ಸಿಸಿಟಿವಿ ಕ್ಯಾಮರಾಗಳನ್ನು ಹೆಚ್ಚಾಗಿ ಎಲ್ಲೆಲ್ಲಿ ಬಳಸಬಹದು? ರಸ್ತೆಗಳಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರನ್ನು ಪತ್ತೆ ಹಚ್ಚಲು, ಬಹುತೇಕ ಎಲ್ಲ ಕಚೇರಿಗಳು, ಕಂಪನಿ, ಅಂಗಡಿಗಳಲ್ಲಿ ಯಾವುದೇ ರೀತಿಯ ಕಳ್ಳತನ ಮತ್ತಿತರ ಅಪರಾಧಗಳನ್ನು ತಪ್ಪಿಸಲು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ. ಈಗಂತೂ ಬಹುತೇಕ ಮನೆಗಳಲ್ಲೂ ಕ್ಯಾಮರಾ ಫಿಕ್ಸ್ ಮಾಡಿರುತ್ತಾರೆ. ಆದರೆ ಚತ್ತೀಸ್ಗಢ್ದಲ್ಲಿ ರೈತರು ಹಸುಗಳ ಸಗಣಿಯ ರಕ್ಷಣೆಗಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ ! ಇದೇನು ಹಸುವಿನ ಸಗಣಿಗೆ ಸಿಸಿಟಿವಿ ಕ್ಯಾಮರಾ ಕಣ್ಗಾವಲಾ? ಯಾಕೆ ಹೀಗೆ ಮಾಡ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ .. ಉತ್ತರ ತಿಳಿಯಲು ಈ ಸ್ಟೋರಿ ಓದಿ..
ಚತ್ತೀಸ್ಗಢ್ ಸರ್ಕಾರ 2020ರಲ್ಲಿ ಗೋಧನ್ ನಯಾ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಯಡಿ ಸರ್ಕಾರ ರೈತರು ಮತ್ತು ಪಶುಸಂಗೋಪನೆ ಮಾಡುತ್ತಿರುವವರಿಂದ ಹಸುವಿನ ಸಗಣಿಯನ್ನು ಕೆಜಿಗೆ 2 ರೂ.ನಂತೆ ಖರೀದಿ ಮಾಡುತ್ತಿದೆ. ಹೀಗೆ ಖರೀದಿ ಮಾಡಿದ ಸಗಣಿಯನ್ನು ಕೆಲವು ಸಹಕಾರಿ ಸಂಘಗಳಿಗೆ ನೀಡಲಾಗುತ್ತವೆ. ಅವು ಅದನ್ನು ವರ್ಮಿಕಾಂಪೋಸ್ಟ್ ಆಗಿ ಬದಲಿಸಿ ಅಗತ್ಯ ಇರುವ ರೈತರಿಗೆ ಮಾರಾಟ ಮಾಡುತ್ತವೆ. ವರ್ಮಿಕಾಂಪೋಸ್ಟ್ ತಯಾರಿಕೆಗಾಗಿ ಸಹಕಾರಿ ಸಂಘಗಳಿಗೆ ಸರ್ಕಾರದಿಂದ ಸಾಲವನ್ನೂ ಕೂಡ ನೀಡಲಾಗುತ್ತದೆ. ಹಾಗಾಗಿ ಇದೀಗ ಚತ್ತೀಸ್ಗಢ್ದಲ್ಲಿ ಸಗಣಿಗೆ ಭರ್ಜರಿ ಬೇಡಿಕೆಯಿದ್ದು, ಅಮೂಲ್ಯ ವಸ್ತುಗಳಲ್ಲಿ ಒಂದಾಗಿ ಬದಲಾಗಿದೆ. ಇದೇ ಕಾರಣಕ್ಕೆ ಸಗಣಿಯ ಕಳ್ಳತನವೂ ಹೆಚ್ಚಾಗಿದೆ.
ರೈತರಿಂದ ಸಗಣಿಯನ್ನು ಸ್ಥಳೀಯ ಪುರಸಭೆ, ತಾಲೂಕು ಆಡಳಿತಾಧಿಕಾರಿಗಳು ಖರೀದಿಸುತ್ತಾರೆ. ಖರೀದಿಸಿದ ಸಗಣಿಯನ್ನು ಸಂಗ್ರಹಿಸಿಡಲು ಗೋದಾಮುಗಳನ್ನೂ ನಿರ್ಮಿಸಲಾಗಿದೆ. ಆದರೆ ಈ ಗೋದಾಮುಗಳಿಂದಲೇ ಸಗಣಿ ನಾಪತ್ತೆಯಾಗುತ್ತಿರುವುದು ದೊಡ್ಡತಲೆನೋವಾಗಿ ಪರಿಣಮಿಸಿದೆ. ಇತ್ತೀಚೆಗೆ ಅಂಬಿಕಾಪುರ ಪುರಸಭೆಯ ಗೋಡೋನ್ನಲ್ಲಿದ್ದ ಸುಮಾರು 45 ಕೆಜಿ ಸಗಣಿಯನ್ನು ಐವರು ಮಹಿಳೆಯರು ಕಳವು ಮಾಡಿ, ಸಿಕ್ಕಿಬಿದ್ದಿದ್ದರು. ಹಾಗಾಗಿ ಸ್ಥಳೀಯ ಆಡಳಿತಾಧಿಕಾರಿಗಳು ಸಂಗ್ರಹವಾದ ಸಗಣಿ ಮೇಲೆ ಬಲವಾದ ಕಣ್ಗಾವಲು ಇಡಲು ನಿರ್ಧರಿಸಿದ್ದಾರೆ. ಗೋದಾಮುಗಳಲ್ಲಿ ಸಿಸಿಟಿವಿ ಕ್ಯಾಮರಾವನ್ನೂ ಅಳವಡಿಸಿದ್ದಾರೆ. ರಾಜ್ಯಾದ್ಯಂತ ಬಹುತೇಕ ಎಲ್ಲ ಸಗಣಿ ಗೋದಾಮುಗಳಲ್ಲೂ ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಇದಕ್ಕೂ ಮೀರಿ ಸೆಕ್ಯೂರಿಟಿ ಸಿಬ್ಬಂದಿ ನೇಮಕ ಮಾಡಲೂ ಸಿದ್ಧತೆ ನಡೆಯುತ್ತಿದೆ.
ಇದನ್ನೂ ಓದಿ: ಕಾಮೋತ್ತೇಜಕವಂತೆ ಕತ್ತೆ ಮಾಂಸ; ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಿಬಿಟ್ಟಿದೆ ಈಗ ಈ ಮೂಕಪ್ರಾಣಿಗೆ