ಗಲ್ಲು ಶಿಕ್ಷೆಗೊಳಗಾದ ಶೇಖ್ ಹಸೀನಾ ಹಸ್ತಾಂತರಕ್ಕೆ ಭಾರತಕ್ಕೆ ಬಾಂಗ್ಲಾದೇಶ ಒತ್ತಾಯ
ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ವಾಪಾಸ್ ಕಳುಹಿಸುವಂತೆ ಬಾಂಗ್ಲಾದೇಶ ಸರ್ಕಾರ ಭಾರತಕ್ಕೆ ಪತ್ರ ಬರೆದಿದೆ. ಹಸ್ತಾಂತರ ಒಪ್ಪಂದವನ್ನು ಉಲ್ಲೇಖಿ ಶೇಖ್ ಹಸೀನಾ ಅವರನ್ನು ದೆಹಲಿಯಿಂದ ಹಸ್ತಾಂತರಿಸುವಂತೆ ಒತ್ತಾಯಿಸಲಾಗಿದೆ. ಈಗ ಶೇಖ್ ಹಸೀನಾ ಮತ್ತು ಭಾರತದ ಮುಂದಿರುವ ಆಯ್ಕೆಗಳೇನು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಢಾಕಾ, ನವೆಂಬರ್ 17: ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಇಂದು ನ್ಯಾಯಾಲಯದಿಂದ ಮರಣದಂಡನೆಗೆ ಒಳಗಾಗಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರನ್ನು ಹಸ್ತಾಂತರಿಸುವಂತೆ ಭಾರತಕ್ಕೆ ಮನವಿ ಮಾಡಿದೆ. ಈ ವೇಳೆ ಬಾಂಗ್ಲಾದೇಶ ತನ್ನ ಪತ್ರದಲ್ಲಿ ಎರಡು ರಾಷ್ಟ್ರಗಳ ನಡುವಿನ ಅಸ್ತಿತ್ವದಲ್ಲಿರುವ ಹಸ್ತಾಂತರ ಒಪ್ಪಂದವನ್ನು ಉಲ್ಲೇಖಿಸಿದೆ. “ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಇಂದಿನ ತೀರ್ಪು ತಲೆಮರೆಸಿಕೊಂಡಿರುವ ಅಪರಾಧಿಗಳಾದ ಶೇಖ್ ಹಸೀನಾ ಮತ್ತು ಅಸಾದುಜ್ಜಮಾನ್ ಖಾನ್ ಕಮಲ್ ಅವರನ್ನು ಘೋರ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಖಚಿತಪಡಿಸಿದೆ. ಅವರಿಗೆ ಮರಣದಂಡನೆ ವಿಧಿಸಲಾಗಿದೆ. ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಶಿಕ್ಷೆ ವಿಧಿಸಲಾದ ಈ ಅಪರಾಧಿಗಳಿಗೆ ಆಶ್ರಯ ನೀಡುವುದು ಒಂದು ನ್ಯಾಯಕ್ಕೆ ಮಾಡುವ ಅವಮಾನವೆಂದು ಪರಿಗಣಿಸಲಾಗುತ್ತದೆ” ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಪತ್ರದಲ್ಲಿ ಹೇಳಿದೆ.
“ಅಪರಾಧಿಗಳೆಂದು ಸಾಬೀತಾಗಿರುವ ಈ ಇಬ್ಬರು ವ್ಯಕ್ತಿಗಳನ್ನು ತಕ್ಷಣ ಗಡೀಪಾರು ಮಾಡಿ ಬಾಂಗ್ಲಾದೇಶದ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ. ಎರಡೂ ದೇಶಗಳ ನಡುವೆ ಇರುವ ಹಸ್ತಾಂತರ ಒಪ್ಪಂದದ ಪ್ರಕಾರ ಇದು ಭಾರತದ ಕರ್ತವ್ಯವಾಗಿದೆ” ಎಂದು ಬಾಂಗ್ಲಾದೇಶ ಹೇಳಿದೆ.
ಇದನ್ನೂ ಓದಿ: Sheikh Hasina Gets Death Sentence: ಬಾಂಗ್ಲಾದೇಶದಲ್ಲಿ ನಿರಾಯುಧ ಪ್ರತಿಭಟನಾಕಾರರ ಕೊಲೆ, ಶೇಖ್ ಹಸೀನಾಗೆ ಮರಣದಂಡನೆ
ಜುಲೈ-ಆಗಸ್ಟ್ 2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಅಶಾಂತಿಗೆ ಸಂಬಂಧಿಸಿದ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಶೇಖ್ ಹಸೀನಾ ಅವರನ್ನು ಹೊಣೆಗಾರರನ್ನಾಗಿ ಮಾಡಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಇಂದು ಮರಣದಂಡನೆ ವಿಧಿಸಿದೆ. ವಿದ್ಯಾರ್ಥಿಗಳ ನೇತೃತ್ವದ ದಂಗೆಯನ್ನು ಹತ್ತಿಕ್ಕಲು ಅವರು ಆದೇಶಿಸಿದ್ದಾರೆ ಎಂದು ಹಲವು ತಿಂಗಳುಗಳ ಕಾಲ ನಡೆದ ವಿಚಾರಣೆಯ ನಂತರ ನ್ಯಾಯಾಲಯ ತೀರ್ಮಾನಿಸಿದೆ. ಮರಣದಂಡನೆಯ ಜೊತೆಗೆ, ದೇಶದೊಳಗಿನ ಅವರ ಎಲ್ಲಾ ಆಸ್ತಿಯನ್ನು ವಶಪಡಿಸಿಕೊಳ್ಳಲು ನ್ಯಾಯಮಂಡಳಿ ಆದೇಶಿಸಿದೆ.
ಈ ದೌರ್ಜನ್ಯದಲ್ಲಿ ಭಾಗಿಯಾಗಿದ್ದಕ್ಕಾಗಿ ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರಿಗೆ ಕೂಡ ಮರಣದಂಡನೆ ಶಿಕ್ಷೆಯನ್ನು ನೀಡಿ ತೀರ್ಪು ನೀಡಲಾಗಿದೆ. ಬಾಂಗ್ಲಾದ ಮಾಜಿ ಪೊಲೀಸ್ ಮುಖ್ಯಸ್ಥ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಅವರಿಗೆ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಇದನ್ನೂ ಓದಿ: Sheikh Hasina: ಶೇಖ್ ಹಸೀನಾಗೆ ಗಲ್ಲುಶಿಕ್ಷೆ; ಭಾರತದಿಂದ ಬಾಂಗ್ಲಾದೇಶಕ್ಕೆ ಹಸ್ತಾಂತರವಾಗುತ್ತಾರಾ ಮಾಜಿ ಪ್ರಧಾನಿ?
ಭಾರತದ ಪ್ರತಿಕ್ರಿಯೆ ಏನು?:
“ನೆರೆಯ ರಾಷ್ಟ್ರವಾಗಿ ಭಾರತವು ಬಾಂಗ್ಲಾದೇಶದ ಜನರ ಹಿತಾಸಕ್ತಿಗಳಿಗೆ ಬದ್ಧವಾಗಿದೆ. ಅದರಲ್ಲಿ ಬಾಂಗ್ಲಾದ ಶಾಂತಿ, ಪ್ರಜಾಪ್ರಭುತ್ವ, ಸೇರ್ಪಡೆ ಮತ್ತು ಸ್ಥಿರತೆಯೂ ಸೇರಿದೆ. ಆ ನಿಟ್ಟಿನಲ್ಲಿ ನಾವು ಯಾವಾಗಲೂ ಎಲ್ಲಾ ಪಾಲುದಾರರೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುತ್ತೇವೆ” ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಆದರೆ, ಶೇಖ್ ಹಸೀನಾ ಅವರನ್ನು ಹಸ್ತಾಂತರ ಮಾಡುವ ಬಗ್ಗೆ ಭಾರತ ಇನ್ನೂ ಯಾವುದೇ ನೇರವಾದ ಪ್ರತಿಕ್ರಿಯೆ ನೀಡಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




