ನಮ್ಮ ಪ್ರಜಾಪ್ರಭುತ್ವ ರಾಷ್ಟ್ರ ಆಳಲ್ಪಡುತ್ತಿರುವುದು ಕಾನೂನುಗಳಿಂದ ಹೊರತು ಶಾಸ್ತ್ರಗಳಿಂದಲ್ಲ: ಉತ್ತರಾಖಂಡ ಹೈಕೋರ್ಟ್​

| Updated By: Lakshmi Hegde

Updated on: Jul 08, 2021 | 5:56 PM

Char Dham Yatra: ದೇಶದ ವಿವಿಧ ಭಾಗಗಳಿಂದ ಚಾರ್​ಧಾಮ್​ ಯಾತ್ರೆಗೆ ಹೋಗುವುದನ್ನು ಉತ್ತರಾಖಂಡ ಸರ್ಕಾರ ನಿಷೇಧಿಸಿದ್ದರೂ, ಸ್ಥಳೀಯ ಜಿಲ್ಲೆಗಳ ಜನರು ಯಾತ್ರೆಗೆ ಬರಬಹುದು ಎಂದು ಹೇಳಿತ್ತು. ಆದರೆ ಹೈಕೋರ್ಟ್ ಅದಕ್ಕೂ ತಡೆ ನೀಡಿತ್ತು.

ನಮ್ಮ ಪ್ರಜಾಪ್ರಭುತ್ವ ರಾಷ್ಟ್ರ ಆಳಲ್ಪಡುತ್ತಿರುವುದು ಕಾನೂನುಗಳಿಂದ ಹೊರತು ಶಾಸ್ತ್ರಗಳಿಂದಲ್ಲ: ಉತ್ತರಾಖಂಡ ಹೈಕೋರ್ಟ್​
ಉತ್ತರಾಖಂಡ ಹೈಕೋರ್ಟ್​
Follow us on

ದೆಹಲಿ: ನಮ್ಮ ಭಾರತ ದೇಶ ಕಾನೂನುಗಳಿಂದ ಆಳಲ್ಪಡುವ ಪ್ರಜಾಪ್ರಭುತ್ವ ದೇಶವೇ ಹೊರತು, ಶಾಸ್ತ್ರಗಳಿಂದ ಆಳಲ್ಪಡುವ ರಾಷ್ಟ್ರವಲ್ಲ ಎಂದು ಉತ್ತರಾಖಂಡ ಹೈಕೋರ್ಟ್ ಹೇಳಿದೆ. ಇತ್ತೀಚೆಗೆ ಚಾರ್​ಧಾಮ್​ ಧಾರ್ಮಿಕ ಯಾತ್ರೆಯನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದ ಹೈಕೋರ್ಟ್​, ನಾಲ್ಕು ಪವಿತ್ರ ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಭಕ್ತರಿಗೆ ಲೈವ್​ನಲ್ಲಿ ತೋರಿಸುವ ವ್ಯವಸ್ಥೆ ಮಾಡಿ ಎಂದು ಹೇಳಿತ್ತು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಡ್ವೋಕೇಟ್ ಜನರಲ್​ ಎಸ್​.ಎನ್​.ಬಬುಲ್ಕರ್​, ಧಾರ್ಮಿಕ ಆಚರಣೆಗಳನ್ನು ನೇರಪ್ರಸಾರ ಮಾಡುವುದನ್ನು ಶಾಸ್ತ್ರಗಳು ಅನುಮತಿಸುವುದಿಲ್ಲ ಎಂದಿದ್ದರು.
ಅಡ್ವೋಕೇಟ್​ ಜನರಲ್​ ಎಸ್​.ಎನ್​. ಬಬೂಲ್ಕರ್​​ ಅವರ ಈ ವಾದಕ್ಕೆ ಉತ್ತರಿಸಿದ ಹೈಕೋರ್ಟ್​, ನಮ್ಮ ಪ್ರಜಾಪ್ರಭುತ್ವ ದೇಶ ಭಾರತ ಕಾನೂನಿನಿಂದ ಆಳಲ್ಪಡುತ್ತಿದೆಯೇ ಹೊರತು ಶಾಸ್ತ್ರಗಳಿಂದಲ್ಲ ಎಂದು ಹೇಳಿದೆ.

ಪ್ರಸ್ತುತ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಆರ್.ಎಸ್​. ಚೌಹಾಣ್​ ಮತ್ತು ನ್ಯಾಯಮೂರ್ತಿ ಅಲೋಕ್​ ಕುಮಾರ್ ವರ್ಮಾ ನೇತೃತ್ವದ ಪೀಠ ನಡೆಸುತ್ತಿದೆ. ಕೊರೊನಾ ಸೋಂಕಿನ ಕಾರಣದಿಂದ ಈ ಬಾರಿ ಸ್ಥಳೀಯರಿಗೂ ಚಾರ್​ಧಾಮ್​ ಯಾತ್ರೆಗೆ ಅವಕಾಶ ನೀಡುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ. ಹಾಗೇ, ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡುವಂತಿಲ್ಲ ಎಂದು ಐಟಿ ಕಾಯ್ದೆಯಲ್ಲಿ ಎಲ್ಲಿಯಾದರೂ ಉಲ್ಲೇಖವಾಗಿದ್ದರೆ ತೋರಿಸಿ ಎಂದು ಅಡ್ವೋಕೇಟ್ ಜನರಲ್​ರನ್ನು ಪ್ರಶ್ನಿಸಿದೆ.

ದೇಶದ ವಿವಿಧ ಭಾಗಗಳಿಂದ ಚಾರ್​ಧಾಮ್​ ಯಾತ್ರೆಗೆ ಹೋಗುವುದನ್ನು ಉತ್ತರಾಖಂಡ ಸರ್ಕಾರ ನಿಷೇಧಿಸಿದ್ದರೂ, ಸ್ಥಳೀಯ ಜಿಲ್ಲೆಗಳ ಜನರು ಯಾತ್ರೆಗೆ ಬರಬಹುದು ಎಂದು ಹೇಳಿತ್ತು. ಆದರೆ ಹೈಕೋರ್ಟ್ ಅದಕ್ಕೂ ತಡೆ ನೀಡಿತ್ತು. ಭಕ್ತರಿಗೆ ನೇರಪ್ರಸಾರದ ಮೂಲಕ ಧಾರ್ಮಿಕ ಆಚರಣೆ ತೋರಿಸಿ ಎಂದು ಹೇಳಿತ್ತು.   ಅದಾದ ಬಳಿಕ ಸರ್ಕಾರದ ಪರ ಅಡ್ವೋಕೇಟ್ ಜನರಲ್​ ಹೈಕೋರ್ಟ್​ಗೆ ಒಂದು ಅರ್ಜಿ ಸಲ್ಲಿಸಿದ್ದರು. ಧಾರ್ಮಿಕ ಆಚರಣೆಗಳನ್ನು ನೇರಪ್ರಸಾರದಲ್ಲಿ ಭಕ್ತರಿಗೆ ತೋರಿಸಬೇಕೋ, ಬೇಡವೋ ಎಂಬುದನ್ನು ಆಯಾ ದೇವಸ್ಥಾನಗಳ ಮಂಡಳಿಗಳು ನಿರ್ಧಾರ ತೆಗೆದುಕೊಳ್ಳುತ್ತವೆ. ಹಿಂದು ಸಂಪ್ರದಾಯದಲ್ಲಿ ಧಾರ್ಮಿಕಾಚರಣೆಗಳ ನೇರಪ್ರಸಾರಕ್ಕೆ ಅನುಮತಿ ಇಲ್ಲ ಎಂದಿದ್ದರು. ಇದೀಗ ಚಾರ್​ಧಾಮ್ ಯಾತ್ರೆಗೆ ತಡೆ ನೀಡಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ ಉತ್ತರಾಖಂಡ ಸರ್ಕಾರ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

ಇದನ್ನೂ ಓದಿ: Modi 2.0 ಗರಿಷ್ಠ ಸರ್ಕಾರ-ಗರಿಷ್ಠ ಆಳ್ವಿಕೆ ತಂತ್ರ; ವಿದ್ಯಾರ್ಹತೆಗೆೆ ತಕ್ಕಂತೆ ಖಾತೆ ಹಂಚಿಕೆ -ಇದು ಮೋದಿ ಸಂಪುಟ ಪುನರ್ ರಚನೆಯ ಮಂತ್ರ

India ruled by law and not shastras, says Uttarakhand High Court