Wayanad Landslide: ವಯನಾಡು ಭೂಕುಸಿತದಲ್ಲಿ 104 ಜನ ಸಾವು; ಒಗ್ಗಟ್ಟಾಗಿ ರಕ್ಷಣಾ ಕಾರ್ಯಾಚರಣೆಗೆ ಕೇರಳ ಸಿಎಂ ಕರೆ

|

Updated on: Jul 30, 2024 | 9:34 PM

Kerala Flood: ಕೇರಳದ ವಯನಾಡಿನಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಈ ದುರಂತದಲ್ಲಿ ಈಗಾಗಲೇ 104 ಜನರು ಸಾವನ್ನಪ್ಪಿದ್ದು, ನೂರಾರು ಜನರು ಪ್ರವಾಹ ಹಾಗೂ ಭೂಕುಸಿತದಲ್ಲಿ ಸಿಲುಕಿದ್ದಾರೆ. ಇದನ್ನು 2018ರ ಬಳಿಕ ಅತ್ಯಂತ ಭೀಕರ ಪ್ರವಾಹ ಎಂದಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಎಲ್ಲರೂ ಒಗ್ಗಟ್ಟಾಗಿ ಈ ಪ್ರಾಕೃತಿಕ ದುರಂತವನ್ನು ಎದುರಿಸಲು ಕರೆ ನೀಡಿದ್ದಾರೆ.

Wayanad Landslide: ವಯನಾಡು ಭೂಕುಸಿತದಲ್ಲಿ 104 ಜನ ಸಾವು; ಒಗ್ಗಟ್ಟಾಗಿ ರಕ್ಷಣಾ ಕಾರ್ಯಾಚರಣೆಗೆ ಕೇರಳ ಸಿಎಂ ಕರೆ
ವಯನಾಡು ಭೂಕುಸಿತ
Follow us on

ವಯನಾಡು: ಮತ್ತೊಮ್ಮೆ ಕೇರಳದ ವಯನಾಡು ಪ್ರವಾಹದ ಭೀಕರತೆಗೆ ಸಾಕ್ಷಿಯಾಗಿದೆ. ಈಗಾಗಲೇ 104 ಜನ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನೂ ಏರುವ ಸಾಧ್ಯತೆಗಳಿವೆ. ನೂರಾರು ಜನರು ಮನೆಗಳಡಿ, ನದಿಯಲ್ಲಿ ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಈಗಾಗಲೇ ಭಾರತೀಯ ಸೇನೆ ಕೂಡ ವಯನಾಡ್ ಪಾರುಗಾಣಿಕಾ ಕಾರ್ಯಾಚರಣೆಯಲ್ಲಿ ಜೊತೆಯಾಗಿದೆ.

ವಯನಾಡು ಪ್ರವಾಹ ಹಾಗೂ ಭೂಕುಸಿತದ ಪರಿಸ್ಥಿತಿ ಅವಲೋಕಿಸಲು ಕೇರಳ ಸಿಎಂ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತವು ಈಗಾಗಲೇ ಕನಿಷ್ಠ 104 ಜನರನ್ನು ಬಲಿ ತೆಗೆದುಕೊಂಡಿದೆ. ಕೇರಳ ಸರ್ಕಾರ ಇಂದು ಮತ್ತು ನಾಳೆ ರಾಜ್ಯದಲ್ಲಿ ಶೋಕಾಚರಣೆಯನ್ನು ಘೋಷಿಸಿದೆ.


ಇಂದು ಮುಂಜಾನೆ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಭೂಕುಸಿತಗಳು ಸಂಭವಿಸಿದ ಮಳೆಯಿಂದಾಗಿ ಕೇರಳದ ವಯನಾಡಿನಲ್ಲಿ ಭಾರತೀಯ ಸೇನೆಯ ತಂಡವನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಭಾರತೀಯ ಸೇನೆಯು ಎನ್‌ಡಿಆರ್‌ಎಫ್ ಮತ್ತು ಇತರ ಏಜೆನ್ಸಿಗಳೊಂದಿಗೆ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಇದನ್ನೂ ಓದಿ: ಕರ್ನಾಟಕದಲ್ಲೂ ಪ್ರವಾಹ, ಭೂಕುಸಿತ: ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

ಭಾರತೀಯ ಸೇನೆಯು ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಕಾರ್ಯಾಚರಣೆಗಾಗಿ ಈಗಾಗಲೇ ನಿಯೋಜಿಸಲಾದ ಸುಮಾರು 225 ಸಿಬ್ಬಂದಿಯ ಹೊರತಾಗಿ, ಕನಿಷ್ಠ 140 ಸಿಬ್ಬಂದಿಗಳನ್ನು ಒಳಗೊಂಡಿರುವ ಇನ್ನೂ ಎರಡು ತಂಡಗಳನ್ನು ತಿರುವನಂತಪುರಂನಲ್ಲಿ ತುರ್ತು ಸಂದರ್ಭದಲ್ಲಿ ಏರ್​ಲಿಫ್ಟ್ ಮಾಡಲು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ.


HADR ಪ್ರಯತ್ನಗಳನ್ನು ಸಂಘಟಿಸಲು ಸೇನೆಯು ಕೋಝಿಕ್ಕೋಡ್‌ನಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಸ್ಥಾಪಿಸುತ್ತಿದೆ. ಹಾನಿಗೊಳಗಾದ ಪ್ರದೇಶದ ಹೆಲಿಕಾಪ್ಟರ್ ವಿಚಕ್ಷಣವನ್ನು ಕೈಗೊಳ್ಳಲಾಗುತ್ತಿದೆ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಹಾನಿಯ ಮೌಲ್ಯಮಾಪನವನ್ನು ಕೈಗೊಳ್ಳಲಾಗುತ್ತಿದೆ.


ವಯನಾಡಿಗೆ ಬರಬೇಡಿ; ಸಿಎಂ ಮನವಿ

ಅನಿವಾರ್ಯ ಪರಿಸ್ಥಿತಿಯ ಹೊರತು ವಯನಾಡಿಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಸಿಎಂ ಪಿಣರಾಯಿ ವಿಜಯನ್ ಜನರಿಗೆ ಮನವಿ ಮಾಡಿದ್ದಾರೆ. ವಯನಾಡಿನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತವು ಈಗಾಗಲೇ ಕನಿಷ್ಠ 98 ಜನರನ್ನು ಬಲಿ ತೆಗೆದುಕೊಂಡ ನಂತರ, ಕೇರಳ ಸರ್ಕಾರವು ಇಂದು ಎರಡು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆಯನ್ನು ಘೋಷಿಸಿದೆ. ಶಿಷ್ಟಾಚಾರದ ಪ್ರಕಾರ, ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಇಡಲಾಗುತ್ತದೆ ಮತ್ತು ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳನ್ನು ರದ್ದುಗೊಳಿಸಲಾಗುತ್ತದೆ.

ಇದನ್ನೂ ಓದಿ: Wayanad Landslide: ಭೂಕುಸಿತ ಪೀಡಿತ ಕೇರಳದ ವಯನಾಡಿಗೆ ನಾಳೆ ರಾಹುಲ್ ಗಾಂಧಿ, ಪ್ರಿಯಾಂಕಾ ಭೇಟಿ

ವಯನಾಡ್‌ಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಮುಖ್ಯಮಂತ್ರಿಗಳು ಜನರನ್ನು ಒತ್ತಾಯಿಸಿದ್ದಾರೆ. ”ಕೇರಳ ಬ್ಯಾಂಕ್ ಈಗಾಗಲೇ ಸಿಎಂಡಿಆರ್‌ಎಫ್‌ಗೆ 50 ಲಕ್ಷ ರೂ., ಸಿಕ್ಕಿಂ ಮುಖ್ಯಮಂತ್ರಿ 2 ಕೋಟಿ ರೂ., ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ 5 ಕೋಟಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ,” ಎಂದು ಪರಿಹಾರದ ಬಗ್ಗೆ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.


ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳನ್ನು ಕೂಡ ಸಜ್ಜುಗೊಳಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ. ಈ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದ ಕಾರಣ ರಕ್ಷಣಾ ಪ್ರಯತ್ನಗಳು ಸವಾಲಾಗಿಯೇ ಉಳಿದಿವೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:09 pm, Tue, 30 July 24