚಳಿಯಲ್ಲಿ ನಡುಗುತ್ತ ಮಲಗುತ್ತಿರುವವರಲ್ಲಿ ಮಕ್ಕಳೂ ಇದ್ದಾರೆ. 90-95 ವರ್ಷದ ವೃದ್ಧರು, ಮಕ್ಕಳು, ಮಹಿಳೆಯರೂ ಇದ್ದಾರೆ. ಚಳಿಯ ವಾತಾವರಣದಿಂದ ಅವರೆಲ್ಲ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಹಲವರ ಉಸಿರು ನಿಲ್ಲುತ್ತಿದೆ. ಈ ಬಗ್ಗೆ ನಮಗೆಲ್ಲರಿಗೂ ಆತಂಕವಾಗುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳಿಂದ ರೈತರಿಗೆ ಯಾವುದೇ ಉಪಯೋಗವೂ ಆಗುತ್ತಿಲ್ಲ. ಅದಾನಿ, ಅಂಬಾನಿ ಸೇರಿ ಇತರ ಕಾರ್ಪೋರೇಟ್ ಉದ್ಯಮಿಗಳಿಗೆ ಅನುಕೂಲವಾಗುತ್ತಿರಬಹುದಷ್ಟೇ. ರೈತರಂತೂ ತುಂಬ ಬೇಸರಗೊಂಡಿದ್ದಾರೆ. ಕೃಷಿ ಕಾಯ್ದೆಗಳಲ್ಲಿ ಯಾವುದೇ ತಿದ್ದುಪಡಿಯೂ ರೈತರಿಗೆ ಬೇಕಾಗಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ನಾನು ಈ ಪತ್ರವನ್ನು ತುಂಬ ಭರವಸೆಯೊಂದಿಗೆ ಬರೆಯುತ್ತಿದ್ದೇನೆ. ನಿಮ್ಮ ಮಗ ಈ ದೇಶದ ಪ್ರಧಾನಿ. ಜಾರಿಯಾದ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಅಧಿಕಾರ ಅವರಿಗೆ ಇರುತ್ತದೆ. ಒಬ್ಬ ವ್ಯಕ್ತಿ ಯಾರ ಮಾತನ್ನಾದರೂ ತಿರಸ್ಕರಿಸಬಹುದು. ಆದರೆ ತಾಯಿಯ ಮಾತನ್ನು ಮೀರಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ದೇಶದಲ್ಲಿ ತಾಯಿಯನ್ನು ದೇವರಂತೆ ಪೂಜಿಸುತ್ತಾರೆ. ತಾಯಿ ತನ್ನ ಮಗನಿಗೆ ಕಿವಿ ಹಿಂಡಿ ಆದೇಶ ನೀಡಬಹುದು. ಹಾಗೇ, ಮೋದಿಯವರೂ ಸಹ ನಿಮ್ಮ ಮಾತನ್ನು ಕೇಳಿ, ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತಾರೆ ಎಂದು ನಂಬಿದ್ದೇನೆ. ಹಾಗೊಮ್ಮೆ ಅವರು ಕಾಯ್ದೆಗಳನ್ನು ಹಿಂಪಡೆದರೆ ಇಡೀ ದೇಶ ನಿಮಗೆ ಕೃತಜ್ಞತೆ ಸಲ್ಲಿಸುತ್ತದೆ ಎಂದೂ ಹೇಳಿದ್ದಾರೆ.
ಇಷ್ಟೆಲ್ಲ ಪ್ರತಿಭಟನೆ ಮಾಡಿದರೂ ಕೇಂದ್ರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಸೂಚನೆ ಕಾಣದ ಹಿನ್ನೆಲೆಯಲ್ಲಿ ಕೊನೇ ಅಸ್ತ್ರವೆಂಬಂತೆ ಹರ್ಪ್ರೀತ್ ಸಿಂಗ್ ಪ್ರಧಾನಿಯವರ ಪ್ರೀತಿಯ ತಾಯಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಭಾವನಾತ್ಮಕ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಇವರು ಒಂದು ತಿಂಗಳಿಂದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಕೆಲವು ದಿನಗಳ ಹಿಂದ ಅನುಮತಿ ಪಡೆಯದೆ ಸಿಮ್ಲಾದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಇವರನ್ನು ಪೊಲೀಸರು ಬಂಧಿಸಿದ್ದರು. ಅದಾದ ಬಳಿಕ ಜಾಮೀನು ಪಡೆದು ಹೊರಬಂದಿದ್ದರು.
Delhi Chalo | ದೆಹಲಿಯತ್ತ ಪ್ರಯಾಣ ಬೆಳೆಸಿದ ಆಲ್ ಇಂಡಿಯಾ ಕಿಸಾನ್ ಸಭಾ ಕಾರ್ಯಕರ್ತರು
Published On - 7:06 pm, Sun, 24 January 21