ಕಾಮೋತ್ತೇಜಕವಂತೆ ಕತ್ತೆ ಮಾಂಸ; ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಿಬಿಟ್ಟಿದೆ ಈಗ ಈ ಮೂಕಪ್ರಾಣಿಗೆ
Donkey meat: ಇನ್ನು ಕತ್ತೆ ರಕ್ತ ಕುಡಿಯುವುದರಿಂದ ವೇಗವಾಗಿ ಓಡಬಹುದು ಎಂಬ ಒಂದು ಮಿಥ್ಯೆಯೂ ಇದೆ. ಟಾಲಿವುಡ್ನ ಹಿಟ್ ಸಿನಿಮಾ ಕ್ರಾಕ್ನಲ್ಲಿ ಕೂಡ ಹೀಗೊಂದು ಸನ್ನಿವೇಶವನ್ನು ತೋರಿಸಲಾಗಿದೆ.
ತೆಲಂಗಾಣ: ಕತ್ತೆಯ ಹಾಲಿಗೆ ಡಿಮ್ಯಾಂಡ್ ಬಂದು ತುಂಬ ಕಾಲವಾಗಿದ್ದು ಗೊತ್ತೇ ಇದೆ. ಆದರೀಗ ಆಂಧ್ರಪ್ರದೇಶದಲ್ಲಿ ಕತ್ತೆಯ ಮಾಂಸಕ್ಕೂ ಭರ್ಜರಿ ಬೇಡಿಕೆ ಇದೆ. ಕಾರಣ ಅಲ್ಲಿನ ಜನ, ಕತ್ತೆ ಮಾಂಸ ಬೆನ್ನು ನೋವು, ಅಸ್ತಮಾವನ್ನು ಗುಣಪಡಿಸುತ್ತದೆ, ಅಷ್ಟೇ ಅಲ್ಲ ಇದರಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ ಎಂದು ನಂಬಿದ್ದಾರೆ. ಇದೇ ಕಾರಣಕ್ಕಾಗಿ ಆಂಧ್ರಪ್ರದೇಶದ ಪ್ರಕಾಶಂ, ಕೃಷ್ಣಾ, ಪಶ್ಚಿಮ ಗೋದಾವರಿ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಕತ್ತೆ ಮಾಂಸ ತಿನ್ನುವವರ ಸಂಖ್ಯೆ ಹೆಚ್ಚಾಗಿದ್ದು, ಸಹಜವಾಗಿ ಮಾರಾಟವೂ ಅಧಿಕಗೊಂಡಿದೆ. ಇನ್ನೊಂದೆಡೆ ಸ್ಥಳೀಯ ಆಡಳಿತಗಳು ಕತ್ತೆ ಹತ್ಯೆಯನ್ನು ತಡೆಯಲು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇವೆ.
ಕತ್ತೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದರಿಂದ ಕತ್ತೆಗಳ ಸಂಖ್ಯೆ ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅಷ್ಟೇ ಅಲ್ಲ ಪ್ರಾಣಿಪ್ರಿಯರೂ ಸಿಟ್ಟಾಗಿದ್ದಾರೆ. ಇನ್ನು 2001ರ ಕಸಾಯಿಖಾನೆ ನಿಯಮಗಳ ಅನ್ವಯ ಕತ್ತೆಗಳ ಹತ್ಯೆಯನ್ನು ನಿಷೇಧಿಸಲಾಗಿದೆ. ಆದರೆ ಈ ಕತ್ತೆಗಳ ಹತ್ಯೆ, ಮಾಂಸ ಮಾರಾಟದ ಅಕ್ರಮ ದಂಧೆ ಮಾಡುವವರ ಜಾಲ ಬೆಳೆಯುತ್ತಲೇ ಇದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರಗಳಿಂದಲೂ ಮಾಂಸಕ್ಕಾಗಿ ಮೂಕ ಪ್ರಾಣಿಗಳನ್ನು ಮಾರಾಟ ಮಾಡಲಾಗುತ್ತಿದೆ.
ಉಸಿರಾಟದ ಸಮಸ್ಯೆ ನಿವಾರಣೆ? ಇನ್ನು ಆಂಧ್ರದ ಜನರು ಕತ್ತೆ ಮಾಂಸದ ಹಿಂದೆ ಬೀಳಲು ಮೂರ್ನಾಲ್ಕು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಈ ಮಾಂಸ ಸೇವನೆ ಉಸಿರಾಟದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಅಂದರೆ ಅಸ್ತಮಾ ಸೇರಿ ಮತ್ತಿತರ ಕಾಯಿಲೆಗಳಿಗೆ ಮದ್ದು ಎಂಬುದು ಅವರ ಬಲವಾದ ನಂಬಿಕೆ. ಅಷ್ಟೇ ಅಲ್ಲ ಇದು ಕಾಮೋತ್ತೇಜಕವಾಗಿದ್ದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾರಲ್ಲಿ ಲೈಂಗಿಕ ನಿರಾಸಕ್ತಿ ಇರುತ್ತದೆಯೋ ಅವರು ಇದನ್ನು ತಿನ್ನಬೇಕು ಎಂದೂ ಅವರು ಹೇಳುತ್ತಾರೆ. ಹೀಗೆ ಕತ್ತೆಯ ಮಾಂಸವನ್ನು ತಿನ್ನುವ ಅಭ್ಯಾಸ ಮೊದಲು ಶುರುವಾಗಿದ್ದು ಪ್ರಕಾಶಂ ಜಿಲ್ಲೆಯ ಸ್ಟುವರ್ಟ್ಪುರಂ ಎಂಬಲ್ಲಿ ಎಂದು ಆಂಧ್ರದ ಪ್ರಾಣಿಹಕ್ಕು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಇದೀಗ ಕತ್ತೆ ಮಾಂಸಕ್ಕೆ ಕಿಲೋಗೆ 600 ರೂ.ಇದ್ದು, ತುಂಬ ಚೆನ್ನಾಗಿ ಬೆಳೆದ ಕತ್ತೆಯ ಮಾಂಸ 15 ಸಾವಿರದಿಂದ 20,000ರೂ.ವರೆಗೂ ಮಾರಾಟವಾಗುತ್ತಿದೆ.
ಕತ್ತೆ ರಕ್ತದ ಬಗ್ಗೆ ಮಿಥ್ಯೆ ಇನ್ನು ಕತ್ತೆ ರಕ್ತ ಕುಡಿಯುವುದರಿಂದ ವೇಗವಾಗಿ ಓಡಬಹುದು ಎಂಬ ಒಂದು ಮಿಥ್ಯೆಯೂ ಇದೆ. ಟಾಲಿವುಡ್ನ ಹಿಟ್ ಸಿನಿಮಾ ಕ್ರಾಕ್ನಲ್ಲಿ ಕೂಡ ಹೀಗೊಂದು ಸನ್ನಿವೇಶವನ್ನು ತೋರಿಸಲಾಗಿದೆ. ಸಿನಿಮಾ ಹೀರೋ-ಹೀರೋಯಿನ್ಗಳಾದ ರವಿ ತೇಜ ಮತ್ತು ಶ್ರುತಿ ಹಾಸ್ ಕತ್ತೆಯ ರಕ್ತ ಕುಡಿದು, ತುಂಬ ವೇಗವಾಗಿ ಓಡುವ ದೃಶ್ಯ ಸಿನಿಮಾದಲ್ಲಿದೆ. ಹಾಗೇ, ಪ್ರಕಾಶಂ ಜಿಲ್ಲೆಯ ವೆಟಪಾಲೆಂ ಗ್ರಾಮದ ಕೆಲವು ಮೀನುಗಾರರು ಬಂಗಾಳಕೊಲ್ಲಿ ಸಮುದ್ರಕ್ಕೆ ಮೀನು ಹಿಡಿಯಲು ಹೋಗುವ ಮೊದಲು ಕತ್ತೆ ರಕ್ತ ಕುಡಿದು ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕತ್ತೆ ಹಾಲಿನಲ್ಲಿ ವಯಸ್ಸಾಗುವ ಲಕ್ಷಣವನ್ನು ತಡೆಯುವಂತಹ ಗುಣವನ್ನು ಹೊಂದಿದೆ
Published On - 3:49 pm, Tue, 2 March 21