Modi Cabinet Reshuffle: ನೂತನ ಕ್ರೀಡಾ ಸಚಿವರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅಧಿಕಾರ ಸ್ವೀಕಾರ
ಮಾಜಿ ಹಣಕಾಸು ಸಚಿವ ಅನುರಾಗ್ ಠಾಕೂರ್ ಅವರನ್ನು ಕಿರೆನ್ ರಿಜಿಜು ಬದಲಿಗೆ ದೇಶದ ಹೊಸ ಕ್ರೀಡಾ ಸಚಿವರನ್ನಾಗಿ ಮಾಡಲಾಗಿದೆ. ಈ ಹೊಸ ಜವಾಬ್ದಾರಿಗಾಗಿ ಕಿರೆನ್ ರಿಜಿಜು ಅನುರಾಗ್ ಠಾಕೂರ್ ಅವರನ್ನು ಅಭಿನಂದಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಅವಧಿಗೆ ಬುಧವಾರ ಮೊದಲ ಸಂಪುಟ ಪುನರ್ ರಚನೆ ಮಾಡಲಾಗಿದೆ. ಕ್ರೀಡಾ ಸಚಿವಾಲಯವೂ ಈ ಪುನರ್ರಚನೆಯ ಒಂದು ಭಾಗವಾಗಿತ್ತು. ಟೋಕಿಯೊ ಒಲಿಂಪಿಕ್ಸ್ ಪ್ರಾರಂಭವಾಗುವುದಕ್ಕೆ ಕೇವಲ 16 ದಿನಗಳ ಮೊದಲು, ಮಾಜಿ ಹಣಕಾಸು ಸಚಿವ ಅನುರಾಗ್ ಠಾಕೂರ್ ಅವರನ್ನು ಕಿರೆನ್ ರಿಜಿಜು ಬದಲಿಗೆ ದೇಶದ ಹೊಸ ಕ್ರೀಡಾ ಸಚಿವರನ್ನಾಗಿ ಮಾಡಲಾಗಿದೆ. ಈ ಹೊಸ ಜವಾಬ್ದಾರಿಗಾಗಿ ಕಿರೆನ್ ರಿಜಿಜು ಅನುರಾಗ್ ಠಾಕೂರ್ ಅವರನ್ನು ಅಭಿನಂದಿಸಿದರು. ಅವರ ಮೇಲ್ವಿಚಾರಣೆಯಲ್ಲಿ ದೇಶದಲ್ಲಿ ಆಟದ ಅಭಿವೃದ್ಧಿ ಮುಂದುವರಿಯುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ರಿಜಿಜು ಅವರಿಗೆ ಕ್ರೀಡಾ ಸಚಿವಾಲಯದ ಜವಾಬ್ದಾರಿಯನ್ನು 2019 ರ ಮೇ ತಿಂಗಳಲ್ಲಿ ನೀಡಲಾಯಿತು. ರಿಜಿಜು ಅವರನ್ನು ಈಗ ಕೇಂದ್ರ ಸಚಿವರನ್ನಾಗಿ ಮಾಡಲಾಗಿದ್ದು, ಅವರು ಕಾನೂನು ಮತ್ತು ನ್ಯಾಯ ಸಚಿವಾಲಯದ ಉಸ್ತುವಾರಿ ವಹಿಸಲಿದ್ದಾರೆ. ಕಿರೆನ್ ರಿಜಿಜು ಅವರ ಅಧಿಕಾರಾವಧಿಯಲ್ಲಿ, ವಿದೇಶದಲ್ಲಿ ದೊಡ್ಡ ಕಾರ್ಯಕ್ರಮಗಳಿಗೆ ಹಾಜರಾಗಲು ಅಧಿಕಾರಿಗಳಿಗೆ ನಿಷೇಧವಿತ್ತು. ಆದರೆ ಅದೆಲ್ಲವನ್ನೂ ರಿಜಿಜೂ ಬಗೆಹರಿಸಿದರು. ಅದೇ ಸಮಯದಲ್ಲಿ, ಅವರು ಕ್ರೀಡಾ ಪ್ರಶಸ್ತಿಗಳಿಗೆ ನೀಡುವ ಬಹುಮಾನದ ಮೊತ್ತವನ್ನೂ ಹೆಚ್ಚಿಸಿದರು. ಅಲ್ಲದೆ ನಿವೃತ್ತ ಆಟಗಾರರಿಗೆ ಆರ್ಥಿಕವಾಗಿ ನಿರಂತರವಾಗಿ ಸಹಾಯ ಮಾಡುತ್ತಿದ್ದರು.
ರಿಜಿಜು ಅನುರಾಗ್ ಠಾಕೂರ್ ಅವರಿಗೆ ಶುಭ ಹಾರೈಸಿದರು ಕ್ರೀಡಾ ಸಚಿವರಾಗಿರುವ ಕೊನೆಯ ದಿನದಂದು ಕಿರೆನ್ ರಿಜಿಜು, ನಾವು ಕ್ರೀಡೆಯ ವಿಷಯದಲ್ಲಿ ಭಾರತವನ್ನು ಶ್ರೇಷ್ಠ ದೇಶವನ್ನಾಗಿ ಮಾಡಲು ಪ್ರಯತ್ನಿಸಿದ್ದೇವೆ. ಈ ಪ್ರಯಾಣ ಮುಂದುವರಿಯುತ್ತದೆ ಆದರೆ ಜವಾಬ್ದಾರಿಯನ್ನು ತೆಗೆದುಕೊಳ್ಳುವ ವ್ಯಕ್ತಿ ಬದಲಾಗುತ್ತಾನೆ. ನಾನು ಕಾನೂನು ಮತ್ತು ನ್ಯಾಯ ಸಚಿವಾಲಯದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ ಆದರೆ ಕ್ರೀಡಾ ಸಚಿವಾಲಯದ ಹೊಸ ತಂಡಕ್ಕೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.
ಅನುರಾಗ್ ಠಾಕೂರ್, ಬಿಸಿಸಿಐ ಮಾಜಿ ಅಧ್ಯಕ್ಷ ಭಾರತ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಮಾಜಿ ಅಧ್ಯಕ್ಷ ಠಾಕೂರ್ ಅವರಿಗೆ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜೊತೆಗೆ ಕ್ರೀಡಾ ಸಚಿವಾಲಯದ ಜವಾಬ್ದಾರಿಯನ್ನು ನೀಡಲಾಯಿತು. ಠಾಕೂರ್ (46 ವರ್ಷ) ಮೇ 2016 ಮತ್ತು ಫೆಬ್ರವರಿ 2017 ರ ನಡುವೆ ಬಿಸಿಸಿಐ ಅಧ್ಯಕ್ಷರಾಗಿದ್ದರು. ಇದಕ್ಕೂ ಮೊದಲು ಅವರು ಮಂಡಳಿಯ ಕಾರ್ಯದರ್ಶಿ ಮತ್ತು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಘದ (ಎಚ್‌ಪಿಸಿಎ) ಅಧ್ಯಕ್ಷರಾಗಿದ್ದರು. ಹಿಮಾಚಲ ಪ್ರದೇಶದ ಹಮೀರ್‌ಪುರದ ಸಂಸದ ಠಾಕೂರ್ ಅವರು ಬುಧವಾರ ಕ್ಯಾಬಿನೆಟ್ ಪುನರ್ರಚನೆಗೆ ಮುನ್ನ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ರಾಜ್ಯ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಸಹೋದರ ಅರುಣ್ ಧುಮಾಲ್ ಪ್ರಸ್ತುತ ಬಿಸಿಸಿಐ ಖಜಾಂಚಿಯಾಗಿದ್ದಾರೆ.
Published On - 6:29 pm, Thu, 8 July 21