ಭಾರತದಲ್ಲಿ ಮಸೂದೆಯೊಂದು ಕಾಯ್ದೆ ಆಗುವುದು ಹೇಗೆ? ಪ್ರತಿಯೊಬ್ಬರಿಗೂ ತಿಳಿದಿರಬೇಕು ಸಂಸತ್ತಿನ ಶಾಸನ ರಚನೆ ಪ್ರಕ್ರಿಯೆ ಮತ್ತದರ ಮಹತ್ವ

Santosh Nair's article in 'Your India' series: ಸಂಸತ್ತಿನಲ್ಲಿ ಮಸೂದೆಯೊಂದು ಕಾಯ್ದೆಯಾಗಲು ಮೂರು ಓದುಗಳ ಅಗತ್ಯವಿದೆ. ಈ ಪ್ರಕ್ರಿಯೆಯು ಆಳವಾದ ಚರ್ಚೆ ಹಾಗೂ ಸಂಸದೀಯ ಸಮಿತಿಗಳ ಕೂಲಂಕಷ ಪರಿಶೀಲನೆಗೆ ಅವಕಾಶ ನೀಡುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಮಿತಿಗಳಿಗೆ ಕಳುಹಿಸುವ ಮಸೂದೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದು ಅವಸರದ ಕಾನೂನುಗಳಿಗೆ ಕಾರಣವಾಗಿ, ನಾಗರಿಕರ ಮೇಲೆ ಪರಿಣಾಮ ಬೀರುವ ಅಪಾಯವನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ಕಾನೂನಿಗೂ ಸೂಕ್ತ ಗಮನ ಹರಿಸುವುದು ಅತ್ಯಗತ್ಯ.

ಭಾರತದಲ್ಲಿ ಮಸೂದೆಯೊಂದು ಕಾಯ್ದೆ ಆಗುವುದು ಹೇಗೆ? ಪ್ರತಿಯೊಬ್ಬರಿಗೂ ತಿಳಿದಿರಬೇಕು ಸಂಸತ್ತಿನ ಶಾಸನ ರಚನೆ ಪ್ರಕ್ರಿಯೆ ಮತ್ತದರ ಮಹತ್ವ
ಸಂಸತ್ತುv
Image Credit source: PTI

Updated on: Oct 04, 2026 | 12:07 PM

ಯಾವುದಾದರೂ ಒಂದು ಸಂಜೆ ಹೊತ್ತು ಟಿವಿ ಚಾಲನೆ ಮಾಡಿದರೆ, ಕೇವಲ ನಿಮಿಷಮಾತ್ರದಲ್ಲಿ ಅದು ನಡೆಯುವುದನ್ನು ನೀವು ಕಾಣಬಹುದು. ಮಸೂದೆಯೊಂದರ (Bill) ಪ್ರಸ್ತಾಪವಾಗುತ್ತದೆ. ಧ್ವನಿ ಮತಗಳನ್ನು ಎಣಿಸಲಾಗುತ್ತದೆ. ಸ್ಪೀಕರ್ ಅವರು ಮಸೂದೆಗೆ ಅನುಮೋದನೆ ದೊರೆತಿದೆ ಎಂದು ಘೋಷಿಸುತ್ತಾರೆ. ನ್ಯೂಸ್ ಚಾನೆಲ್ ತಕ್ಷಣವೇ ಮುಂದಿನ ಸುದ್ದಿಗೆ ಸಾಗುತ್ತದೆ.

ಇದೇನಿದು ಇಷ್ಟು ತತಕ್ಷಣಕ್ಕೆ ಆಗುತ್ತಿದೆಯಲ್ಲ ಎಂದು ಭಾಸವಾಗಬಹುದು. ಆದರೆ, ವಾಸ್ತವದಲ್ಲಿ ಅದು ಹಾಗಲ್ಲ.

ಆ ಹತ್ತು ಸೆಕೆಂಡುಗಳ ವಿಡಿಯೋ ತುಣುಕು ನಿಮಗೆ ಕಾಣುವುದಕ್ಕೂ ಮುನ್ನ, ಅದೇ ಕಾಗದದ ಪ್ರತಿಯನ್ನು ತಿಂಗಳುಗಳ ಕಾಲ ಪದೇ ಪದೇ ಓದಲ್ಪಟ್ಟಿರುತ್ತದೆ, ವಾದ-ಪ್ರತಿವಾದ ನಡೆದಿರುತ್ತದೆ ಮತ್ತು ಕೂಲಂಕಷವಾಗಿ ಪರಿಶೀಲಿಸಲಾಗಿರುತ್ತದೆ. ನಮ್ಮಲ್ಲಿ ಹೆಚ್ಚಿನವರು ಆ ಹಂತವನ್ನು ಎಂದಿಗೂ ನೋಡುವುದಿಲ್ಲ. ಅದು ಅಂತ್ಯಗೊಳ್ಳುವ ಕ್ಷಣವನ್ನು ಮಾತ್ರ ನಾವು ನೋಡುತ್ತೇವೆ.

ಹಾಗಾದರೆ, ಇಲ್ಲೊಂದು ಬಹಳ ಪ್ರಸ್ತುತವೆನಿಸುವ ಪ್ರಶ್ನೆ ಮೂಡುತ್ತದೆ. ಮಸೂದೆಯೊಂದು ಕಾನೂನಾಗಿ ಪರಿಗಣಿಸಲ್ಪಡುವ ಮೊದಲು ಅದನ್ನು ಮೂರು ಬಾರಿ ಏಕೆ ಓದಬೇಕು ಎನ್ನುವ ಕಾನೂನು ಯಾಕೆ ಇದೆ?

ಈ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಓದಿಗೂ ಒಂದು ಹೆಸರಿದೆ. ‘ಮೊದಲ ಓದಿನಲ್ಲಿ’ (First Reading), ಸಚಿವರು ಅಥವಾ ಸದಸ್ಯರೊಬ್ಬರು ಮಸೂದೆಯನ್ನು ಮಂಡಿಸಲು ಅನುಮತಿ ಕೋರುತ್ತಾರೆ. ಅಲ್ಲಿ ಯಾವುದೇ ಚರ್ಚೆಗಳು ನಡೆಯುವುದಿಲ್ಲ. ಪ್ರತಿಯೊಬ್ಬ ನಾಗರಿಕನೂ ಅದನ್ನು ಓದಲು ಸಾಧ್ಯವಾಗುವಂತೆ ಮಸೂದೆಯನ್ನು ಅಚ್ಚುಹಾಕಿ ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ.

ತದನಂತರ ಹೆಚ್ಚಿನವರು “ಸಂಸತ್ತು ಕಾರ್ಯನಿರ್ವಹಿಸುತ್ತಿದೆ” ಎಂದು ಕಲ್ಪಿಸಿಕೊಳ್ಳುವ ಹಂತ ಬರುತ್ತದೆ. ‘ಎರಡನೇ ಓದಿನಲ್ಲಿ’ (Second Reading), ಮಸೂದೆಯನ್ನು ಪ್ರತಿಯೊಂದು ನಿಯಮ ಮತ್ತು ನಿಯಮಾವಳಿಗಳ ಆಧಾರದ ಮೇಲೆ ಚರ್ಚಿಸಲಾಗುತ್ತದೆ. ಸದಸ್ಯರು ಒಂದೇ ಒಂದು ವಾಕ್ಯ, ಒಂದೇ ಒಂದು ಸಂಖ್ಯೆ ಅಥವಾ ಒಂದೇ ಒಂದು ಪದಕ್ಕೆ ತಿದ್ದುಪಡಿಗಳನ್ನು ಪ್ರಸ್ತಾಪಿಸಬಹುದು. ಈ ಹಂತಕ್ಕಿಂತ ಮೊದಲು, ಮಸೂದೆಯನ್ನು ‘ಸಂಸದೀಯ ಸಮಿತಿ’ಗೆ (Parliamentary Committee) ಕಳುಹಿಸಬಹುದು. ಸಂಸದರ ಸಣ್ಣ ಗುಂಪೊಂದು ವಾರಗಳ ಕಾಲ ಅದರ ಬಗ್ಗೆ ವಿವರವಾಗಿ ಅಧ್ಯಯನ ನಡೆಸಿ, ಹೊರಗಿನ ತಜ್ಞರು ಹಾಗೂ ಸಾಮಾನ್ಯ ನಾಗರಿಕರಿಂದಲೂ ಅಭಿಪ್ರಾಯಗಳನ್ನು ಆಹ್ವಾನಿಸುತ್ತದೆ.

‘ಮೂರನೇ ಓದು’ (Third Reading) ಬರುವ ವೇಳೆಗೆ ಚರ್ಚೆಗಳು ಬಹುಮಟ್ಟಿಗೆ ಪೂರ್ಣಗೊಂಡಿರುತ್ತವೆ. ಇಲ್ಲಿ ಮಸೂದೆಯ ಅಂತಿಮ ರೂಪದ ಮೇಲೆ ಸಂಸತ್ತಿನಲ್ಲಿ ಮತದಾನ ನಡೆಯುತ್ತದೆ.

ಇದನ್ನೂ ಓದಿ: ಅಧಿಕಾರ ಇಲ್ಲದಿದ್ದರೂ ಗಾಂಧೀಜಿಯ ಪ್ರಭಾವ; ದೇಶ ಬದಲಾಯಿಸಲು ಹುದ್ದೆ ಬೇಕಾಗಲಿಲ್ಲ

ಮತ್ತು ಅದು ಪ್ರಯಾಣದ ಅರ್ಧದಷ್ಟು ಹಂತ ಮಾತ್ರ. ಭಾರತದ ಸಂಸತ್ತು ಲೋಕಸಭೆ ಮತ್ತು ರಾಜ್ಯಸಭೆ ಎಂಬ ಎರಡು ಸದನಗಳನ್ನು ಹೊಂದಿದೆ. ತೆರಿಗೆ ಮತ್ತು ಸರ್ಕಾರದ ವೆಚ್ಚಗಳಿಗೆ ಸಂಬಂಧಿಸಿದ ‘ಹಣಕಾಸು ಮಸೂದೆ’ಯನ್ನು (Money Bill) ಹೊರತುಪಡಿಸಿ (ಅದು ತನ್ನದೇ ಆದ ಸಣ್ಣ ನಿಯಮಗಳನ್ನು ಅನುಸರಿಸುತ್ತದೆ), ಸಾಮಾನ್ಯ ಮಸೂದೆಯೊಂದು ಜಾರಿಯಾಗಲು ಎರಡೂ ಸದನಗಳಲ್ಲಿ ಒಂದರ ನಂತರ ಒಂದರಂತೆ ಮೂರು ಓದುಗಳ ಪ್ರಕ್ರಿಯೆಯನ್ನು ದಾಟಬೇಕಾಗುತ್ತದೆ. ಅದರ ನಂತರವೇ ಅದು ರಾಷ್ಟ್ರಪತಿಗಳ ಅಂಕಿತಕ್ಕೆ ಸಾಗುತ್ತದೆ. ಆ ನಂತರವೇ ಮಸೂದೆಯು ಕಾನೂನಾತ್ಮಕವಾಗಿ ‘ಕಾಯ್ದೆ’ಯಾಗಿ (Act) ಪರಿವರ್ತನೆಯಾಗುತ್ತದೆ.

ಮೂರು ಓದುಗಳು. ಎರಡು ಸದನಗಳು. ಒಂದು ಸಹಿ. ಇದು ಸಂವಿಧಾನ ರಚಿಸಿದ ವಿನ್ಯಾಸ.

ಇದು ಉದ್ದೇಶಪೂರ್ವಕವಾಗಿ ನಿಧಾನಗೊಳಿಸಿದಂತೆ ಕಾಣುತ್ತದೆ. ಅದು ನಿಜವೂ ಹೌದು.

ಹಿಂಪಡೆದುಕೊಳ್ಳಲು ಸಾಧ್ಯವಾಗದಂತಹ ನಿರ್ಧಾರವನ್ನು ನಿವು ಕೊನೆಯ ಬಾರಿ ಯಾವಾಗ ತೆಗೆದುಕೊಂಡಿದ್ದೀರಿ ಎಂದು ಯೋಚಿಸಿ. ಸಾಲಕ್ಕೆ ಸಹಿ ಹಾಕುವುದು. ದೊಡ್ಡ ಹೆಜ್ಜೆಗೆ ಸಮ್ಮತಿಸುವುದು. ಇಮೇಲ್ ಕಳುಹಿಸುವುದು ಇತ್ಯಾದಿ. ಸಹಿ ಹಾಕುವ ಮುನ್ನ ಅದರಲ್ಲಿ ಏನು ಬರೆದಿದೆ ಎಂದು ಓದಿ ಅರ್ಥ ಮಾಡಿಕೊಳ್ಳಲು ಹೆಚ್ಚಿನವರು ಪ್ರಯತ್ನಿಸುತ್ತೇವೆ. ಕೋಟ್ಯಂತರ ಜನರನ್ನು ಪ್ರಭಾವಿಸುವ ಕಾನೂನು ಕನಿಷ್ಠ ಅಷ್ಟಾದರೂ ಗಮನ ಮತ್ತು ಎಚ್ಚರಿಕೆಗೆ ಅರ್ಹವಾಗಿರುತ್ತದೆ ಅಲ್ಲವೇ?!

ಆದರೆ ಇಲ್ಲಿ ವಿಷಯವು ಬೇಸರ ತರುವ ಹಂತದಲ್ಲಿದೆ .

ಪ್ರತಿಯೊಂದು ಮಸೂದೆಗೂ ಆ ಮಟ್ಟದ ಗಮನ ಸಿಗುತ್ತಿಲ್ಲ. ಸಂಸತ್ತಿನ ಕಾರ್ಯವೈಖರಿಯನ್ನು ವರ್ಷಗಳಿಂದ ಗಮನಿಸುತ್ತಿರುವ ‘ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್’ (PRS Legislative Research) ಸಂಸ್ಥೆಯ ಪ್ರಕಾರ, 2004 ರಿಂದ 2014 ರವರೆಗಿನ 14 ನೇ ಮತ್ತು 15 ನೇ ಲೋಕಸಭೆಗಳು ತಮ್ಮ ಶೇ. 60 ಮತ್ತು ಶೇ. 71 ರಷ್ಟು ಮಸೂದೆಗಳನ್ನು ಆಳವಾದ ಅಧ್ಯಯನಕ್ಕಾಗಿ ಸಂಸದೀಯ ಸಮಿತಿಗಳಿಗೆ ಕಳುಹಿಸಿದ್ದವು. ಆದರೆ 16 ನೇ ಲೋಕಸಭೆಯಲ್ಲಿ ಆ ಪ್ರಮಾಣವು ಶೇ. 26 ಕ್ಕೆ ಕುಸಿಯಿತು. 17 ನೇ ಲೋಕಸಭೆಯಲ್ಲಂತೂ, ಒಂದೇ ಒಂದು ಮಸೂದೆಯನ್ನೂ ಸಮಿತಿಗೆ ಕಳುಹಿಸದೆ ಅಧಿವೇಶನಗಳು ನಡೆದುಹೋದವು.

ಹೀಗಾಗಿ, ನಿಧಾನವಾಗಿ ಯೋಚಿಸಿ ತನ್ನ ಕೆಲಸವನ್ನು ತಾನೇ ಪರಿಶೀಲಿಸಲು ವಿನ್ಯಾಸಗೊಳಿಸಲಾದ ಅದೇ ಸಂಸತ್ತು, ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಎಚ್ಚರಿಕೆಯ ಹಂತವನ್ನೇ ಬಿಟ್ಟುಬಿಡುತ್ತಿವೆ.

ಇದನ್ನೂ ಓದಿ: ದೇವ್‌ಡುಂಗ್ರಿಯಿಂದ ದೆಹಲಿಯವರೆಗೆ: ಆರ್‌ಟಿಐ ಕಾಯ್ದೆಗೆ ಕಾರಣವಾದ ಒಂದು ಸಣ್ಣ ಹೆಜ್ಜೆ; ಯಾವುದೇ ದೊಡ್ಡ ನಿರ್ಧಾರದ ಶುರು ಹೀಗೆ

ಇದು ಯಾವುದೋ ಒಂದು ಪಕ್ಷ ಅಥವಾ ಒಂದು ಸರ್ಕಾರದ ಕಥೆಯಲ್ಲ. ಅಧಿಕಾರದಲ್ಲಿದ್ದ ಪ್ರತಿಯೊಂದು ಪಕ್ಷವೂ ತಾನು ತಂದ ಮಸೂದೆಗಳು ವೇಗವಾಗಿ ಅಂಗೀಕಾರವಾಗಬೇಕೆಂದು ಬಯಸಿದೆ. ವಿರೋಧ ಪಕ್ಷದಲ್ಲಿದ್ದ ಪ್ರತಿಯೊಂದು ಪಕ್ಷವೂ ಹೆಚ್ಚಿನ ಪರಿಶೀಲನೆಗೆ ಆಗ್ರಹಿಸಿದೆ. ವೇಗವಾಗಿ ನಿರ್ಧಾರ ಕೈಗೊಳ್ಳುವ ಒತ್ತಡ ಆಡಳಿತ ವ್ಯವಸ್ಥೆಯಲ್ಲೇ ಇದೆ. ಹಾಗೆಯೇ ಅತಿಯಾದ ವೇಗದಿಂದ ಬರುವ ಅಪಾಯವೂ ಅದರಲ್ಲೇ ಇದೆ.

ನೈಜ ಚರ್ಚೆಯಿಲ್ಲದೆ ಆತುರದಿಂದ ಜಾರಿಯಾದ ಕಾನೂನು ಕೂಡ ಪ್ರತಿಯೊಬ್ಬ ನಾಗರಿಕನ ಮೇಲೆಯೂ ಸಂಪೂರ್ಣವಾಗಿ ಅನ್ವಯವಾಗುತ್ತದೆ. ವರ್ಷವಿಡೀ ಕೂಲಂಕಷ ಚರ್ಚೆಯ ನಂತರ ಜಾರಿಯಾದ ಕಾನೂನಿನಂತೆಯೇ, ಇದನ್ನು ಸಹ ಅದೇ ಪೊಲೀಸರು, ಅದೇ ನ್ಯಾಯಾಲಯಗಳಲ್ಲಿ ಜಾರಿಗೆ ತರುತ್ತಾರೆ. ಕಾಗದವು ತನ್ನ ಹಿಂದೆ ಎಷ್ಟು ಎಚ್ಚರಿಕೆ ವಹಿಸಲಾಗಿತ್ತು ಎಂಬುದನ್ನು ನೆನಪಿನಲ್ಲಿಡುವುದಿಲ್ಲ. ಅದರ ಅಡಿಯಲ್ಲಿ ಜೀವಿಸುವ ಜನರು ಮಾತ್ರ ಅದನ್ನು ನೆನಪಿನಲ್ಲಿಡುತ್ತಾರೆ.

ಇದು ಮುಖ್ಯ ಏಕೆಂದರೆ, ಕಾನೂನು ಅಂಗೀಕಾರವಾದ ದಿನವೇ ಅದು ಸಂಪೂರ್ಣಗೊಳ್ಳುವುದಿಲ್ಲ. ಎಲ್ಲೋ, ಯಾರೋ ಒಬ್ಬರು ಅದರಂತೆ ಜೀವಿಸಬೇಕಾಗಿ ಬಂದಾಗ ಅದು ಪೂರ್ಣಗೊಳ್ಳುತ್ತದೆ. ಅಸ್ಪಷ್ಟ ನಿಯಮ, ಗಮನಿಸದ ಅಡ್ಡಪರಿಣಾಮ, ಸಮಿತಿಯಲ್ಲಿ ಯಾರೂ ಪ್ರಶ್ನಿಸದ ಒಂದು ಪದ — ಇವು ಸ್ಪೀಕರ್ ಗಂಟೆ ಬಾರಿಸಿದ ತಕ್ಷಣ ಮಾಯವಾಗುವುದಿಲ್ಲ. ಅವು ನಂತರ, ನ್ಯಾಯಾಲಯದ ಪ್ರಕರಣದಲ್ಲಿ, ಪೊಲೀಸ್ ಠಾಣೆಯಲ್ಲಿ ಅಥವಾ ಸಾಮಾನ್ಯರ ದಿನನಿತ್ಯದ ಬದುಕಿನಲ್ಲಿ ಎದುರಾಗುತ್ತವೆ.

ಇದರರ್ಥ ವೇಗವಾಗಿ ಅಂಗೀಕಾರವಾದ ಪ್ರತಿಯೊಂದು ಕಾನೂನೂ ಕೆಟ್ಟದ್ದು ಎಂದಾಗಲಿ ಅಥವಾ ದೀರ್ಘ ಚರ್ಚೆಯಾದ ಪ್ರತಿಯೊಂದು ಕಾನೂನೂ ಒಳ್ಳೆಯದು ಎಂದಾಗಲಿ ಅಲ್ಲ. ವೇಗ ಶತ್ರುವಲ್ಲ, ನಿರ್ಲಕ್ಷ್ಯವೇ ಶತ್ರು.

ಮುಂದಿನ ಬಾರಿ ಹತ್ತು ಸೆಕೆಂಡುಗಳ ವಿಡಿಯೋದಲ್ಲಿ ಮಸೂದೆಯೊಂದು ಜಾರಿಯಾಗುವುದನ್ನು ನೀವು ನೋಡಿದಾಗ, ಒಂದು ಸಣ್ಣ ಪ್ರಶ್ನೆಯನ್ನು ಕೇಳಿಕೊಳ್ಳುವುದು ಸೂಕ್ತ. ಈ ಮಸೂದೆಯನ್ನು ಅದಕ್ಕೆ ಅಗತ್ಯವಾದ ಗಮನದಿಂದ ಓದಲಾಯಿತೇ, ಅಥವಾ ಬೇಗ ಮುಗಿಸಲು ಬೇಕಾದ ರೀತಿಯಲ್ಲಿ ಓದಲಾಯಿತೇ?

ಆಧಾರಗಳು: ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್, “In a Rush to Pass Bills, 17th Lok Sabha Is Not Scrutinising Future Laws Enough”; ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್, “How Is a Law Enacted in Parliament?”; LawBhoomi, “How Does a Bill Become a Law in India”; ಭಾರತದ ಸಂವಿಧಾನ, ವಿಧಿಗಳು 107–111.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us