Coronavirus India Update: ಕಳೆದ 24 ಗಂಟೆಗಳಲ್ಲಿ 1.61ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 879 ಮಂದಿ ಸಾವು

|

Updated on: Apr 13, 2021 | 11:12 AM

Covid 19 in India: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ  879 ಮಂದಿ ಕೊವಿಡ್​ನಿಂದ ಮೃತಪಟ್ಟಿದ್ದಾರೆ. ಮಂಗಳವಾರದ ಅಂಕಿ ಅಂಶಗಳ ಪ್ರಕಾರ 1,22,53,697 ಮಂದಿ ಚೇತರಿಸಿಕೊಂಡಿದ್ದಾರೆ.

Coronavirus India Update: ಕಳೆದ 24 ಗಂಟೆಗಳಲ್ಲಿ 1.61ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 879 ಮಂದಿ ಸಾವು
ಮುಂಬೈ ದಾದರ್ ನಿಲ್ದಾಣದಲ್ಲಿ ತಪಾಸಣೆ
Follow us on

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,61,736 (1.61ಲಕ್ಷ) ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 13,68,9453 (13.68 ಕೋಟಿ) ತಲುಪಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ  879 ಮಂದಿ ಕೊವಿಡ್​ನಿಂದ ಮೃತಪಟ್ಟಿದ್ದು ಸಾವಿನ ಸಂಖ್ಯೆ 1,71,058ಕ್ಕೇರಿದೆ. ಮಂಗಳವಾರದ ಅಂಕಿ ಅಂಶಗಳ ಪ್ರಕಾರ 1,22,53,697 ಮಂದಿ ಚೇತರಿಸಿಕೊಂಡಿದ್ದಾರೆ. ಕೊವಿಡ್​ನಿಂದ ಮೃತಪಟ್ಟವರ ಅಂಕಿ ಅಂಶಗಳ ಪಟ್ಟಿ ಗಮನಿಸಿದರೆ ಜಗತ್ತಿನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಕೊವಿಡ್​ನಿಂದ ಅತೀ ಹೆಚ್ಚು ಸಾವು ವರದಿಯಾಗಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್ ಎರಡನೇ ಸ್ಥಾನ ಮತ್ತು ಮೆಕ್ಸಿಕೊ ಮೂರನೇ ಸ್ಥಾನದಲ್ಲಿದೆ.

ಸರ್ಕಾರದ ಮಾಹಿತಿ ಪ್ರಕಾರ ಮಹಾರಾಷ್ಟ್ರ, ಛತ್ತೀಸಗಡ, ಉತ್ತರ ಪ್ರದೇಶ, ಕರ್ನಾಟಕ, ದೆಹಲಿ, ತಮಿಳುನಾಡು, ಮಧ್ಯಪ್ರದೇಶ, ಗುಜರಾತ್, ಹರ್ಯಾಣ, ರಾಜಸ್ಥಾನ, ಪಂಜಾಬ್, ಕೇರಳ, ತೆಲಂಗಾಣ, ಉತ್ತರಾಖಂಡ, ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಹೊಸ ಕೊವಿಡ್ ಪ್ರಕರಣಗಳು ಪ್ರತಿ ದಿನ ಏರಿಕೆಯಾಗುತ್ತದೆ. ದೇಶದಲ್ಲಿ ಪ್ರತಿ ದಿನ 10 ಕೋಟಿ ಡೋಸ್ ಕೊವಿಡ್ ಲಸಿಕೆ ವಿತರಣೆಯಾತ್ತಿರುವ ಹೊತ್ತಲ್ಲಿಯೇ ಕೊವಿಡ್ ಎರಡನೇ ಅಲೆ ಪರಿಣಾಮ ಕೊರೊನಾವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)  ಅಂಕಿ  ಅಂಶಗಳ ಪ್ರಕಾರ ಏಪ್ರಿಲ್  12ರವರೆಗೆ  25,92,07,108  ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಸೋಮವಾರ  14,00,122  ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಕೊವಿಡ್ ನಿಯಂತ್ರಣಕ್ಕಾಗಿರುವ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸದೇ ಇರುವುದು ಮತ್ತು SARS-CoV- ನ ಹೆಚ್ಚು ಪ್ರಸರಣದಿಂದಾಗಿ ಭಾರತದಲ್ಲಿ ಕೊರೊನಾವೈರಸ್ ಸೋಂಕು ಉಲ್ಬಣಗೊಂಡಿದೆ ಎಂದು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ. ನೀವು ಹೊರಗೆ ಹೋದರೆ, ಮಾರುಕಟ್ಟೆಗಳು, ರೆಸ್ಟೋರೆಂಟ್‌ಗಳು ಮತ್ತು ಶಾಪಿಂಗ್ ಮಾಲ್‌ಗಳು ಜನರಿಂದ ತುಂಬಿರುವುದನ್ನು ನೀವು ನೋಡುತ್ತೀರಿ. ಇವು ವೈರಸ್ ಪ್ರಸರಣಕ್ಕೆ ಕಾರಣವಾಗುತ್ತವೆ ಎಂದು ಗುಲೇರಿಯಾ ಅಭಿಪ್ರಾಯ ಪಟ್ಟಿದ್ದಾರೆ.

34ನೇ ದಿನವೂ ಸತತವಾಗಿ ಸಕ್ರಿಯ ಪ್ರಕರಣಗಳು ಏರಿಕೆಯಾಗಿದ್ದು ಪ್ರಕರಣಗಳ ಸಂಖ್ಯೆ 12,64,698ತಲುಪಿದೆ. ಫೆಬ್ರವರಿ 12ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ ಕನಿಷ್ಠ ಅಂದರೆ 1,35,926ಆಗಿತ್ತು. ಸೆಪ್ಟೆಂಬರ್ 18ರಂದು ಗರಿಷ್ಠ 10,17,754ಕ್ಕೆ ತಲುಪಿತ್ತು.


ಮಹಾರಾಷ್ಟ್ರದಲ್ಲಿ ಲಾಕ್​ಡೌನ್ ಸಾಧ್ಯತೆ
ಮಹಾರಾಷ್ಟ್ರದಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು, ಸೋಂಕು ನಿಯಂತ್ರಣಕ್ಕಾಗಿ ಲಾಕ್​ಡೌನ್ ಜಾರಿಯಾಗುವ ಸಾಧ್ಯತೆ ಇದೆ. ರಾಜ್ಯದ ಜನರು ಲಾಕ್​ಡೌನ್​ಗಾಗಿ ಮಾನಸಿಕ ಸಿದ್ದತೆ ಮಾಡಿಕೊಳ್ಳಿ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ದೆಹಲಿಯಲ್ಲಿ ಒಂದೇ ದಿನ 14,491 ಸೋಂಕಿತರು ಪತ್ತೆ
ದೆಹಲಿಯಲ್ಲಿ ಒಂದೇ ದಿನ 14,491 ಮಂದಿ ಕೊವಿಡ್ ಸೋಂಕಿತರು ಪತ್ತೆಯಾಗಿದ್ದು72 ಮಂದಿ ಸಾವಿಗೀಡಾಗಿದ್ದಾರೆ. ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 14 ಖಾಸಗಿ ಆಸ್ಪತ್ರೆಗಳನ್ನು ಕೊವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲು ಸರ್ಕಾರ ಆದೇಶ ನೀಡಿದೆ. ಈ ಆಸ್ಪತ್ರೆಗಳಲ್ಲಿ ಕೊವಿಡ್ ರೋಗಿಗಳ ಚಿಕಿತ್ಸೆಗಾಗಿ ಒಟ್ಟು 3,202 ಹಾಸಿಕೆ ಮತ್ತು 1,135ಐಸಿಯು ಬೆಡ್ ಗಳನ್ನು ಮೀಸಲಿರಿಸಲಾಗಿದೆ.

ಇದನ್ನೂ  ಓದಿ: Coronavirus: ವಿಶ್ವದಲ್ಲಿ ಅತೀ ಹೆಚ್ಚು ಕೊವಿಡ್ ರೋಗಿಗಳಿರುವ ದೇಶಗಳ ಪಟ್ಟಿಯಲ್ಲಿ ಬ್ರೆಜಿಲ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಭಾರತ

(India recorded 1,61,736 new cases of Covid 19 and 879 deaths in the last 24 hours)

 

Published On - 10:27 am, Tue, 13 April 21