ಜೋಹಾನ್ಸ್ಬರ್ಗ್: ನಮೀಬಿಯಾದಿಂದ ಎಂಟು ಚೀತಾಗಳು (Cheetahs from Namibia) ಭಾರತದ ಕಾಡಿಗೆ ಬಂದ ಕೆಲ ತಿಂಗಳಲ್ಲೇ ಇದೀಗ ಇನ್ನೂ ಬಹಳಷ್ಟು ಚೀತಾಗಳು ಆಫ್ರಿಕನ್ ನಾಡಿನಿಂದ ಭಾರತಕ್ಕೆ ಕಾಲಿಡಲಿವೆ. ಭಾರತಕ್ಕೆ 100ಕ್ಕೂ ಹೆಚ್ಚು ಚೀತಾಗಳನ್ನು ಕಳುಹಿಸುವ ಸಂಬಂಧ ಒಪ್ಪಂದ ಆಗಿದೆ ಎಂದು ದಕ್ಷಿಣ ಆಫ್ರಿಕಾ (South Africa) ನಿನ್ನೆ ಗುರುವಾರ ಹೇಳಿದೆ. ಅದರ ಪ್ರಕಾರ ಮುಂದಿನ ತಿಂಗಳು (ಫೆಬ್ರುವರಿ) 12 ಚೀತಾಗಳ ಮೊದಲ ಬ್ಯಾಚ್ ಭಾರತಕ್ಕೆ ಹೋಗಲಿವೆ ಎಂದು ಸೌತ್ ಆಫ್ರಿಕಾದ ಪರಿಸರ ಸಚಿವಾಲಯ ಹೇಳಿದೆ.
ಹರಿಣಗಳ ನಾಡಿನಿಂದ ಈ ಎಲ್ಲಾ ನೂರು ಚೀತಾಗಳೂ ಈ ವರ್ಷವೇ ಭಾರತಕ್ಕೆ ಬರುತ್ತವೆ ಎಂದಿಲ್ಲ. ಮುಂದಿನ ಬರುತ್ತಿರುವ 12 ಚೀತಾಗಳ ಒಂದು ಬ್ಯಾಚ್ನಂತೆ ಮುಂದಿನ ಏಳೆಂಟು ವರ್ಷಗಳಲ್ಲಿ ಪ್ರತೀ ವರ್ಷವೂ ಒಂದೊಂದು ಬ್ಯಾಚ್ನಂತೆ ಕರೆತರುವ ಯೋಜನೆ ಹಾಕಲಾಗಿದೆ. ಚೀತಾಗಳು ಹೊಂದಿಕೊಳ್ಳುವ ಪೂರಕ ಪರಿಸರವನ್ನು ಸೃಷ್ಟಿಸಬೇಕಾದ್ದರಿಂದ ಹಂತ ಹಂತವಾಗಿ ಅವುಗಳನ್ನು ಭಾರತಕ್ಕೆ ತರಲಾಗುತ್ತದೆ ಎಂಬ ಮಾಹಿತಿ ಇದೆ.
ಚಿರತೆಗಿಂತ ಭಿನ್ನ ಚೀತಾ
ಚಿರತೆ (Leopard) ಮತ್ತು ಚೀತಾ ಒಂದೇ ತೆರನಾದ ಪ್ರಾಣಿಗಳಾದರೂ ಕೆಲವಿಷ್ಟು ಬದಲಾವಣೆಗಳನ್ನು ಹೊಂದಿವೆ. ಚಿರತೆ ಭಾರತದಲ್ಲಿ ಸದ್ಯ ಹೇರಳವಾಗಿ ಕಾಣಸಿಗುತ್ತವೆ. ಚೀತಾಗಿಂತ ಇದು ದೊಡ್ಡ ಪ್ರಾಣಿ. ಆದರೆ, ಚೀತಾ ಸಣ್ಣದಾದರೂ ಬಹಳ ವೇಗವಾಗಿ ಓಡಬಲ್ಲ ಪ್ರಾಣಿ. ಭಾರತದಲ್ಲಿ ಈ ಹಿಂದೆ ಚೀತಾ ಅಸ್ತಿತ್ವದಲ್ಲಿತ್ತು. 1952ರಲ್ಲಿ ಇದರ ಸಂತತಿ ಭಾರತದಲ್ಲಿ ಕಣ್ಮರೆಯಾಗಿತ್ತು. ಈಗ ಆಫ್ರಿಕಾದಲ್ಲಿ ಇವು ಹೆಚ್ಚಿವೆ.
ಈಗ ಮತ್ತೆ ಭಾರತದಲ್ಲಿ ಚೀತಾ ಸಂಗತಿ ಬೆಳಸಬೇಕೆಂಬ ಪ್ರಯತ್ನಗಳಾಗುತ್ತಿವೆ. 2020ರಲ್ಲಿ ಸುಪ್ರೀಂ ಕೋರ್ಟ್ ಕೂಡ ಇದಕ್ಕೆ ಷರತ್ತುಬದ್ಧ ಸಮ್ಮತಿ ನೀಡಿತ್ತು. ಚೀತಾ ಹೊಂದಿಕೊಳ್ಳಲು ಪೂರಕ ಪರಿಸರ ರೂಪಿಸಬೇಕೆಂಬುದು ಷರತ್ತು. ಅದರಂತೆ ನಮೀಬಿಯಾದಿಂದ ಕಳೆದ ವರ್ಷ 8 ಚೀತಾಗಳನ್ನು ಭಾರತಕ್ಕೆ ತರಲಾಯಿತು. ಮಧ್ಯಪ್ರದೇಶದ ಕೂನೋ ನ್ಯಾಷನಲ್ ಪಾರ್ಕ್ನಲ್ಲಿ ಇವುಗಳನ್ನು ಬಿಡಲಾಗಿದೆ. ಇವುಗಳು ಬೇಟೆಯಾಡಿ ತಿನ್ನುವ ಜಿಂಕೆ ಇತ್ಯಾದಿ ಪ್ರಾಣಿಗಳು ಹೇರಳವಾಗಿರುವ ಪರಿಸರ ಇಲ್ಲಿದೆ. ಒಂದು ಚೀತಾ ಇತ್ತೀಚೆಗೆ ಅಸ್ವಸ್ಥಗೊಂಡಿರುವುದು ಬಿಟ್ಟರೆ ಆ ಬಹುತೇಕ ಕಾಡುಮೃಗಗಳು ಹೊಂದಿಕೊಂಡಿವೆ. ಹುಲಿ, ಚಿರತೆ ಇತ್ಯಾದಿ ಪ್ರಾಣಿಗಳಿಂದ ಚೀತಾಗೆ ಪ್ರಾಣಾಪಾಯ ಉಂಟಾಗಬಹುದು ಎಂಬ ಆರಂಭಿಕ ಭೀತಿ ಈಗ ತುಸು ಕಡಿಮೆಯಾಗಿದೆ. ಹೊಸ ಪರಿಸರಕ್ಕೆ ನಮೀಬಿಯಾ ಚೀತಾಗಳು ಬಹುತೇಕ ಹೊಂದಿಕೊಂಡಂತಿವೆ ಎಂಬುದು ಕೆಲ ವರದಿಗಳಿಂದ ತಿಳಿದುಬಂದಿದೆ.
ಇದೇ ಧೈರ್ಯದಲ್ಲಿ ಈಗ ದಕ್ಷಿಣ ಆಫ್ರಿಕಾದಿಂದ ನೂರು ಚೀತಾಗಳನ್ನು ತರುವ ಪ್ರಯತ್ನಕ್ಕೆ ಭಾರತ ಸರ್ಕಾರ ಮುಂದಾಗಿದೆ. ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಭಾರತಕ್ಕೆ ತರುವ ಯೋಜನೆ ಬಹಳ ದಿನಗಳಿಂದ ಇತ್ತು. ನಮೀಬಿಯಾಗಿಂತ ಮುಂಚೆಯೇ ಸೌತ್ ಆಫ್ರಿಕಾದಿಂದ ಚೀತಾಗಳು ಬರುವುದಿತ್ತು. ಕಳೆದ ವರ್ಷದ ಆಗಸ್ಟ್ನಲ್ಲೇ ಅಲ್ಲಿಂದ ಬರಬೇಕಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಒಪ್ಪಂದ ಆಗಿದೆ. ದಕ್ಷಿಣ ಆಫ್ರಿಕಾದಿಂದ ಬರುವ ಚೀತಾಗಳನ್ನು ಯಾವ ಕಾಡಿನಲ್ಲಿ ಬಿಡಬೇಕು ಎಂಬುದು ನಿರ್ಧಾರವಾಗಿಲ್ಲ. ಕೂನೋ ನ್ಯಾಷನಲ್ ಪಾರ್ಕ್ ರೀತಿಯಲ್ಲೇ ಚೀತಾಗೆ ಬೇಟೆಯಾಡಲು ಅನುಕೂಲವಾಗುವಂತಹ ಪರಿಸರ ಇರುವ ಕಾಡುಗಳನ್ನು ಪರಿಶೀಲಿಸಲಾಗುತ್ತಿದೆ.