ಶ್ರೀನಗರ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ನೀಡಿದ್ದ ಗಿಲ್ಗಿಟ್- ಬಾಲ್ಟಿಸ್ತಾನ್ಗೆ ಮರು ವಶಕ್ಕೆ ಸಂಬಂಧಿಸಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಡಿಎಸ್ ಔಜ್ಲಾ, ಭಾರತೀಯ ಸೇನೆ ಸಕಲ ರೀತಿಯಿಂದಲೂ ಸಿದ್ಧವಾಗಿದೆ. ನಾವು ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.
ಕದನ ವಿರಾಮವನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ನಾವು ದಿನನಿತ್ಯ ನೋಡುತ್ತಿರುವ ಈ ಕದನ ವಿರಾಮ ಮತ್ತು ಸಾಮಾನ್ಯತೆಯ ಹಂತವನ್ನು ಉಳಿಸಿಕೊಳ್ಳುವುದು ನಮಗೆ ಸವಾಲಾಗಿದೆ. ಕಳೆದ 20 ತಿಂಗಳಲ್ಲಿ ಭಾರತೀಯ ಸೇನೆಯ ಸಿದ್ಧತೆ ಉತ್ತಮ ಮಟ್ಟದಲ್ಲಿದೆ. ನಾವು ನಮ್ಮ ಸಾಮರ್ಥ್ಯ ಮತ್ತು ತಯಾರಿಯನ್ನು ಪ್ರದರ್ಶಿಸಲು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಡಿಎಸ್ ಔಜ್ಲಾ ಹೇಳಿದ್ದಾರೆ.
ಶ್ರೀನಗರದಲ್ಲಿ ನಡೆದ ಶೌರ್ಯ ದಿವಸ್ ಕಾರ್ಯಕ್ರಮದಲ್ಲಿ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನವು ತಾನು ಆಕ್ರಮಿಸಿಕೊಂಡ ಕಾಶ್ಮೀರದ ಭಾಗದುದ್ದಕ್ಕೂ ಜನರ ಮೇಲೆ ದೌರ್ಜನ್ಯಗಳನ್ನು ಎಸಗುತ್ತಿದ್ದು, ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗಗಳಾಗಿರುವ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್‌ಗಳನ್ನು ತಲುಪಿದ ಬಳಿಕ ಅವಳಿ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗಳ ಒಟ್ಟಾರೆ ಅಭಿವೃದ್ಧಿಯ ನಮ್ಮ ಗುರಿಯನ್ನು ತಲುಪಿದಂತಾಗುತ್ತದೆ ಎಂದಿದ್ದರು.
ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಂದ ಕರಾಳ ದಿನಾಚರಣೆ: ಭಾರತ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ
ನಾವು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಅಭಿವೃದ್ಧಿಯ ಪಯಣವನ್ನು ಈಗಷ್ಟೇ ಆರಂಭಿಸಿದ್ದೇವೆ. ನಾವು ಗಿಲ್ಗಿಟ್ ಮತ್ತು ಬಾಲ್ಟಿಸ್ತಾನಗಳನ್ನು ತಲುಪಿದಾಗ ನಮ್ಮ ಗುರಿಯನ್ನು ಸಾಧಿಸುತ್ತೇವೆ. ಭಯೋತ್ಪಾದನೆಗೆ ಧರ್ಮವಿಲ್ಲ. ಭಯೋತ್ಪಾದಕರ ಒಂದೇ ಗುರಿಯೆಂದರೆ ಭಾರತವನ್ನು ಟಾರ್ಗೆಟ್ ಮಾಡುವುದು. ಪಾಕಿಸ್ತಾನದ ಕೈಯಲ್ಲಿ ಶೋಷಣೆಗೆ ಒಳಪಡುವ ಮತ್ತು ತಮ್ಮ ಹಕ್ಕುಗಳನ್ನು ಕಳೆದುಕೊಂಡಿರುವ ಪಿಒಕೆ ನಿವಾಸಿಗಳ ನೋವು ನಮಗೆ ಅರ್ಥವಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದರು.
ಕಾಶ್ಮೀರ ಮತ್ತು ಲಡಾಖ್ ಅಭಿವೃದ್ಧಿ ಹಾಗೂ ಸಮೃದ್ಧಿಯ ಹೊಸ ಮಾರ್ಗದಲ್ಲಿವೆ. ಇದು ಕೇವಲ ಆರಂಭವಷ್ಟೇ. ಗಿಲ್ಗಿಟ್ ಬಾಲ್ಟಿಸ್ತಾನ್ ಹಾಗೂ ಪಿಒಕೆ ಪ್ರದೇಶಗಳು ಭಾರತದೊಂದಿಗೆ ಮರಳಿ ಸೇರಿದಾಗ ಯೋಜನೆ ಪೂರ್ಣಗೊಳ್ಳುತ್ತದೆ. 1947ರ ನಿರಾಶ್ರಿತರು ತಮ್ಮ ಭೂಮಿಯನ್ನು ಹಾಗೂ ಮನೆಗಳನ್ನು ಮರಳಿ ಪಡೆದಾಗ ನ್ಯಾಯ ಸಲ್ಲಿಕೆಯಾಗುತ್ತದೆ. ಆ ಸಮಯ ಹೆಚ್ಚು ದೂರವಿಲ್ಲ ಎಂದು ಪಿಒಕೆಯನ್ನು ಮರಳಿ ಸ್ವಾಧೀನ ಪಡಿಸಿಕೊಳ್ಳುವ ಸುಳಿವನ್ನು ರಾಜನಾಥ್ ಸಿಂಗ್ ನೀಡಿದ್ದರು.
ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯುವುದರ ಬಗ್ಗೆ ಸುಳಿವು ನೀಡಿದ ರಾಜನಾಥ್ ಸಿಂಗ್
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಡಿಎಸ್ ಔಜ್ಲಾ, ಕೇಂದ್ರ ಸರ್ಕಾರವು ಅಂತಹ ನಿರ್ಧಾರವನ್ನು ತೆಗೆದುಕೊಂಡಾಗ ನಮಗೆ ಆದೇಶ ಬರುತ್ತದೆ. ಅಂತಹ ಪರಿಸ್ಥಿತಿಯನ್ನು ಎದುರಿಸಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಕಳೆದ 75 ವರ್ಷಗಳಲ್ಲಿ ಭಾರತೀಯ ಸೇನೆಯ ಸಾಮರ್ಥ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದಿದ್ದಾರೆ.
ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ಔಜ್ಲಾ, “ಸದ್ಯ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ, ಆದರೆ ಅವಕಾಶ ಸಿಕ್ಕಾಗಲೆಲ್ಲಾ ಒಳನುಸುಳಲು ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಗಡಿಯನ್ನು ರಕ್ಷಿಸಲು ಭಾರತೀಯ ಸೇನೆಯು ಸಂಪೂರ್ಣ ಬಲದೊಂದಿಗೆ ಸಿದ್ಧವಾಗಿದೆ” ಎಂದು ಹೇಳಿದ್ದಾರೆ.