ದೆಹಲಿ: ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೇನೆಯೊಂದಿಗೆ ನಡೆದಿದ್ದ ಸಂಘರ್ಷದ ಬಗ್ಗೆ ರಕ್ಷಣಾ ಇಲಾಖೆ ಇದೇ ಮೊದಲ ಬಾರಿಗೆ ಮಹತ್ವದ ವಿವರಗಳನ್ನು ಬಹಿರಂಗಪಡಿಸಿದೆ. ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾಗಿದ್ದ ಬಿಹಾರ್ ರೆಜಿಮೆಂಟ್ನ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಅವರಿಗೆ ಮಹಾವೀರ ಚಕ್ರ ಪುರಸ್ಕಾರದ ಗೌರವ ಘೋಷಣೆಯಾಗಿದೆ. ಈ ಘೋಷಣೆಯ ಜೊತೆಗೆ ನೀಡಿದ್ದ ಮಾಹಿತಿಯಲ್ಲಿ 2020ರ ಜೂನ್ 15ರ ರಾತ್ರಿ ಗಡಿಯಲ್ಲಿ ಏನೆಲ್ಲಾ ನಡೆದಿತ್ತು ಎಂಬ ವಿವರಗಳೂ ಬಹಿರಂಗವಾಗಿವೆ.
ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯ ಪಾಂಗಾಂಗ್ ಸರೋವರದ ಸಮೀಪ 2020ರ ಜೂನ್ 15ರಂದು, ಭಾರತ ಹಾಗೂ ಚೀನಾ ಸೇನೆಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅದರಲ್ಲಿ ಭಾರತದ 20 ಯೋಧರು ವೀರಮರಣವನ್ನಪ್ಪಿದ್ದರು. ಭಾರತೀಯ ಸೇನೆಯ ಬಿಹಾರ-16 ಬೆಟಾಲಿಯನ್ನ ಕಮಾಂಡಿಂಗ್ ಅಧಿಕಾರಿ ಕರ್ನಲ್ ಸಂತೋಷ್ ಬಾಬು ವೇಳೆ ಹುತಾತ್ಮರಾಗಿದ್ದರು.
72ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ, ನಿನ್ನೆ (ಜ.25) ಕರ್ನಲ್ ಸಂತೋಷ್ ಬಾಬು ಅವರಿಗೆ ಮರಣೋತ್ತರ ಮಹಾವೀರ ಚಕ್ರ ಗೌರವ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಘೋಷಣೆ ಮಾಡಿದ್ದರು. ಈ ವೇಳೆ, ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ನಡುವೆ ನಡೆದ ಸಂಘರ್ಷದ ಬಗ್ಗೆ, ಭಾರತೀಯ ಸರ್ಕಾರದ ರಕ್ಷಣಾ ಸಚಿವಾಲಯ ವಿಸ್ತೃತ ವರದಿ ನೀಡಿದೆ.
ಕರ್ನಲ್ ಸಂತೋಷ್ ಬಾಬು ಅವರಿಗೆ ಗಾಲ್ವಾನ್ ಕಣಿವೆಯಲ್ಲಿ ‘ಆಪರೇಷನ್ ಸ್ನೋ ಲೆಪಾರ್ಡ್’ ಮುನ್ನಡೆಸುವ ಹೊಣೆ ವಹಿಸಲಾಗಿತ್ತು. ಕರ್ನಲ್ ಬಾಬು ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಆದರೆ, ಚೀನಾ ಸೈನಿಕರು ಶಸ್ತ್ರಾಸ್ತ್ರಗಳೊಂದಿಗೆ ಮಾರಕ ದಾಳಿ ಮಾಡಿದರು. ಕಲ್ಲೆಸೆತದ ಸಂಘರ್ಷಕ್ಕೂ ಮುಂದಾದರು. ದಾಳಿಗೆ ಕುಗ್ಗದ ಭಾರತೀಯ ಸೇನೆ ಈ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಚೀನಾ ಸೈನಿಕರನ್ನು ಹಿಮ್ಮೆಟ್ಟಿಸುವ ಶತಪ್ರಯತ್ನ ಮಾಡಿತು ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.
ಕರ್ನಲ್ ಸಂತೋಷ್ ಬಾಬು ಅವರ ವೀರ ಹೋರಾಟವನ್ನು ಸ್ಮರಿಸಿಕೊಂಡಿರುವ ರಕ್ಷಣಾ ಸಚಿವಾಲಯ, ಸಂತೋಷ್ ಬಾಬು ಅವರು ವಿರೋಧಿ ಸೇನೆಯ ಹುಟ್ಟಡಗಿಸಲು ತಮ್ಮ ಕೊನೆಯ ಉಸಿರಿರುವರೆಗೂ ಹೋರಾಡಿದರು. ಗಾಯ, ನೋವು ಸಹಿಸಿಕೊಂಡು, ಸೇನಾ ತುಕಡಿಯನ್ನು ಮುನ್ನಡೆಸಿದರು ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಆ ಮೂಲಕ, ಗಾಲ್ವಾನ್ ಕಣಿವೆ ಹೋರಾಟದ ಬಗ್ಗೆ ವಿಸ್ತೃತ ವರದಿಯನ್ನು ಮೊದಲ ಬಾರಿಗೆ ಕೇಂದ್ರ ಸರ್ಕಾರ ಬಹಿರಂಗ ಪಡಿಸಿದಂತೆ ಆಗಿದೆ.
Published On - 12:00 pm, Tue, 26 January 21