ದೇಶದಲ್ಲಿಂದು 1150 ಹೊಸ ಕೊರೊನಾ ಕೇಸ್​ಗಳು ದಾಖಲು; 4 ಮಂದಿ ಸಾವು, 11 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು

| Updated By: Lakshmi Hegde

Updated on: Apr 17, 2022 | 10:09 AM

ದೇಶದಲ್ಲಿ ಏಪ್ರಿಲ್​ 1ರಿಂದ ಕೊರೊನಾ ನಿಯಂತ್ರಣ ನಿರ್ಬಂಧಗಳನ್ನೆಲ್ಲ ತೆರವುಗೊಳಿಸಲಾಗಿದೆ. ಅದಾದ ಮೇಲೆ ದೆಹಲಿ, ಮಿಜೋರಾಂ, ತಮಿಳುನಾಡು ಸೇರಿ ಕೆಲವು ರಾಜ್ಯಗಳಲ್ಲಿ ಮತ್ತೆ ನಿಧಾನಕ್ಕೆ ಕೊರೊನಾ ಏರಿಕೆಯಾಗುತ್ತಿದೆ.

ದೇಶದಲ್ಲಿಂದು 1150 ಹೊಸ ಕೊರೊನಾ ಕೇಸ್​ಗಳು ದಾಖಲು; 4 ಮಂದಿ ಸಾವು, 11 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು
ಸಾಂಕೇತಿಕ ಚಿತ್ರ
Follow us on

ದೇಶದಲ್ಲಿ ಕಳೆದ 24ಗಂಟೆಯಲ್ಲಿ 1,150 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 4,30,42,097ಕ್ಕೆ ಏರಿಕೆಯಾಗಿದೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 11,558 ಇರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಹಾಗೇ, 24ಗಂಟೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 5,21,751ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣದ ಶೇ. 0.31 ಮತ್ತು ವಾರದ ಪಾಸಿಟಿವಿಟಿ ರೇಟ್​ ಶೇ.0.27ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ದೆಹಲಿಯಲ್ಲಿ ಕೊವಿಡ್​ 19 ಸೋಂಕು ಒಂದೇ ಸಮನೆ ಏರಿಕೆಯಾಗುತ್ತಿದೆ. ಅಲ್ಲೀಗ ಪಾಸಿಟಿವಿಟಿ ರೇಟ್​ ಶೇ.5.33ರಷ್ಟಿದೆ. ಇಂದು ಒಂದೇ ದಿನ ಅಲ್ಲಿ 461 ಹೊಸ ಕೇಸ್​​ಗಳು ದಾಖಲಾಗಿವೆ. ನಿನ್ನೆಗೆ ಹೋಲಿಸಿದರೆ ಇಂದು ಶೇ.26ರಷ್ಟು ಹೆಚ್ಚಳವಾಗಿದೆ. ಶಾಲೆಗಳಿಗೆ ಹೋಗುತ್ತಿರುವ ಮಕ್ಕಳಿಗೆ ಕೊರೊನಾ ತಗುಲುತ್ತಿದ್ದು ಆತಂಕಕ್ಕೀಡಾಗಿದೆ. ಸದ್ಯ ಶಾಲೆಗಳನ್ನು ಮುಚ್ಚುವುದು ಬೇಡ, ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಬಂದ್ ಮಾಡೋಣ ಎಂದು ದೆಹಲಿ ಉಪಮುಖ್ಯಮಂತ್ರಿ ತಿಳಿಸಿದ್ದಾರೆ.

ದೇಶದಲ್ಲಿ ಏಪ್ರಿಲ್​ 1ರಿಂದ ಕೊರೊನಾ ನಿಯಂತ್ರಣ ನಿರ್ಬಂಧಗಳನ್ನೆಲ್ಲ ತೆರವುಗೊಳಿಸಲಾಗಿದೆ. ಅದಾದ ಮೇಲೆ ದೆಹಲಿ, ಮಿಜೋರಾಂ, ತಮಿಳುನಾಡು ಸೇರಿ ಕೆಲವು ರಾಜ್ಯಗಳಲ್ಲಿ ಮತ್ತೆ ನಿಧಾನಕ್ಕೆ ಕೊರೊನಾ ಏರಿಕೆಯಾಗುತ್ತಿದೆ. ಈ ಮಧ್ಯೆ ಕೊರೊನಾ ಲಸಿಕೆ ಮುನ್ನೆಚ್ಚರಿಕಾ ಡೋಸ್​​ ಕೂಡ ನೀಡಲಾಗುತ್ತಿದೆ. ಕೊರೊನಾ ನಿಯಂತ್ರಣ ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತಿದ್ದಂತೆ ಜನರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸುವುದನ್ನೂ ಬಿಡುತ್ತಿದ್ದಾರೆ. ಹಬ್ಬಗಳು, ಉತ್ಸವ, ಜಾತ್ರೆಗಳಲ್ಲಿ ಭರ್ಜರಿ ಜನ ಸೇರುತ್ತಿದ್ದಾರೆ. ಹೀಗಾಗಿ ಮತ್ತೆ ನಿಧಾನವಾಗಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಈ ಮಧ್ಯೆ ಇಲ್ಲಿಯವರೆಗೆ 185.51 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದೂ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಈ ಹಳ್ಳಿಯಲ್ಲಿ ಹನುಮಂತ ದೇವರನ್ನು ಪೂಜಿಸುವುದಿಲ್ಲ, ಮಾರುತಿ ಕಾರನ್ನೂ ಕೊಳ್ಳುವುದಿಲ್ಲ; ರಾಕ್ಷಸನ ಆರಾಧನೆ ಮಾಡಲು ಇದೆ ಒಂದು ಕಾರಣ !

Published On - 10:09 am, Sun, 17 April 22