
ದೆಹಲಿ: ದೇಶದಲ್ಲಿ ಸದ್ಯ ಆಕ್ಸಿಜನ್ ಅಭಾವದ ಸಮಸ್ಯೆ ತಲೆದೋರಿದ್ದು, ವಿದೇಶಗಳೂ ಸಹ ಭಾರತಕ್ಕೆ ನೆರವಿನಹಸ್ತ ಚಾಚಿವೆ. ಆಮ್ಲಜನಕ ಸಾಂದ್ರಕಗಳನ್ನು ಕಳಿಸುತ್ತಿವೆ. ಇದೀಗ ಬೇರೆ ರಾಷ್ಟ್ರಗಳಿಂದ ಆಮ್ಲಜನಕವನ್ನು ಭಾರತಕ್ಕೆ ತರಲು ಇಂಡಿಯನ್ ನೇವಿ (ಭಾರತೀಯ ನೌಕಾಪಡೆ) ಸಮುದ್ರ ಸೇತು-II ಎಂಬ ಹೆಸರಿನಡಿ ಕಾರ್ಯಾಚರಣೆ ಶುರು ಮಾಡಿದೆ.
ಈ ಬಗ್ಗೆ ಭಾರತೀಯ ನೌಕಾಪಡೆಯ ವಕ್ತಾರ ಟ್ವೀಟ್ ಮಾಡಿದ್ದು, ಸಮುದ್ರ ಸೇತು-II ಮಿಷನ್ನಡಿ ಭಾರತೀಯ ನೌಕಾಪಡೆಯ ಹಡಗುಗಳು ಬೇರೆ ರಾಷ್ಟ್ರಗಳಿಂದ ದ್ರವರೂಪದ ಆಮ್ಲಜನಕ ಸಾಂದ್ರಕಗಳು ಮತ್ತು ಸಂಬಂಧಿತ ವೈದ್ಯಕೀಯ ಉಪಕರಣಗಳನ್ನು ಹೊತ್ತು ತರಲಿವೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕೊವಿಡ್ 19 ಎರಡನೇ ಅಲೆ ಗಂಭೀರವಾಗುತ್ತಿದೆ. ಈ ಹೊತ್ತಲ್ಲಿ ಆಮ್ಲಜನಕದ ಕೊರತೆಯೂ ಹೆಚ್ಚಾಗಿದೆ. ಆಮ್ಲಜನಕವಿಲ್ಲದೆ ಅದೆಷ್ಟೋ ರೋಗಿಗಳು ಜೀವ ಕಳೆದುಕೊಂಡಿದ್ದಾರೆ. ಆಸ್ಪತ್ರೆಗಳ ಮುಖ್ಯಸ್ಥರೇ ಕಣ್ಣೀರಿಡುತ್ತಿದ್ದಾರೆ. ಈಗಾಗಲೇ ಅಮೆರಿಕ, ಯುಕೆ, ಫ್ರಾನ್ಸ್ ಮತ್ತಿತರ ದೇಶಗಳಿಂದ ವಿಮಾನದ ಮೂಲಕ ಆಕ್ಸಿಜನ್ನ್ನು ಭಾರತಕ್ಕೆ ಸಾಗಣೆ ಮಾಡಲಾಗಿದೆ. ಇದೀಗ ನೌಕಾಪಡೆ ಸಮುದ್ರ ಮಾರ್ಗದ ಮೂಲಕ ಸಾಗಣೆಗೆ ಮುಂದಾಗಿದೆ.
ಹೀಗೆ ಆಕ್ಸಿಜನ್ ಸಾಗಣೆಯ ಮೊದಲ ಬ್ಯಾಚ್ನಲ್ಲಿ ಐಎನ್ಎಸ್ ಕೋಲ್ಕತ್ತ ಮತ್ತು ಐಎನ್ಎಸ್ ತಲ್ವಾರ್ಗಳು ಕಾರ್ಯಾಚರಣೆ ಆರಂಭಿಸಿವೆ. ಇದರಲ್ಲಿ ಐಎನ್ಎಸ್ ತಲ್ವಾರ್ ಏಪ್ರಿಲ್ 30ರಂದು ಬಹರೇನ್ ದೇಶದ ಮನಮಾ ಬಂದರನ್ನು ತಲುಪಿದ್ದು ಸುಮಾರು 40 ಮೆಟ್ರಿಕ್ ಟನ್ಗಳಷ್ಟು ದ್ರವರೂಪದ ವೈದ್ಯಕೀಯ ಆಕ್ಸಿಜನ್ ಹೊತ್ತು ತರಲಿದೆ. ಹಾಗೇ ಐಎನ್ಎಸ್ ಕೋಲ್ಕತ್ತ ದೋಹಾ, ಕ್ವತಾರ್, ಕುವೈತ್ಗಳಿಂದ ಆಕ್ಸಿಜನ್ ತರಲಿದೆ ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಇಷ್ಟೇ ಅಲ್ಲದೆ ಮುಂದೆ ಇನ್ನಷ್ಟು ನೌಕಾಹಡಗುಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳಲಿವೆ ಎಂದೂ ತಿಳಿಸಿದೆ.
ಇದನ್ನೂ ಓದಿ: ಮಹಿಳೆಯ ಶವದ ಮೇಲಿದ್ದ ಚಿನ್ನಾಭರಣ ಕಳ್ಳತನ; ಚಿಕ್ಕಬಳ್ಳಾಪುರ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ
ಚಕ್ರವರ್ತಿ ತೆಗೆದುಕೊಂಡ ಆ ಒಂದು ನಿರ್ಧಾರ ಅವರ ಬಿಗ್ ಬಾಸ್ ಜರ್ನಿಯನ್ನೇ ಬದಲಾಯಿಸಿತು
Indian Navy start Samudra Setu for bring the oxygen from other Countries
Published On - 4:13 pm, Sun, 2 May 21