ಸೇನಾ ವಿಮಾನ, ಹೊಸ ವಿಚಾರಣೆ; ಶೇಖ್ ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾದೇಶಕ್ಕೆ ಭಾರತ ವಿಧಿಸಿದ ಷರತ್ತುಗಳಿವು!

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಕಾನೂನು ಮಾರ್ಗಗಳ ಮೂಲಕವೇ ಬಾಂಗ್ಲಾದೇಶಕ್ಕೆ ಕರೆತರಲಾಗುವುದು ಎಂದು ಬಾಂಗ್ಲಾದೇಶದ ಕಾನೂನು ಸಚಿವ ಅಸದುಜ್ಜಮಾನ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ವಿಷಯದಲ್ಲಿ ಭಾರತ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಸಂಪೂರ್ಣವಾಗಿ ಭಾರತ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಅವರು ಹೇಳಿದ್ದಾರೆ. ಇದರ ನಡುವೆ ಶೇಖ್ ಹಸೀನಾ ವಾಪಸಾತಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ 2 ಪ್ರಮುಖ ಷರತ್ತುಗಳನ್ನು ವಿಧಿಸಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶವು ಶೇಖ್ ಹಸೀನಾ ಅವರನ್ನು ಕರೆದೊಯ್ಯಲು ಸೇನಾ ವಿಮಾನವನ್ನು ವ್ಯವಸ್ಥೆಗೊಳಿಸಬೇಕು ಮತ್ತು ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಹಾಗೂ ಹೊಸದಾಗಿ ಮರುವಿಚಾರಣೆ ಎದುರಿಸಲು ಅವರಿಗೆ ಅವಕಾಶ ನೀಡಬೇಕು ಎಂದು ಭಾರತ ಆಗ್ರಹಿಸಿದೆ ಎನ್ನಲಾಗಿದೆ.

ಸೇನಾ ವಿಮಾನ, ಹೊಸ ವಿಚಾರಣೆ; ಶೇಖ್ ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾದೇಶಕ್ಕೆ ಭಾರತ ವಿಧಿಸಿದ ಷರತ್ತುಗಳಿವು!
Sheikh Hasina With Pm Modi

Updated on: Nov 15, 2026 | 12:41 PM

ಢಾಕಾ, ನವೆಂಬರ್ 15: 2024ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ ನವದೆಹಲಿಯಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಇದೀಗ ತಮ್ಮ ದೇಶಕ್ಕೆ ವಾಪಾಸ್ ಹೋಗಲು ನಿರ್ಧರಿಸಿದ್ದಾರೆ. ಡಿಸೆಂಬರ್​ನಲ್ಲಿ ಬಾಂಗ್ಲಾದೇಶಕ್ಕೆ ತೆರಳುವುದಾಗಿ ಘೋಷಿಸಿರುವ ಅವರನ್ನು ಸ್ವದೇಶಕ್ಕೆ ಕಳುಹಿಸಲು ಭಾರತ ಸರ್ಕಾರವು ಎರಡು ಪ್ರಮುಖ ಷರತ್ತುಗಳನ್ನು ವಿಧಿಸಿದೆ ಎಂದು ವರದಿಯಾಗಿದೆ. ಶೇಖ್ ಹಸೀನಾ ಅವರ ವಾಪಸಾತಿಗಾಗಿ ಬಾಂಗ್ಲಾದೇಶವು ಸೇನಾ ವಿಮಾನದ ವ್ಯವಸ್ಥೆ ಮಾಡಬೇಕು ಮತ್ತು ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಹಾಗೂ ಹೊಸ ವಿಚಾರಣೆ ಎದುರಿಸಲು ಅವಕಾಶ ನೀಡಬೇಕು ಎಂದು ಭಾರತ ಷರತ್ತು ವಿಧಿಸಿದೆ ಎಂದು ‘ಬಿಬಿಸಿ ಬಾಂಗ್ಲಾ’ ವರದಿ ಮಾಡಿದೆ.

2024ರ ಜುಲೈ-ಆಗಸ್ಟ್ ದಂಗೆಯ ವೇಳೆ ಪ್ರತಿಭಟನಾಕಾರರ ಮೇಲೆ ನಡೆದ ದಮನಕಾರಿ ಕಾರ್ಯಾಚರಣೆಯಲ್ಲಿ ಅವರ ಪಾತ್ರವಿದೆ ಎಂಬ ಆರೋಪದಡಿ, 2025ರ ನವೆಂಬರ್‌ನಲ್ಲಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ) ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಿತ್ತು. ಅವರ ಗೈರುಹಾಜರಿಯಲ್ಲಿ ಈ ವಿಚಾರಣೆ ನಡೆದಿದ್ದು, ಶೇಖ್ ಹಸೀನಾ ಈ ಎಲ್ಲಾ ಆರೋಪಗಳು ಮತ್ತು ನ್ಯಾಯಾಂಗ ಪ್ರಕ್ರಿಯೆಗಳನ್ನು ತಿರಸ್ಕರಿಸಿದ್ದಾರೆ.

Loading...

ಭಾರತ ವಿಧಿಸಿದೆ ಎನ್ನಲಾದ 2 ಪ್ರಮುಖ ಷರತ್ತುಗಳು:

ಮೊದಲ ಷರತ್ತಿನ ಪ್ರಕಾರ, ಶೇಖ್ ಹಸೀನಾ ಅವರನ್ನು ಸುರಕ್ಷಿತವಾಗಿ ವಾಪಾಸ್ ಕರೆದೊಯ್ಯುವ ಜವಾಬ್ದಾರಿಯನ್ನು ಬಾಂಗ್ಲಾದೇಶ ಸೇನೆಯೇ ವಹಿಸಿಕೊಳ್ಳಬೇಕು ಮತ್ತು ಅದಕ್ಕಾಗಿ ಸೇನಾ ವಿಮಾನವನ್ನೇ ಬಳಸಬೇಕು. 2024ರ ಆಗಸ್ಟ್ 5ರಂದು ತೀವ್ರ ಪ್ರತಿಭಟನೆಗಳ ನಡುವೆ ಅವರು ಸೇನಾ ವಿಮಾನದಲ್ಲೇ ಢಾಕಾದಿಂದ ಹೊರಬಂದ ಮಾದರಿಯಲ್ಲೇ ಈ ವಾಪಸಾತಿಯೂ ನಡೆಯಬೇಕು ಎಂಬುದು ಭಾರತದ ನಿಲುವಾಗಿದೆ.

ಇದನ್ನೂ ಓದಿ: ದೇಶಕ್ಕೆ ಮರಳಲು ಶೇಖ್ ಹಸೀನಾ ಸಿದ್ಧತೆ, ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ; ಹಸ್ತಾಂತರಕ್ಕೆ ಪಟ್ಟು ಹಿಡಿದ ಬಾಂಗ್ಲಾದೇಶ

ಎರಡನೇ ಷರತ್ತು ಶೇಖ್ ಹಸೀನಾ ಅವರ ಕಾನೂನು ರಕ್ಷಣೆಗೆ ಸಂಬಂಧಿಸಿದೆ. ದಂಗೆಯ ವೇಳೆ ನಡೆದ ಹತ್ಯೆಗಳಿಗೆ ಸಂಬಂಧಿಸಿದ ಆರೋಪಗಳ ಕುರಿತು ತಮಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಹಾಗೂ ಹೊಸದಾಗಿ ನ್ಯಾಯಯುತ ವಿಚಾರಣೆ ಎದುರಿಸಲು ಶೇಖ್ ಹಸೀನಾ ಅವರಿಗೆ ಢಾಕಾ ಸರ್ಕಾರವು ಸಂಪೂರ್ಣ ಅವಕಾಶ ನೀಡಬೇಕು ಎಂದು ಭಾರತ ತಿಳಿಸಿದೆ ಎನ್ನಲಾಗಿದೆ.

ಕಾನೂನು ಪ್ರಕ್ರಿಯೆ ಮೂಲಕ ಶೇಖ್ ಹಸೀನಾ ವಾಪಸಾತಿ:

ಶೇಖ್ ಹಸೀನಾ ಅವರು ದೇಶಕ್ಕೆ ಮರಳುವ ಕುರಿತು ಪ್ರತಿಕ್ರಿಯಿಸಿದ ಬಾಂಗ್ಲಾದೇಶದ ಸಚಿವ ಅಸದುಜ್ಜಮಾನ್, ಅವರ ವಾಪಸಾತಿಯು ಸಂಪೂರ್ಣವಾಗಿ ಕಾನೂನು ಚೌಕಟ್ಟು ಮತ್ತು ನಿಗದಿತ ನಿಯಮಗಳ ಅಡಿಯಲ್ಲೇ ನಡೆಯಲಿದೆ ಎಂದು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳು ಮತ್ತು ನ್ಯಾಯಾಲಯದ ಆದೇಶಗಳ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಬಾಂಗ್ಲಾದೇಶಕ್ಕೆ ಮರಳಿದರೆ ಶೇಖ್ ಹಸೀನಾಗೆ ಮರಣದಂಡನೆ? ಪ್ರಾಸಿಕ್ಯೂಟರ್ ಹೇಳಿಕೆಯಿಂದ ಹೊಸ ವಿವಾದ

ಉಭಯ ದೇಶಗಳ ನಡುವೆ ಇರುವ ಹಸ್ತಾಂತರ ಒಪ್ಪಂದದ ಮೂಲಕವೇ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸಬೇಕು ಎಂದು ಬಾಂಗ್ಲಾದೇಶ ಪಟ್ಟುಹಿಡಿದಿದೆ. ಅಲ್ಲದೆ, ಹೊಸ ಪಾಸ್‌ಪೋರ್ಟ್ ನೀಡುವಂತೆ ಶೇಖ್ ಹಸೀನಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಢಾಕಾ, ಅವರೊಬ್ಬ ಶಿಕ್ಷೆಗೊಳಗಾದ ಅಪರಾಧಿಯಾಗಿರುವುದರಿಂದ ಹೊಸ ಪ್ರಯಾಣ ದಾಖಲೆಗಳನ್ನು ನೀಡುವ ಬದಲು ಹಸ್ತಾಂತರ ಪ್ರಕ್ರಿಯೆಯ ಮೂಲಕವೇ ಕರೆತರಲಾಗುವುದು ಎಂದು ವಾದಿಸಿದೆ.

ಭಾರತದ ಪಾತ್ರದ ಕುರಿತು ಬಾಂಗ್ಲಾದೇಶದ ನಿಲುವು:

ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಅವರ ಹಸ್ತಾಂತರ ಅಥವಾ ಪ್ರಯಾಣ ದಾಖಲೆಗಳ ವಿಚಾರವಾಗಿ ಭಾರತ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಅವರಿಗೇ ಬಿಟ್ಟ ವಿಚಾರ ಎಂದು ಸಚಿವರು ಹೇಳಿದ್ದಾರೆ. ಮತ್ತೊಂದೆಡೆ, ಶೇಖ್ ಹಸೀನಾ ಅವರು ಬಾಂಗ್ಲಾದೇಶಕ್ಕೆ ಮರಳಲು ಅಗತ್ಯವಿರುವ ಪ್ರಯಾಣ ದಾಖಲೆಗಳ ಕುರಿತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈಗಾಗಲೇ ಪ್ರತಿಕ್ರಿಯಿಸಿದ್ದು, ದ್ವಿಪಕ್ಷೀಯ ವಿಷಯಗಳ ಕುರಿತು ಬಾಂಗ್ಲಾದೇಶದೊಂದಿಗೆ ಚರ್ಚಿಸಲು ಭಾರತ ಸಿದ್ಧವಿದೆ ಎಂದು ತಿಳಿಸಿದೆ.

ದೇಶ ತೊರೆದ ನಂತರ ಇದೇ ಮೊದಲ ಬಾರಿಗೆ ಶೇಖ್ ಹಸೀನಾ ಅವರು ಬಾಂಗ್ಲಾದೇಶಕ್ಕೆ ಮರಳುವ ತಮ್ಮ ಬಯಕೆಯನ್ನು ವ್ಯಕ್ತಪಡಿಸಿರುವುದು ಉಭಯ ದೇಶಗಳ ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಶೇಖ್ ಹಸೀನಾ ಅವರ ಪಾಸ್‌ಪೋರ್ಟ್, ಪ್ರಯಾಣ ದಾಖಲೆಗಳು ಹಾಗೂ ಭದ್ರತಾ ಖಾತರಿಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗಳು ನಡೆಯುತ್ತಿವೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us