ಪಾಟ್ನಾ, ಜನವರಿ 7: ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನ ಮತ್ತು ಬಂಗ್ಲಾದೇಶಗಳ ಪಕ್ಕದಲ್ಲಿ ಪ್ರತ್ಯೇಕ ನಾಡು ಬೇಕು ಎಂದು ಬಿಹಾರದ ಪ್ರೊಫೆಸರ್ವೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಪೊಲೀಸರು ಖುರ್ಷಿದ್ ಅಲಮ್ (Khurshid Alam) ವಿರುದ್ಧ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ. ಆರೋಪಿ ಖುರ್ಷೀದ್ ಅಲಮ್ ಅವರು ಬಿಹಾರದ ಜೈ ಪ್ರಕಾಶ್ ಯೂನಿವರ್ಸಿಟಿಗೆ ಸೇರಿದ ಸಿವನ್ ಜಿಲ್ಲೆಯಲ್ಲಿನ ನಾರಾಯಣ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ.
ನಾರಾಯಣ ಕಾಲೇಜಿನಲ್ಲಿ ಪೊಲಿಟಿಕಲ್ ಸೈನ್ಸ್ ವಿಭಾಗದ ಮುಖ್ಯಸ್ಥರೂ ಆಗಿರುವ ಖುರ್ಷಿದ್ ಅಲಂ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಡಿದ ಒಂದಷ್ಟು ಪೋಸ್ಟ್ಗಳು ವಿವಾದಕ್ಕೆ ಕಾರಣವಾಗಿವೆ.
‘ಯುನೈಟೆಡ್ ಪಾಕಿಸ್ತಾನ್ ಅಂಡ್ ಬಾಂಗ್ಲಾದೇಶ್ ಜಿಂದಾಬಾದ್’ (ಅಖಂಡ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಜೈ) ಎಂದು ಒಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Maldives controversy: ಪ್ರಧಾನಿ ಮೋದಿ ಮತ್ತು ಭಾರತೀಯರಿಗೆ ಲೇವಡಿ; ಭಾರತದಿಂದ ತಗಾದೆ; ಮಾಲ್ಡೀವ್ಸ್ನ ಮೂವರು ಸಚಿವರ ತಲೆದಂಡ
ಮತ್ತೊಂದು ಪೋಸ್ಟ್ನಲ್ಲಿ ಅವರು, ‘ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪಕ್ಕದಲ್ಲಿ ಪ್ರತ್ಯೇಕ ನಾಡು ಬೇಕು’ ಎಂದು ಅಭಿಪ್ರಾಯಪಟ್ಟಿದ್ಧಾರೆ. ಸದ್ಯ ಈ ಎರಡೂ ಪೋಸ್ಟ್ಗಳನ್ನು ಅವರು ಡಿಲೀಟ್ ಮಾಡಿದ್ದಾರೆ.
ಈ ಪೋಸ್ಟ್ಗಳು ಡಿಲೀಟ್ ಆಗುವ ಮುನ್ನ ಕಾಲೇಜಿನ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ತಮ್ಮ ಗುರುವಿನ ವರ್ತನೆ ಬಗ್ಗೆ ಸಿಡಿಮಿಡಿಗೊಂಡ ಅವರು ಖುರ್ಷಿದ್ ಅಲಂ ಅವರ ಪ್ರತಿಕೃತಿ ದಹನ ಮಾಡಿ ಪೋಸ್ಟ್ಗಳನ್ನು ಡಿಲೀಟ್ ಮಾಡುವಂತೆ ಆಗ್ರಹಿಸಿದ್ದರು. ಅದಾದ ಬಳಿಕ ಅಲಂ ತಮ್ಮ ಪೋಸ್ಟ್ ಅಳಿಸಿದ್ದರು.
ಇದೇ ವೇಳೆ, ಜೈ ಪ್ರಕಾಶ್ ಯೂನಿವರ್ಸಿಟಿಯು ಖುರ್ಷಿದ್ ಅಲಂ ಅವರಿಗೆ ಶೋಕಾಸ್ ನೋಟೀಸ್ ನೀಡಿದೆ. ದೇಶವಿರೋಧಿ ಚಟುವಟಿಕೆಯಲ್ಲಿ ನಿರತರಾಗಿದ್ದಕ್ಕೆ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಉತ್ತರ ಕೋರಿ ನೋಟೀಸ್ ನೀಡಿದೆ.
ಇನ್ನು, ಪ್ರೊಫೆಸರ್ ಖುರ್ಷಿದ್ ಅಲಂ ಅವರು ತಮ್ಮ ಪೋಸ್ಟ್ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ. ಅದೇ ಉಸುರಿನಲ್ಲಿ ಭಾರತದಲ್ಲಿ ಮುಸ್ಲಿಮರಿಗೆ ಸುರಕ್ಷಿತ ವಾತಾವರಣ ಇಲ್ಲ ಎಂದೂ ವ್ಯಾಕುಲತೆ ವ್ಯಕ್ತಪಡಿಸಿದ್ದಾರೆ.
‘ನನ್ನ ಬರಹಗಳ ಮೂಲಕ ಯಾರದ್ದೇ ಭಾವನೆಗೆ ಧಕ್ಕೆ ತರಲು ಯತ್ನಿಸಿಲ್ಲ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದು ಖುರ್ಷಿದ್ ಅಲಂ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕ ಸತ್ಯನ್ ಚೌಧರಿಯ ಗುಂಡಿಕ್ಕಿ ಹತ್ಯೆ
ಹಾಗೆಯೇ, ಅವರು ಮುಸ್ಲಿಮರ ಪರಿಸ್ಥಿತಿ ಬಗ್ಗೆ ಆತಂಕವನ್ನೂ ತೋಡಿಕೊಂಡಿದ್ದಾರೆ:
‘ನಮ್ಮ ಸಂವಿಧಾನವು ಭಾರತವನ್ನು ಜಾತ್ಯತೀತ ದೇಶ ಎಂದು ಘೋಷಿಸಿದೆ. ಆದರೆ, ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭಾರತವನ್ನು ಹಿಂದೂ ರಾಷ್ಟ್ರವಾಗಿ ಮಾಡುವುದಾಗಿ ಘೋಷಿಸಿದೆ. ಪ್ರಸಕ್ತ ನಮ್ಮ ದೇಶವು ಸರ್ವಧರ್ಮ ಸಮಭಾವದ ಸ್ಥಿತಿಯಲ್ಲಿ ಇಲ್ಲ. ನ್ಯಾಯಾಲಯದ ಬಹುತೇಕ ತೀರ್ಪುಗಳು ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧವಾಗಿಯೇ ಇದೆ’ ಎಂದು ಬಿಹಾರದ ಈ ಪ್ರೊಫೆಸರ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ