ಈ ಹಳ್ಳಿಯಲ್ಲಿ ಹನುಮಂತ ದೇವರನ್ನು ಪೂಜಿಸುವುದಿಲ್ಲ, ಮಾರುತಿ ಕಾರನ್ನೂ ಕೊಳ್ಳುವುದಿಲ್ಲ; ರಾಕ್ಷಸನ ಆರಾಧನೆ ಮಾಡಲು ಇದೆ ಒಂದು ಕಾರಣ !
ಅಂದಿನ ದಂಡಕಾರಣ್ಯ ಇರುವ ಜಾಗದಲ್ಲಿಯೇ ನಮ್ಮ ಹಳ್ಳಿಯಿದೆ. ಇಲ್ಲಿ ಒಂದೇ ಒಂದು ಆಂಜನೇಯನ ಗುಡಿಯಿಲ್ಲ. ಇಲ್ಯಾರೂ ಹನುಮನನ್ನು ಪೂಜಿಸುವುದೂ ಇಲ್ಲ. ಹನುಮಾನ್ ಚಾಲೀಸಾ ಪಠಿಸುವುದಿಲ್ಲ ಎಂದು ಅಂಕುಶ್ ವಾಘ್ ಎಂಬುವರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲೊಂದು ಕುಗ್ರಾಮವಿದೆ. ಅದು ತುಂಬ ಪುಟ್ಟ ಹಳ್ಳಿ. ಆದರೆ ಇಲ್ಲಿನ ಆಚರಣೆಗಳು ತುಂಬ ವಿಚಿತ್ರ. ಇವರು ಆಂಜನೇಯ ದೇವರನ್ನು ಪೂಜಿಸುವುದಿಲ್ಲ. ಹನುಮನಂತನ ಹೆಸರನ್ನು ಮಕ್ಕಳಿಗೆ ಇಡುವುದಿಲ್ಲ..ಅಷ್ಟೇ ಏಕೆ, ಮಾರುತಿ ಕಾರನ್ನೂ ಕೂಡ ಖರೀದಿಸುವುದಿಲ್ಲ. ಈ ಕಾರು ಖರೀದಿ ಮಾಡಿದರೆ ಅವರು ಯಾವುದಾದರೂ ದುರಂತಕ್ಕೀಡಾಗುತ್ತಾರೆ ಎಂಬುದು ಇಲ್ಲಿನ ಜನರ ನಂಬಿಕೆ. ನಿನ್ನೆ ಇಡೀ ದೇಶಾದ್ಯಂತ ಹಿಂದುಗಳು ಹನುಮಾನ್ ಜಯಂತಿ ಆಚರಣೆ ನಡೆಸಿದ್ದಾರೆ. ಆದರೆ ಈ ಹಳ್ಳಿಯಲ್ಲಿ ಆಚರಣೆ ಇರಲಿಲ್ಲ. ಒಟ್ಟಾರೆ ಹೇಳಬೇಕು ಎಂದರೆ ಹನುಮಾನ್ ದೇವರಿಗೆ ಸಂಬಂಧಪಟ್ಟ ಯಾವುದೇ ಆಚರಣೆಯನ್ನೂ ಮಾಡುವುದಿಲ್ಲ. ಆಂಜನೇಯನನ್ನು ನಂಬುವುದೂ ಇಲ್ಲ.
ಅಂದಹಾಗೇ, ಈ ಹಳ್ಳಿಯ ಹೆಸರು ದೈತ್ಯಾನಂದಪುರ. ಮಹಾರಾಷ್ಟ್ರದ ಅಹ್ಮದಾಬಾದ್ನಿಂದ 70ಕಿಮೀ ದೂರದಲ್ಲಿದೆ. ಹಳ್ಳಿಯ ಹೆಸರೇ ಹೇಳುವಂತೆ ಇವರೆಲ್ಲ ದೈತ್ಯನ ಅಂದರೆ ರಾಕ್ಷಸರ ಆರಾಧಕರು. ಹನುಮಂತನ ಬದಲಿಗೆ ನಿಂಬಾ ದೈತ್ಯ ಎಂಬ ರಾಕ್ಷಸನನ್ನು ಪೂಜಿಸುತ್ತಾರೆ. ಅದಕ್ಕೊಂದು ಕಾರಣವಿದೆ. ಹನುಮಂತ ರಾಮನ ಪರಮ ಭಕ್ತ. ಸೀತಾಮಾತೆಯನ್ನು ಹುಡುಕುತ್ತ ದಂಡಕಾರಣ್ಯವನ್ನು ಪ್ರವೇಶಿಸುತ್ತಾನೆ. ಆಗ ಈ ನಿಂಬಾ ದೈತ್ಯ ಎದುರಾಗಿ, ಇಬ್ಬರೂ ಹೊಡೆದಾಡುತ್ತಾರೆ. ಯಾರೂ ಸೋಲುವುದಿಲ್ಲ. ಬದಲಿಗೆ ಒಂದು ಹಂತದಲ್ಲಿ ಸುಸ್ತಾಗಿ ವಿಶ್ರಮಿಸುತ್ತಾರೆ. ಹಾಗೇ, ವಿಶ್ರಮಿಸುವ ಹೊತ್ತಲ್ಲಿ ಇವರಿಬ್ಬರ ಬಾಯಿಂದಲೂ ಶ್ರೀರಾಮ ಎಂಬ ಶಬ್ದ ಹೊರಬೀಳುತ್ತದೆ. ನಿಂಬಾ ರಾಕ್ಷಸನಾದರೂ ಶ್ರೀರಾಮನ ಭಕ್ತ ಎಂದು ತಿಳಿದ ಹನುಮಂತ ಸಂತೋಷಗೊಂಡು ಅವನಿಗೆ ಒಂದ ವರ ಕೊಡುತ್ತಾನೆ. ಆಗಿನಿಂದಲೂ ದಂಡಕಾರಣ್ಯದಲ್ಲಿ ನಿಂಬ ದೈತ್ಯನನ್ನೇ ಪೂಜಿಸಲಾಗುತ್ತಿದೆ. ಈ ಹಳ್ಳಿ ಅದೇ ಭಾಗದಲ್ಲಿ ಬರುವುದರಿಂದ ಇಂದಿಗೂ ಅಲ್ಲಿನ ಜನ ನಿಂಬಾ ರಾಕ್ಷಸನನ್ನು ಪೂಜಿಸುತ್ತಾರೆ.
ಅಂದಿನ ದಂಡಕಾರಣ್ಯ ಇರುವ ಜಾಗದಲ್ಲಿಯೇ ನಮ್ಮ ಹಳ್ಳಿಯಿದೆ. ಇಲ್ಲಿ ಒಂದೇ ಒಂದು ಆಂಜನೇಯನ ಗುಡಿಯಿಲ್ಲ. ಇಲ್ಯಾರೂ ಹನುಮನನ್ನು ಪೂಜಿಸುವುದೂ ಇಲ್ಲ. ಹನುಮಾನ್ ಚಾಲೀಸಾ ಪಠಿಸುವುದಿಲ್ಲ. ಹನುಮಂತನಿಗೆ ಸಂಬಂಧಪಟ್ಟ ಯಾವುದೇ ಪೂಜೆ, ಆಚರಣೆಯೂ ನಮ್ಮಲ್ಲಿಲ್ಲ ಎಂದು ದೈತ್ಯಾನಂದಪುರ ಗ್ರಾಮದ ಅಂಕುಶ್ ವಾಘ್ ಎಂಬುವರು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಇದನ್ನೂ ಓದಿ: ಕಿರುತೆರೆ ನಟನ ಜತೆ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ಆ್ಯಂಕರ್; ವೈರಲ್ ಆಯ್ತು ಫೋಟೋ