
ನವದೆಹಲಿ, ನವೆಂಬರ್ 18: ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರಿಗೆ ವಿಧಿಸಿದ ಮರಣದಂಡನೆ ಶಿಕ್ಷೆಯು ರಾಜಕೀಯ ಗೊಂದಲಗಳಿಗೆ ಕಾರಣವಾಗಿದೆ. ತೀರ್ಪು ಬಂದ ಕೆಲವೇ ಗಂಟೆಗಳಲ್ಲಿ ಭಾರತ ತನ್ನ ಮೊದಲ ಪ್ರತಿಕ್ರಿಯೆ ನೀಡಿದೆ. ವಿದೇಶಾಂಗ ಸಚಿವಾಲಯವು ಈ ನಿರ್ಧಾರವನ್ನು ಗಮನಿಸುತ್ತಿರುವುದಾಗಿ ಮತ್ತು ಬಾಂಗ್ಲಾದೇಶದ ಜನರ ಹಿತಾಸಕ್ತಿಗಳಿಗೆ ಬದ್ಧವಾಗಿದೆ ಎಂದು ಹೇಳಿದೆ.
ಬಾಂಗ್ಲಾದೇಶದಲ್ಲಿ ಶಾಂತಿ, ಪ್ರಜಾಪ್ರಭುತ್ವ, ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವುದು ತನ್ನ ಆದ್ಯತೆಯಾಗಿದೆ ಎಂದು ಭಾರತ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ನಾವು ಯಾವಾಗಲೂ ಬಾಂಗ್ಲಾದೇಶದ ಜನರು ಮತ್ತು ಅವರ ಹಿತಾಸಕ್ತಿಗಳೊಂದಿಗೆ ನಿಂತಿದ್ದೇವೆ. ಈ ಉದ್ದೇಶಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಕ್ರಿಯೆಯಲ್ಲಿ ಭಾರತವು ಎಲ್ಲಾ ಪಕ್ಷಗಳೊಂದಿಗೆ ರಚನಾತ್ಮಕ ಸಂವಾದದಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಸಚಿವಾಲಯ ಹೇಳಿದೆ.
ಬಾಂಗ್ಲಾದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ
ತೀರ್ಪಿನ ನಂತರ ಬಾಂಗ್ಲಾದೇಶದಲ್ಲಿ ಉದ್ವಿಗ್ನತೆ, ಪ್ರತಿಭಟನೆಗಳು ಆರಂಭಗೊಂಡಿದ್ದು, ಈ ಸಮಯದಲ್ಲಿ ಭಾರತದ ಹೇಳಿಕೆ ಬಂದಿದೆ. ಕೆಲವು ಪ್ರದೇಶಗಳಲ್ಲಿ, ಹಸೀನಾ ಬೆಂಬಲಿಗರು ಬೀದಿಗಿಳಿದಿದ್ದಾರೆ, ಆದರೆ ವಿರೋಧ ಪಕ್ಷಗಳು ಸಂತೋಷಗೊಂಡಂತೆ ಕಂಡುಬರುತ್ತಿವೆ. ಈ ವಾತಾವರಣದಲ್ಲಿ, ಭಾರತದ ಸಮತೋಲಿತ ಮತ್ತು ರಾಜತಾಂತ್ರಿಕ ನಿಲುವು ಅಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಕಾಳಜಿ ವಹಿಸುತ್ತಿದೆ ಮತ್ತು ಢಾಕಾದಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಭಾರತ ಹೇಳಿದೆ.
ಮತ್ತಷ್ಟು ಓದಿ: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಮರಣದಂಡನೆ ವಿಧಿಸಿದರೆ ಭಾರತದ ನಿಲುವು ಏನಾಗಬಹುದು?
ಭಾರತದಿಂದ ಹಸ್ತಾಂತರಕ್ಕೆ ಬಾಂಗ್ಲಾದೇಶ ಬೇಡಿಕೆ
ಇದಕ್ಕೂ ಮೊದಲು, ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯವು ಶೇಖ್ ಹಸೀನಾ ಮತ್ತು ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಅವರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡುವಂತೆ ಒತ್ತಾಯಿಸಿತ್ತು. ಜುಲೈ ಹತ್ಯಾಕಾಂಡಕ್ಕಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿ (ಐಸಿಟಿ) ಇಬ್ಬರನ್ನೂ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಶಿಕ್ಷೆ ವಿಧಿಸಿ ಮರಣದಂಡನೆ ವಿಧಿಸಿದೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆಗಸ್ಟ್ 2024 ರಲ್ಲಿ ನಡೆದ ಸಾಮೂಹಿಕ ದಂಗೆಯಲ್ಲಿ ಪದಚ್ಯುತಗೊಂಡ ನಂತರ 78 ವರ್ಷದ ಶೇಖ್ ಹಸೀನಾ ಅವರು ಭಾರತಕ್ಕೆ ಪಲಾಯನ ಮಾಡಿದ್ದು, ಅಂದಿನಿಂದ ದೆಹಲಿಯಲ್ಲಿಯೇ ನೆಲೆಸಿದ್ದಾರೆ. ಇದು ಎರಡು ನೆರೆಹೊರೆಯವರ ನಡುವಿನ ಸಂಬಂಧವನ್ನು ಹದಗೆಡಿಸಿದೆ. ಸೋಮವಾರ, ಢಾಕಾದ ನ್ಯಾಯಾಲಯವು ಹಸೀನಾ ಮತ್ತು ಮಾಜಿ ಆಂತರಿಕ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರಿಗೆ ಅವರ ಗೈರುಹಾಜರಿಯಲ್ಲಿ ಮರಣದಂಡನೆ ವಿಧಿಸಿದೆ.
ಕಳೆದ ವರ್ಷ ನಡೆದ ವಿದ್ಯಾರ್ಥಿ ನೇತೃತ್ವದ ದಂಗೆಯ ವಿರುದ್ಧ ಮಾರಕ ದಮನ ಕಾರ್ಯಾಚರಣೆಯಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಶೇಖ್ ಹಸೀನಾ ಮತ್ತು ಅಸದುಜ್ಜಮಾನ್ ಖಾನ್ ಕಮಲ್ ತಪ್ಪಿತಸ್ಥರೆಂದು ಘೋಷಿಸಿ, ಶಿಕ್ಷೆ ನೀಡಲಾಗಿದೆ. ಇನ್ನು ಬಾಂಗ್ಲಾದೇಶದ ಮಧ್ಯಂತರ ನಾಯಕ ಮುಹಮ್ಮದ್ ಯೂನಸ್ ಅವರು ಮಾಜಿ ಪ್ರಧಾನಿಗೆ ಶೇಖ್ ಹಸೀನಾ ಅವರಿಗೆ ಗಲ್ಲು ಶಿಕ್ಷೆಯ ತೀರ್ಪನ್ನು ಸ್ವಾಗತಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:44 am, Tue, 18 November 25