ದೆಹಲಿ: 1993 ಮುಂಬೈ ಸರಣಿ ಸ್ಫೋಟದ (1993 Mumbai Blast)ಆರೋಪಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಅಬು ಬಕರ್(Abu Bakar)ನನ್ನು ಭಾರತೀಯ ಭದ್ರತಾ ದಳದ ಸಿಬ್ಬಂದಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಬಂಧಿಸಿವೆ. 1993ರಲ್ಲಿ ಮುಂಬೈನಲ್ಲಿ ಒಟ್ಟು 12 ಪ್ರದೇಶಗಳನ್ನು ಸ್ಫೋಟಿಸಲಾಗಿತ್ತು. ಈ ದುರಂತದಲ್ಲಿ 257 ಮಂದಿ ಮೃತಪಟ್ಟಿದ್ದರೆ, 713ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 29ವರ್ಷಗಳಿಂದಲೂ ಭಾರತದ ಮೋಸ್ಟ್ವಾಂಟೆಡ್ ಪಟ್ಟಿಯಲ್ಲಿದ್ದ ಉಗ್ರ ಅಬು ಬಕರ್ನನ್ನು ಬಂಧಿಸಲಾಗಿದ್ದು, ಆತನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಅಬು ಬಕರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಬಳಕೆ ತರಬೇತಿ ನೀಡುವುದರಲ್ಲಿ ತೊಡಗಿಕೊಂಡಿದ್ದ. ಅಷ್ಟೇ ಅಲ್ಲ ದುಬೈನಲ್ಲಿದ್ದ ಇಬ್ರಾಹಿಂ ದಾವೂದ್ ನಿವಾಸದಲ್ಲಿ ಮುಂಬೈ ಸ್ಫೋಟದ ಕುರಿತು ರೂಪುರೇಷೆ ಮಾಡುವಲ್ಲಿ, ಆರ್ಡಿಎಕ್ಸ್ ಲ್ಯಾಂಡಿಂಗ್ ಮಾಡುವ ಬಗ್ಗೆ ಯೋಜನೆ ರೂಪಿಸುವಲ್ಲಿ ಈತ ಸಕ್ರಿಯನಾಗಿದ್ದ ಎಂದು ಹೇಳಲಾಗಿದೆ. 1993ರ ಸ್ಫೋಟದ ಪ್ರಮುಖ ಆರೋಪಿಯಾಗಿರುವ ಈತ, ನಂತರದ ದಿನಗಳಲ್ಲಿ ಪಾಕಿಸ್ತಾನ ಮತ್ತು ಯುಎಇನಲ್ಲಿಯೇ ವಾಸವಾಗಿದ್ದ. ಈತ ಯುಎಇನಲ್ಲಿಯೇ ವಾಸವಾಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಭಾರತೀಯ ಭದ್ರತಾ ದಳದ ಸಿಬ್ಬಂದಿ ಇದೀಗ ಬಂಧಿಸಿದ್ದಾರೆ. 2019ರಲ್ಲಿ ಯುಎಇ ಭದ್ರತಾ ಏಜೆನ್ಸಿಗಳೇ ಅಬು ಬಕರ್ನನ್ನು ಒಮ್ಮೆ ಅರೆಸ್ಟ್ ಮಾಡಿದ್ದವು. ಆದರೆ ಕೆಲವು ದಾಖಲೆಗಳು ಸರಿಯಾಗಿ ಸಿಗದ ಕಾರಣ ಅದು ಹೇಗೋ ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿತ್ತು.
29ವರ್ಷಗಳ ನಂತರ ಯುಎಇನಲ್ಲಿ ಭಾರತದ ಭದ್ರತಾ ಏಜೆನ್ಸಿಗಳು ಅಬು ಬಕರ್ನನ್ನು ಬಂಧಿಸಿವೆ. ಅಲ್ಲಿಂದ ಭಾರತಕ್ಕೆ ಕರೆತಂದ ಕೂಡಲೇ ಆತನ ವಿರುದ್ಧ ಇಲ್ಲಿ ಕಾನೂನು ಪ್ರಕ್ರಿಯೆಗಳು ಶುರುವಾಗಲಿವೆ. ಅಬು ಬಕರ್ನ ಪೂರ್ಣ ಹೆಸರು ಅಬು ಬಕರ್ ಅಬ್ದುಲ್ ಗಫೂರ್ ಶೇಖ್ ಎಂದಾಗಿದ್ದು, ಇವನು ದಾವೂದ್ ಇಬ್ರಾಹಿಂನ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ. ದಾವೂದ್ ಇಬ್ರಾಹಿಂನ ಲೆಫ್ಟಿನೆಂಟ್ಗಳಾಗಿದ್ದ ಮೊಹಮ್ಮದ್ ಮತ್ತು ಮುಸ್ತಫಾ ದೊಸ್ಸಾರೊಂದಿಗೆ ಸೇರಿ, ಗಲ್ಫ್ ದೇಶಗಳಿಂದ ಮುಂಬೈ ಮತ್ತು ಇತರ ಸ್ಥಳಗಳಿಗೆ ಚಿನ್ನ, ಬಟ್ಟೆ, ವಿದ್ಯುತ್ ಸಲಕರಣೆಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ. ಈತನ ವಿರುದ್ಧ 1997ರಲ್ಲಿ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಾಗಿತ್ತು. ಅಬು ಬಕರ್ ಎರಡು ಮದುವೆಯಾಗಿದ್ದು, ಇರಾನ್ವರಾದ ಎರಡನೇ ಪತ್ನಿಯೊಂದಿಗೆ ವಾಸವಾಗಿದ್ದ.
Published On - 8:39 am, Sat, 5 February 22