ಕೊರೊನಾ ಹಿಮ್ಮೆಟ್ಟಿಸುವ ಪ್ರಯೋಗ ಮೊದಲು ಶುರುಮಾಡಿದ್ದೇ ಭಾರತೀಯ ವೈದ್ಯರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 02, 2021 | 7:58 PM

Corona Vaccination: ಸ್ಟಿರಾಯ್ಡ್ಸ್ ಮೂಲಕ ಕೊರೊನಾ ಸೋಂಕಿತರ ಜೀವ ಉಳಿಸಲು ಸಾಧ್ಯ ಎಂದು ಬ್ರಿಟನ್ ತಜ್ಞರು ಹೇಳುವುದಕ್ಕೂ ಮುಂಚೆಯೇ ಭಾರತೀಯ ವೈದ್ಯರು ಆ ಪ್ರಯೋಗವನ್ನು ಮಾಡಿಯಾಗಿತ್ತು. ಮಲೇರಿಯಾ ರೋಗ ನಿವಾರಣೆಗೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್​ ಪ್ರಯೋಗದ ವಿಚಾರದಲ್ಲೂ ಭಾರತದ ವೈದ್ಯರೇ ಎಲ್ಲರಿಗಿಂತ ಮುಂದಿದ್ದರು.

ಕೊರೊನಾ ಹಿಮ್ಮೆಟ್ಟಿಸುವ ಪ್ರಯೋಗ ಮೊದಲು ಶುರುಮಾಡಿದ್ದೇ ಭಾರತೀಯ ವೈದ್ಯರು
ಸಾಂದರ್ಭಿಕ ಚಿತ್ರ
Follow us on

ಭಾರತಕ್ಕೆ ಕೊರೊನಾ ವೈರಾಣು ಕಾಲಿಟ್ಟು ಭರ್ತಿ ಒಂದು ವರ್ಷ ಆಗಿದೆ. ಅಂದಿನಿಂದ ಇಂದಿನವರೆಗೆ ದೇಶದ ವಿಜ್ಞಾನಿಗಳು, ವೈದ್ಯಕೀಯ ಕ್ಷೇತ್ರದ ತಜ್ಞರು, ವೈದ್ಯರು, ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಈ ವೈರಾಣುವನ್ನು ಹಿಮ್ಮೆಟ್ಟಿಸಲು ಶ್ರಮಿಸುತ್ತಲೇ ಇದ್ದಾರೆ. ಈಗೇನೋ ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಕೊರೊನಾ ಲಸಿಕೆಯ ಸಹಾಯದೊಂದಿಗೆ ವೈರಾಣು ನಿರ್ಮೂಲನೆಗೆ ಹೋರಾಡುತ್ತಿವೆ. ಆದರೆ, ಯಾವುದೇ ಮುನ್ಸೂಚನೆ ಇಲ್ಲದೇ ಕೊರೊನಾ ಹಬ್ಬಲಾರಂಭಿಸಿದಾಗ ಬಹುತೇಕ ಎಲ್ಲಾ ರಾಷ್ಟ್ರಗಳೂ ಖಾಲಿ ಕೈಯಲ್ಲಿ ಕುಳಿತಿದ್ದವು. ಯಾವ ಔಷಧಿ ಕೊಟ್ಟರೆ ಜನರನ್ನು ಗುಣಪಡಿಸಬಹುದು, ಜೀವ ಉಳಿಸಿಕೊಳ್ಳಬಹುದು ಎಂದು ಚಿಂತೆಗೆ ಬಿದ್ದಿದ್ದವು. ಅಂತಹ ವಿಷಮ ಸಂದರ್ಭದಲ್ಲಿ ಭಾರತೀಯ ವೈದ್ಯರು ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ಪ್ರಯೋಗಕ್ಕೆ ಇಳಿದೇ ಬಿಟ್ಟಿದ್ದರು ಎಂಬ ವಿಚಾರವನ್ನು ಏಮ್ಸ್ (AIIMS) ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರಂಭಿಕ ಹಂತದಲ್ಲಿ ಸ್ಟಿರಾಯ್ಡ್ಸ್ ಮೂಲಕ ಕೊರೊನಾ ಸೋಂಕಿತರ ಜೀವ ಉಳಿಸಲು ಸಾಧ್ಯ ಎಂದು ಬ್ರಿಟನ್ ತಜ್ಞರು ಹೇಳುವುದಕ್ಕೂ ತುಂಬಾ ಮುಂಚೆಯೇ ಭಾರತೀಯ ವೈದ್ಯರು ಆ ಪ್ರಯೋಗವನ್ನು ಮಾಡಿಯಾಗಿತ್ತು. ಮಲೇರಿಯಾ ರೋಗ ನಿವಾರಣೆಗೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್​ ಬಳಸಿ ಪ್ರಯೋಗ ನಡೆಸಿದ ವಿಚಾರದಲ್ಲೂ ಭಾರತದ ವೈದ್ಯರೇ ಎಲ್ಲರಿಗಿಂತ ಮುಂದಿದ್ದರು. ಆದರೆ, ಬೇರೆ ಬೇರೆ ದೇಶಗಳು ನಂತರ ನಡೆಸಿದ ಪ್ರಯೋಗದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅಷ್ಟೇನು ಪರಿಣಾಮಕಾರಿಯಲ್ಲ ಎಂಬ ಅಂಶ ಕಂಡುಬಂದಿದ್ದರಿಂದ ಅದನ್ನು ಅಲ್ಲಿಯೇ ಕೈ ಬಿಡಲಾಯಿತು ಎಂದು ತಿಳಿಸಿದ್ದಾರೆ.

ಇನ್ನು ಈ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಮುನ್ನ ಮೂರು ಮುಖ್ಯ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿತ್ತು. ವೈರಾಣುವಿನ ಪ್ರಭಾವ ಕುಗ್ಗಿಸುವುದು, ಸೈಟೋಕಿನ್ ಅಂಶದ ಅಡ್ಡಪರಿಣಾಮ ತಡೆಗಟ್ಟುವುದು ಹಾಗೂ ರಕ್ತ ಹೆಪ್ಪುಗಟ್ಟುವಿಕೆ ತಡೆಯುವುದನ್ನು ಗಮನದಲ್ಲಿರಿಸಿಕೊಂಡು ಚಿಕಿತ್ಸೆ ನೀಡುವುದಾಗಿತ್ತು ಎಂಬ ವಿಚಾರವೂ ತಿಳಿದುಬಂದಿದೆ. ಈ ಬಗ್ಗೆ ಮ್ಯಾಕ್ಸ್​ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ.ಸಂದೀಪ್​ ಬುಧಿರಾಜ ಹೇಳುವಂತೆ ಭಾರತದಲ್ಲಿ ಕೊರೊನಾ ಅಬ್ಬರವನ್ನು ತಡೆ ಹಿಡಿಯಲು ಅನೇಕ ತೆರನಾದ ಪ್ರಯೋಗಗಳನ್ನು ನಡೆಸಲಾಯಿತು. ಪ್ಲಾಸ್ಮಾ ಥೆರಪಿಯನ್ನು ಸಹ ಪ್ರಯೋಗಿಸಲಾಯಿತು. ಅದನ್ನು ನಂತರ ಹೆಚ್ಚಾಗಿ ಮುಂದುವರೆಸಲಿಲ್ಲವಾದರೂ ಥೆರಪಿಯ ಪರಿಣಾಮಗಳು ಧನಾತ್ಮಕವಾಗಿಯೇ ಇವೆ ಎನ್ನುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ. ಅಂತೆಯೇ ದೇಶದ ವಿವಿಧ ಭಾಗದ ತಜ್ಞರು ಸಹ ಇದೇ ತೆರನಾಗಿ ಭಾರತೀಯ ವೈದ್ಯರ ಪ್ರಯೋಗಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ:
ಕೊರೊನಾ ಲಸಿಕೆ ಹಾಕಿಸಿಕೊಂಡ 102 ವರ್ಷದ ನಿವೃತ್ತ ಸೇನಾಧಿಕಾರಿ ನೀಡಿದ 2 ಕಾರಣಗಳಿವು

Covid 19 Vaccination: ಕೊರೊನಾ ಲಸಿಕೆಗೆ ‘ತೋಳು ಮಡಚಿದ’ ಆರೋಗ್ಯ ಸಚಿವ ಡಾ.ಹರ್ಷವರ್ಧನ್​, ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ