Sheikh Hasina: ಶೇಖ್ ಹಸೀನಾಗೆ ಗಲ್ಲುಶಿಕ್ಷೆ; ಭಾರತದಿಂದ ಬಾಂಗ್ಲಾದೇಶಕ್ಕೆ ಹಸ್ತಾಂತರವಾಗುತ್ತಾರಾ ಮಾಜಿ ಪ್ರಧಾನಿ?
ಬಾಂಗ್ಲಾದೇಶದ ಉಚ್ಛಾಟಿತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ ಮತ್ತು ಸಾಮೂಹಿಕ ಸಾವಿನ ಪ್ರಕರಣದಲ್ಲಿ ಕೋರ್ಟ್ ಇಂದು ಮರಣದಂಡನೆ ವಿಧಿಸಿದೆ. ಬಾಂಗ್ಲಾದೇಶದಿಂದ ಪಲಾಯನ ಮಾಡಿದ್ದ ಶೇಖ್ ಹಸೀನಾ ಆಗಿನಿಂದ ಭಾರತದ ದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ. ದೆಹಲಿಯಲ್ಲಿ ಸುರಕ್ಷಿತವಾಗಿರುವ ಶೇಖ್ ಹಸೀನಾ ಅವರಿಗೆ ಗಲ್ಲು ಶಿಕ್ಷೆಯಾಗಿರುವುದರಿಂದ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುತ್ತದೆಯೇ? ಎಂಬ ಚರ್ಚೆ ಮೂಡಿದೆ. ಭಾರತದ ಮುಂದಿರುವ ಆಯ್ಕೆಗಳೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ನವದೆಹಲಿ, ನವೆಂಬರ್ 17: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ (Sheikh Hasina) ವಿರುದ್ಧದ ಗಂಭೀರ ಆರೋಪಗಳನ್ನು ಆಲಿಸಿದ ಬಾಂಗ್ಲಾದೇಶ ನ್ಯಾಯಾಲಯವು ಕಳೆದ ವರ್ಷ ನೆರೆಯ ದೇಶ ಬಾಂಗ್ಲಾದೇಶದಲ್ಲಿ ನಡೆದ ದಂಗೆಯ ಸಮಯದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ ವಿಧಿಸಿದೆ. “ಪ್ರೇರಣೆಗೆ ಪ್ರಚೋದನೆ, ಕೊಲ್ಲಲು ಆದೇಶ ಮತ್ತು ದೌರ್ಜನ್ಯಗಳನ್ನು ತಡೆಯಲು ನಿಷ್ಕ್ರಿಯತೆ ಸೇರಿದಂತೆ ಮೂರು ಆರೋಪಗಳ ಮೇಲೆ ಶೇಖ್ ಹಸೀನಾ ತಪ್ಪಿತಸ್ಥರೆಂದು ಕಂಡುಬಂದಿದೆ. ನಾವು ಅವರಿಗೆ ಮರಣದಂಡನೆಯನ್ನು ಮಾತ್ರ ವಿಧಿಸಲು ಸಾಧ್ಯ” ಎಂದು ಬಾಂಗ್ಲಾದೇಶದ ನ್ಯಾಯಾಧೀಶ ಗೋಲಮ್ ಮೊರ್ಟುಜಾ ಮೊಜುಂದರ್ ಹೇಳಿದ್ದಾರೆ.
ಮರಣದಂಡನೆ ಶಿಕ್ಷೆ ವಿಧಿಸಿದ ನಂತರದ ತಮ್ಮ ಮೊದಲ ಹೇಳಿಕೆಯಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ, “ನಾನೇನೂ ತಪ್ಪು ಮಾಡಿಲ್ಲ, ನನ್ನ ವಿರುದ್ಧದ ತೀರ್ಪು ಸುಳ್ಳು. ನನ್ನ ವಿರುದ್ಧ ಘೋಷಿಸಲಾದ ತೀರ್ಪುಗಳನ್ನು ಯಾವುದೇ ಪ್ರಜಾಪ್ರಭುತ್ವದ ಆದೇಶವಿಲ್ಲದ ಆಯ್ಕೆಯಾಗದ ಸರ್ಕಾರವು ಸ್ಥಾಪಿಸಿದ್ದ ನ್ಯಾಯಮಂಡಳಿಯಿಂದ ಈ ತೀರ್ಪು ನೀಡಲಾಗಿದೆ” ಎಂದು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
“ಅವರು ತೀರ್ಪು ನೀಡಲಿ. ನನಗೆ ಚಿಂತೆಯಿಲ್ಲ. ಅಲ್ಲಾಹ್ ನನಗೆ ಜೀವ ಕೊಟ್ಟನು, ಅಲ್ಲಾಹ್ ಅದನ್ನು ತೆಗೆದುಕೊಳ್ಳುತ್ತಾನೆ. ಅಲ್ಲಿಯವರೆಗೂ ನಾನು ನನ್ನ ದೇಶದ ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇನೆ. ನಾನು ನನ್ನ ಹೆತ್ತವರನ್ನು, ನನ್ನ ಒಡಹುಟ್ಟಿದವರನ್ನು ಕಳೆದುಕೊಂಡಿದ್ದೇನೆ. ಅವರು ನನ್ನ ಮನೆಯನ್ನು ಸುಟ್ಟುಹಾಕಿದ್ದಾರೆ” ಎಂದು ಶೇಖ್ ಹಸೀನಾ ಹೇಳಿದ್ದಾರೆ.
ಭಾರತದ ಮುಂದಿರುವ ಆಯ್ಕೆಯೇನು?:
ಭಾರತವು ಬಾಂಗ್ಲಾದೇಶದ ತೀರ್ಪಿನಿಂದ ಒತ್ತಡಕ್ಕೆ ಒಳಗಾಗಿ ಪದಚ್ಯುತ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರನ್ನು ಗಡಿಪಾರು ಮಾಡುತ್ತದೆಯೇ? ಕಳೆದ ವರ್ಷ ಜುಲೈ ದಂಗೆಯ ಸಂದರ್ಭದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಲ್ಲಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಶೇಖ್ ಹಸೀನಾ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಹೀಗಾಗಿ, ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಅವರನ್ನು ಗಡಿಪಾರು ಮಾಡಲು ಭಾರತದ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ.
ಇದನ್ನೂ ಓದಿ: Sheikh Hasina Verdict: ನಾನು ಜೀವಂತವಾಗಿದ್ದೇನೆ, ಮುಂದೆಯೂ ಇರುತ್ತೇನೆ, ತೀರ್ಪಿಗೂ ಮುನ್ನ ಯೂನಸ್ಗೆ ಶೇಖ್ ಹಸೀನಾ ಸಂದೇಶ
ಇದಕ್ಕೂ ಮೊದಲು, ಶೇಖ್ ಹಸೀನಾ ಅವರನ್ನು ಗಡಿಪಾರು ಮಾಡುವಂತೆ ಬಾಂಗ್ಲಾದೇಶ ಭಾರತಕ್ಕೆ ಮನವಿ ಮಾಡಿತ್ತು. ಆದರೆ, ಅದು ಅಧಿಕೃತ ವಿನಂತಿಯನ್ನು ಕಳುಹಿಸಲಿಲ್ಲ. ಭಾರತ ಶೇಖ್ ಹಸೀನಾ ಅವರನ್ನು ಹಸ್ತಾಂತರ ಮಾಡಿರಲಿಲ್ಲ. ಈ ವರ್ಷದ ಏಪ್ರಿಲ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಬಿಮ್‌ಸ್ಟೆಕ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಭೆಯಲ್ಲಿ, ಭಾರತವು ತಮ್ಮ ಸರ್ಕಾರವನ್ನು ಟೀಕಿಸುವುದನ್ನು ನಿಲ್ಲಿಸುವಂತೆ ಕೇಳಬೇಕೆಂದು ಮುಹಮ್ಮದ್ ಯೂನಸ್ ಸೂಚಿಸಿದ್ದರು. ಅಲ್ಲದೆ, ಭಾರತ ಶೇಖ್ ಹಸೀನಾಗೆ ಆಶ್ರಯ ನೀಡಿರುವುದರಿಂದಲೇ ಬಾಂಗ್ಲಾ-ಭಾರತದ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ ಎಂದು ಬಾಂಗ್ಲಾದೇಶ ಹೇಳಿತ್ತು.
ಇದೀಗ ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಿದ ನಂತರ, ಬಾಂಗ್ಲಾದೇಶ ಅವರನ್ನು ವಾಪಸ್ ಕಳುಹಿಸಲು ಭಾರತದ ಮೇಲೆ ಮತ್ತೆ ಒತ್ತಡ ಹೇರಬಹುದು. ಹೀಗಾಗಿ, ಈ ಬಾರಿ ಭಾರತ ಪ್ರತಿಕ್ರಿಯಿಸಲೇಬೇಕಾಗುತ್ತದೆ. ಮರಣದಂಡನೆಗೆ ಒಳಗಾದ ಅಪರಾಧಿಯಾಗಿರುವ ಶೇಖ್ ಹಸೀನಾ ಅವರನ್ನು ಭಾರತದಲ್ಲಿ ಇರಿಸಿಕೊಳ್ಳುವುದು ಕಾನೂನಾತ್ಮಕವಾಗಿಯೂ ಭಾರತಕ್ಕೆ ತೊಡಕಾಗಬಹುದು. ಹೀಗಾಗಿ, ಈ ಬಗ್ಗೆ ನಿರ್ಧಾರ ಕೈಗೊಳ್ಳಲೇಬೇಕಾದ ಅನಿವಾರ್ಯತೆ ಭಾರತಕ್ಕಿದೆ.
ಢಾಕಾದೊಂದಿಗೆ ಸಹಿ ಹಾಕಿದ ಹಸ್ತಾಂತರ ಒಪ್ಪಂದದ ಹೊರತಾಗಿಯೂ, ಭಾರತವು ಮಾಜಿ ಪ್ರಧಾನಿಯನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸದಿರಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ. ವಿಪರ್ಯಾಸವೆಂದರೆ, ಶೇಖ್ ಹಸೀನಾ ದೇಶದ ಪ್ರಧಾನಿಯಾಗಿದ್ದಾಗ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. 2013ರಲ್ಲಿ ಸಹಿ ಹಾಕಿದ ಭಾರತ-ಬಾಂಗ್ಲಾದೇಶ ಹಸ್ತಾಂತರ ಒಪ್ಪಂದದ ಷರತ್ತಿನ ಪ್ರಕಾರ, ಆರೋಪಗಳು ರಾಜಕೀಯ ಪ್ರೇರಿತವಾಗಿದ್ದರೆ ಭಾರತ ಆ ವಿನಂತಿಯನ್ನು ತಿರಸ್ಕರಿಸಬಹುದು.
ಹಸ್ತಾಂತರ ಒಪ್ಪಂದವು ರಾಜಕೀಯ ಪ್ರೇರಿತವೆಂದು ಪರಿಗಣಿಸಲಾಗದ ಅಪರಾಧಗಳ ದೀರ್ಘ ಪಟ್ಟಿಯನ್ನು ಸಹ ಹೊಂದಿದೆ. ಇದರಲ್ಲಿ ಕೊಲೆ, ಅಪಹರಣ, ಬಾಂಬ್ ಸ್ಫೋಟಗಳು ಮತ್ತು ಭಯೋತ್ಪಾದನೆ ಸೇರಿವೆ. ಶೇಖ್ ಹಸೀನಾ ಕೊಲೆ ಮತ್ತು ಅಪರಾಧಿ ಎಂದು ಕಂಡುಬಂದಿರುವುದರಿಂದ, ಈ ಆಧಾರದ ಮೇಲೆ ಅವರನ್ನು ಗಡೀಪಾರು ಮಾಡದಿರುವುದು ಭಾರತಕ್ಕೆ ಕಷ್ಟಕರವಾಗಿರುತ್ತದೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನಿರಾಯುಧ ಪ್ರತಿಭಟನಾಕಾರರ ಕೊಲೆ, ಶೇಖ್ ಹಸೀನಾಗೆ ಮರಣದಂಡನೆ
ಜಿಲ್ಲಾ ನ್ಯಾಯಾಲಯವು ಶೇಖ್ ಹಸೀನಾ ವಿರುದ್ಧ ಬಂಧನ ವಾರಂಟ್ ಹೊರಡಿಸಿದರೆ ಮತ್ತು ಢಾಕಾ ಅವರನ್ನು ಹಸ್ತಾಂತರಿಸುವಂತೆ ಕೇಳಿದರೆ, ಭಾರತಕ್ಕೆ ಕಷ್ಟವಾಗುತ್ತದೆ. ಈ ಸಂದರ್ಭದಲ್ಲಿ, ನ್ಯಾಯಮಂಡಳಿಯು ಅವರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಒಪ್ಪಂದದ ಕೆಲವು ಇತರ ನಿಬಂಧನೆಗಳ ಅಡಿಯಲ್ಲಿ ಭಾರತವು ಹಸ್ತಾಂತರ ವಿನಂತಿಯನ್ನು ತಿರಸ್ಕರಿಸಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.
ಏನಿದು ಘಟನೆ?:
ಮಾಧ್ಯಮ ವರದಿಗಳ ಪ್ರಕಾರ, ಬಾಂಗ್ಲಾದೇಶದ ಢಾಕಾ ಮತ್ತು ಇತರ ಭಾಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ ಮೀಸಲಾತಿಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಗುಂಡು ಹಾರಿಸಿದಾಗ 230ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಗುಂಡು ಹಾರಿಸಲು ಆಗ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರೇ ಆದೇಶ ನೀಡಿದ್ದರು. ಆಗಸ್ಟ್ 5, 2024ರಂದು ಸಾವಿರಾರು ಜನರು ಶೇಖ್ ಹಸೀನಾ ಅವರ ಅಧಿಕೃತ ನಿವಾಸಕ್ಕೆ ನುಗ್ಗಿ, ಅದನ್ನು ದೋಚಿದರು ಮತ್ತು ಕೈಗೆ ಸಿಕ್ಕಿದ ಎಲ್ಲವನ್ನೂ ಲೂಟಿ ಮಾಡಿದರು. ಶೇಖ್ ಹಸೀನಾ ಢಾಕಾವನ್ನು ತೊರೆದು ಅದೇ ದಿನ ಭಾರತಕ್ಕೆ ಪಲಾಯನ ಮಾಡಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Mon, 17 November 25




