ಉತ್ತರ ಪ್ರದೇಶ: ಎಲ್ಲ 403 ವಿಧಾನಸಭೆ ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತೇವೆ ಅನ್ನುತ್ತಿದ್ದಾರೆ ಪ್ರಿಯಾಂಕಾ ಗಾಂಧಿ, ಗೊಂದಲಾಪುರದಲ್ಲಿ ಕಾಂಗ್ರೆಸ್!
Priyanka Gandhi: ಇಂದಿರಾ ಕುಟುಂಬದ ರಾಜಕೀಯ ಪಡಸಾಲೆ ಎಂದೇ ಪರಿಗಣಿತವಾಗಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಅವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಚುನಾವಣಾ ಸಾರಥ್ಯ ವಹಿಸಿದಂತಿದೆ. ಆರಂಭದಲ್ಲಿ ಮುಂದಿನ ಮುಖ್ಯಮಂತ್ರಿ ತಾನೇ ಎಂದು ಎಂದು ಪ್ರಿಯಾಂಕಾ ಘೋಷಿಸಿಕೊಂಡಿದ್ದರಾದರೂ, ಮರು ಘಳಿಗೆಯಲ್ಲಿಯೇ ತಾನು ಒಲ್ಲೆ ಅಂದುಬಿಟ್ಟರು. ಇದೀಗ ಮತ್ತೊಂದು ಸ್ಟ್ರಾಟೆಜಿಕ್ ಮೂವ್ ಮಾಡಿದ್ದಾರೆ. ಆದರೆ...
ದೇಶದಲ್ಲಿ ಚುನಾವಣಾ ಗಾಳಿ ಜೋರಾಗೊಯೇ ಬೀಸುತ್ತಿದೆ. ಬಿರುಗಾಳಿಯಾಗಿ ಈ ಚುನಾವಣಾ ಕಾವು 2023ರ ಸಾರ್ವತ್ರಿಕ ಚುನಾವಣೆಯ ಮೂಲಕ ಅಂತ್ಯ ಕಾಣಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ತನ್ನ ಆಟಕ್ಕೆ ಇಳಿದಿವೆ. ಪ್ರಮುಖ ರಾಜಕೀಯ ಪಕ್ಷಗಳು ತಂತ್ರ ಪ್ರತಿ ತಂತ್ರ ಹೂಡುತ್ತಿವೆ. ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರಬಹುದಾದಂತಹ, ದಿಕ್ಸೂಚಿ ಆಗಬಹುದಾದಂತಹ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳೂ ಅಣಿಯಾಗಿವೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ತನ್ನ ಪರಾಕ್ರಮ ಮೆರೆಯಲು ಕಾಂಗ್ರೆಸ್ ಸಜ್ಜಾಗಿ ನಿಂತಿದೆ. ಇಂದಿರಾ ಗಾಂಧಿ ಕುಟುಂಬದ ರಾಜಕೀಯ ಪಡಸಾಲೆ ಎಂದೇ ಪರಿಗಣಿತವಾಗಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಅವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ (Priyanka Gandhi) ಚುನಾವಣಾ ಸಾರಥ್ಯ ವಹಿಸಿದಂತಿದೆ. ಆರಂಭದಲ್ಲಿ ಮುಂದಿನ ಮುಖ್ಯಮಂತ್ರಿ ತಾನೇ ಎಂದು ಎಂದು ಪ್ರಿಯಾಂಕಾ ಘೋಷಿಸಿಕೊಂಡಿದ್ದರಾದರೂ, ಮರು ಘಳಿಗೆಯಲ್ಲಿಯೇ ತಾನು ಒಲ್ಲೆ ಅಂದುಬಿಟ್ಟರು. ಇದೀಗ ಮತ್ತೊಂದು ಸ್ಟ್ರಾಟೆಜಿಕ್ ಮೂವ್ನಲ್ಲಿ ಉತ್ತರ ಪ್ರದೇಶದ ಅಷ್ಟೂ ವಿಧಾನಸಭಾ ಕ್ಷೇತ್ರಗಳಲ್ಲಿ (UP Election 2022) ತಮ್ಮ ಕಾಂಗ್ರೆಸ್ ಪಕ್ಷ (Congress) ಸ್ಪರ್ಧಿಸಲಿದೆ ಎಂದು ಪ್ರಿಯಾಂಕಾ ಘೋಷಿಸಿದ್ದಾರೆ. ಅಲ್ಲಿಗೆ ಕಳೆದ 30 ವರ್ಷಗಳ ಉತ್ತರ ಪ್ರದೇಶದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಂತಾಗಿದೆ.
ಕಾಂಗ್ರೆಸ್ ಪಕ್ಷ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಈ ಘೋಷಣೆ ಮಾಡಿದ್ದು, ಉತ್ತರ ಪ್ರದೇಶದಲ್ಲಿ ಎಲ್ಲ 403 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ (Uttar Pradesh Assembly election 2022) ಸಮ್ಮುಖದಲ್ಲಿ ಗಾಜಿಯಾಬಾದ್ನಲ್ಲಿ ಶುಕ್ರವಾರ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಪ್ರಿಯಾಂಕಾ ಗಾಂಧಿ ನಾವು ಈ ಬಾರಿ ಚುನಾವಣೆಯಲ್ಲಿ ನಮ್ಮ ಸರ್ವ ಶಕ್ತಿಯನ್ನೂ ಧಾರೆಯೆರೆಯುತ್ತಿದ್ದೇವೆ. ಹಾಗಾಗಿ ಎಲ್ಲ 403 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತಿದ್ದೇವೆ ಎಂದರು.
ಪ್ರಿಯಾಂಕಾ ಗಾಂಧಿಯಿಂದ ಮತ್ತೊಂದು ಯಡವಟ್ಟು?: ಆದರೆ ಚುನಾವಣೆ ಬಿಸಿಯಲ್ಲಿ ಇದು ಪ್ರಿಯಾಂಕಾ ಗಾಂಧಿ ಕಡೆಯಿಂದ ಮತ್ತೊಂದು ಯಡವಟ್ಟಿನ ಹೇಳಿಕೆಯಾಗಿದೆ. ಏಕೆಂದರೆ ಸಮಾಜವಾದಿ ಪಕ್ಷದತ್ತ ರಾಜಕೀಯ ಒಲವು ಹೊಂದಿರುವ ಕಾಂಗ್ರೆಸ್ ಪಕ್ಷವು ಸಮಾಜವಾದಿ ಪಕ್ಷದತ್ತ (Samajwadi Party -SP) ಸದಾ ಕಾಲ ಒಲವು, ಕೃಪೆ ಬೀರುತ್ತಾ ಬಂದಿದೆ. ಈ ಹಿಂದೆ SP ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಅವರ ಅಂಕಲ್ ಶಿವ್ಪಾಲ್ ಸಿಂಗ್ ಯಾದವ್ ಅವರ ವಿರುದ್ಧ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿರಲಿಲ್ಲ. ಅದರೊಂದಿಗೆ ಅವರ ಗೆಲುವಿಗೆ ನೆರವಾಗಿದ್ದರು. ಅಂದರೆ ಕಾಂಗ್ರೆಸ್ ಕಡೆಯಿಂದ ಇದು ಒಂದು ರೀತಿಯಲ್ಲಿ ರಾಜಕೀಯ ಋಣ ಸಂದಾಯವಾಗಿತ್ತು. ಅಂದರೆ ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್ಬರೇಲಿಯಿಂದ ಕಣಕ್ಕೆ ಇಳಿದಾಗಲೆಲ್ಲ ಸಮಾಜವಾದಿ ಪಕ್ಷ ತನ್ನ ಕಡೆಯಿಂದ ಅಭ್ಯರ್ಥಿಯನ್ನು ನಿಲ್ಲಿಸುತ್ತಿರಲಿಲ್ಲ. ಅದರೊಂದಿಗೆ ಸೋನಿಯಾ ಗೆಲುವಿಗೆ ನೆರವಾಗುತ್ತಿದ್ದರು.
ಹಾಗಾಗಿ ಈ ಬಾರಿಯೂ ಇದು ಮುಂದುವರಿಯುವ ಲಕ್ಷಣಗಳು ಹೆಚ್ಚಾಗಿವೆ. ಈ ಬಾರಿ SP ಮುಖ್ಯಸ್ಥ ಅಖಿಲೇಶ್ ಯಾದವ್ ಕರಹಾಲ್ (Karhal) ವಿಧಾನಸಭಾ ಕ್ಷೇತ್ರದಿಂದಲೂ ಮತ್ತು ಅವರ ಅಂಕಲ್ ಶಿವ್ಪಾಲ್ ಸಿಂಗ್ ಯಾದವ್ ಜಸ್ವಂತ್ ನಗರ್ (Jaswant Nagar) ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿದ್ದಾರೆ. ಅಲ್ಲಿಗೆ ಕಾಂಗ್ರೆಸ್ ಈ ಎರಡೂ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುವ ಗೋಜಿಗೆ ಹೋಗುವುದಿಲ್ಲ ಎಂದಾಯಿತು. ಆದರೆ ಪ್ರಿಯಾಂಕಾ ಗಾಂಧಿ ಎಲ್ಲಾ 403 ಅನ್ನುತ್ತಿದ್ದಾರೆ!
ಇಲ್ಲಿ ಇನ್ನೂ ಒಂದು ಗಮನಾರ್ಹ ಸಂಗತಿಯಿದೆ. 2019ರಲ್ಲಿ ರಾಹುಲ್ ಗಾಂಧಿ ಅಮೇಠಿ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಾಗ ಸಮಾಜವಾದಿ ಪಕ್ಷದಿಂದ ಯಾರೂ ಸ್ಪರ್ಧಿಸಿರಲಿಲ್ಲ. ಅಲ್ಲಿಗೆ ಸಮಾಜವಾದಿ ಪಕ್ಷದ ಮೇಲೆ ಕಾಂಗ್ರೆಸ್ ಋಣ ಹೆಚ್ಚಾಗಿದೆ ಅಂತಾಯಿತು. ಅದರೂ ಪ್ರಿಯಾಂಕಾ ಗಾಂಧಿ ಎಲ್ಲಾ 403 ಅನ್ನುತ್ತಿದ್ದಾರೆ! ಇದೀಗ ಪ್ರಿಯಾಂಕಾ ಗಾಂಧಿ ಹೇಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಗೊಂದಲಕ್ಕೆ ಈಡಾಗಿದ್ದಾರೆ. ಜೊತೆಗೆ ಸಮಾಜವಾದಿ ಪಕ್ಷದಲ್ಲೂ ಬೇರೆಯದ್ದೇ ಆದ ರಾಜಕೀಯ ಆಲೋಚನೆಗೆ ಗ್ರಾಸ ಒದಗಿಸಿದೆ.
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಳೆದ 30 ವರ್ಷಗಳಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಕಡೆಯಿಂದ ಎಲ್ಲ ಕಡೆಯೂ ಸ್ಪರ್ಧೆ: ಪ್ರಿಯಾಂಕಾ ಗಾಂಧಿ ಘೋಷಣೆ (ಎ ಎನ್ಐ ವರದಿ)
First time in 30 years, Congress is contesting on all UP Assembly seats: Priyanka Gandhi
Read @ANI Story | https://t.co/JohkbbJ9AF #PriyankaGandhi #UPElection2022 pic.twitter.com/48ALOfEAAl
— ANI Digital (@ani_digital) February 4, 2022
Published On - 8:26 am, Sat, 5 February 22