ನವದೆಹಲಿ: ರೈಲು (Train) ಪ್ರಯಾಣದ ಸಮಯದಲ್ಲಿ ನಿಮ್ಮ ವಸ್ತುಗಳು ಕಳ್ಳತನವಾದರೇ ಅದು ರೈಲ್ವೆ ಸೇವೆಯಲ್ಲಿನ ಕೊರತೆಯಲ್ಲ ಮತ್ತು ಭಾರತೀಯ ರೈಲ್ವೆ ಇಲಾಖೆ (Indian Railway) ಹೊಣೆಯಾಗುವುದಿಲ್ಲ ಎಂದು ಸುಪ್ರಿಂ ಕೋರ್ಟ್ (Supreme Court) ತೀರ್ಪು ನೀಡಿದೆ. ಪ್ರಯಾಣಿಕರು ತಮ್ಮ ಸ್ವಂತ ವಸ್ತುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದಿದ್ದರೆ ರೈಲ್ವೆ ಇಲಾಖೆಯನ್ನು ಹೊಣೆ ಮಾಡಲಾಗುವುದಿಲ್ಲ ಎಂದು ಹೇಳಿದೆ.
ರೇಲ್ವೆ ಇಲಾಖೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ ಕಳ್ಳತನವು ರೈಲ್ವೆಯ ಸೇವೆಯಲ್ಲಿನ ಕೊರತೆ ಎಂದು ಹೇಗೆ ಹೇಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ವಿಫಲರಾಗಿದ್ದೇವೆ. ಪ್ರಯಾಣಿಕರು ತಮ್ಮ ಸ್ವಂತ ವಸ್ತುಗಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ರೈಲ್ವೆ ಇಲಾಖೆಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ಪೀಠ ಹೇಳಿದೆ.
ಭೋಲಾ ಎಂಬುವರು 2005ರ ಏಪ್ರಿಲ್ 27 ರಂದು ರಾತ್ರಿ ಕಾಶಿ ವಿಶ್ವನಾಥ್ ಎಕ್ಸ್‌ಪ್ರೆಸ್ ಮೂಲಕ ನವದೆಹಲಿಗೆ ಪ್ರಯಾಣಿಸುತ್ತಿದ್ದರು. ಭೋಲಾ ಅವರು ಹೇಳುವ ಪ್ರಕಾರ “ವ್ಯಾಪಾರಸ್ಥರಿಗೆ ನೀಡಲೆಂದು ಬಟ್ಟೆಯಲ್ಲಿ 1 ಲಕ್ಷ ರೂ. ಹಣವನ್ನು ಸುತ್ತಿಕೊಂಡು ಬೆಲ್ಟ್ಗೆ ಕಟ್ಟಿಕೊಂಡಿದ್ದೆ. ಹಾಗೆ ನಿದ್ದೆಗೆ ಜಾರಿದೆ. ಮುಂಜಾನೆ 3:30ರ ಸುಮಾರಿಗೆ ಎಚ್ಚರಗೊಂಡು ನೋಡಿದಾಗ ಸೊಂಟದಲ್ಲಿ ಬೆಲ್ಟ್ ಇಲ್ಲ ಮತ್ತು ಪ್ಯಾಂಟ್ನ ಬಲಭಾಗದ ಭಾಗವು ಹರಿದಿತ್ತು” ಎಂದು ಹೇಳಿದ್ದಾರೆ.
ನಂತರ ಭೋಲಾ ದೆಹಲಿಯ ಸರ್ಕಾರಿ ರೈಲ್ವೇ ಪೊಲೀಸರಿಗೆ (GRP) ದೂರು ನೀಡಿದರು. ಮತ್ತು ಹಣ ಕಳ್ಳತನಾವಾಗಿದ್ದು, ರೈಲ್ವೆ ಇಲಾಖೆ ಹಣವನ್ನು ಮರುಪಾವತಿ ಮಾಡಬೇಕೆಂದು ಗ್ರಾಹಕ ನ್ಯಾಯಾಲಯ ಮೆಟ್ಟಿಲೇರಿದರು. ಪ್ರಕರಣದ ವಿಚಾರಣೆ ನಡೆಸಿದ್ದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) ಭೋಲಾ ಅವರಿಗೆ 1 ಲಕ್ಷ ರೂ. ನೀಡುವಂತೆ ರೈಲ್ವೆ ಇಲಾಖೆಗೆ ಸೂಚಿಸಿತ್ತು.
ಹೀಗಾಗಿ ರೈಲ್ವೆ ಇಲಾಖೆ ಸುಪ್ರಿಂ ಕೋರ್ಟ್ಗೆ ಮೇಲ್ಮನವಿ ಸಲ್ಲಿದ್ದು, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (NCDRC) ಆದೇಶವನ್ನು ತಳ್ಳಿಹಾಕಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ