ಸಾಮಾಜಿಕ ಮಾಧ್ಯಮಗಳಲ್ಲಿ ಪರೋಕ್ಷ ಪ್ರಚಾರದ ಪೋಸ್ಟ್ ಹಾಕುವ ಪ್ರಭಾವಶಾಲಿಗಳಿಗಾಗಿ ಹೊಸ ಮಾರ್ಗಸೂಚಿ..
ಕರಡು ಮಾರ್ಗಸೂಚಿಗೆ ಆಕ್ಷೇಪಣೆ, ಸಲಹೆಗಳನ್ನು ನೀಡಲು ಮಾರ್ಚ್ 8ರವರೆಗೆ ಅವಕಾಶ ಇರುತ್ತದೆ. ಪರಿಶೀಲನೆ ನಡೆಸಿದ ಬಳಿಕ ಮಾರ್ಚ್ 31ರಂದು ಅಂತಿಮ ಮಾರ್ಗಸೂಚಿ ಹೊರಬರುತ್ತದೆ ಎಂದು ಜಾಹಿರಾತು ಗುಣಮಟ್ಟ ಮಂಡಳಿ ತಿಳಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ದೃಷ್ಟಿಯಿಂದ ಭಾರತೀಯ ಜಾಹಿರಾತು ಗುಣಮಟ್ಟ ಮಂಡಳಿ (ASCI) ಡಿಜಿಟಲ್ ಮೀಡಿಯಾಗಳಲ್ಲಿ ಪರೋಕ್ಷವಾಗಿ ಜಾಹೀರಾತು ಶಿಕಾರಿ ಮಾಡುವವರಿಗಾಗಿ (influencer advertising) ಕರಡು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. Influencer Advertising (ಪ್ರಭಾವಿಗಳ ಪರೋಕ್ಷ ಪ್ರಚಾರ) ಮುಖ್ಯವಾಹಿನಿಗೆ ಬರುತ್ತಿದೆ ಎಂದು ಗಮನಿಸಿದ ASCI, ಪ್ರಭಾವಶಾಲಿಗಳು ಪ್ರಚಾರಕ್ಕಾಗಿ ಹಾಕುವ ಹಲವು ಪೋಸ್ಟ್ಗಳು ಜಾಹೀರಾತು ಎಂಬುದನ್ನೇ ಗುರುತಿಸಲು ಸಾಧ್ಯವಾಗುವುದಿಲ್ಲ. ಇಂಥ ಬಹಿರಂಗ ಪಡಿಸದ ಪೋಸ್ಟ್ಗಳು ಗ್ರಾಹಕರ ದಾರಿ ತಪ್ಪಿಸುವಂತಿರುತ್ತದೆ.. ಹಾನಿಯುಂಟು ಮಾಡುವಂತವೂ ಆಗಿರುತ್ತದೆ ಎಂದೂ ASCI ಅಭಿಪ್ರಾಯಪಟ್ಟಿದೆ.
ಇದೀಗ ಭಾರತೀಯ ಜಾಹಿರಾತು ಗುಣಮಟ್ಟ ಮಂಡಳಿ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿ ಅನ್ವಯ, ಪರೋಕ್ಷವಾಗಿ ಪ್ರಚಾರ ಮಾಡುವ ಎಲ್ಲ ಪ್ರಭಾವಶಾಲಿಗಳೂ (influencers) ತಾವು ಹಾಕುವ ಸೃಜನಶೀಲ ಪೋಸ್ಟ್ಗಳು, ಅದು ವಿಡಿಯೋ ಆಗಿರಲಿ, ಲಿಖಿತ ಪೋಸ್ಟ್ ಆಗಿರಲಿ ಜಾಹಿರಾತು ಹೌದೋ ಅಲ್ಲವೋ ಎಂಬುದನ್ನು ಬಹಿರಂಗಪಡಿಸಬೇಕು. ಯಾವುದೇ ರೀತಿಯ ಪ್ರಚಾರದ ಪೋಸ್ಟ್ ಆಗಿದ್ದರೂ, ಅದರ ಮೇಲೆ, ಮೊದಲೇ ಅನುಮೋದನೆ ಪಡೆದ ಡಿಸ್ಕ್ಲೋಸರ್ ಲೇಬಲ್ (ಪ್ರಕಟೀಕರಣ ಲೇಬಲ್) ಅಂದರೆ, ಅದು ಜಾಹೀರಾತೋ, ಪ್ರಾಯೋಜಿತವೋ, ಪ್ರೋಮೋನೋ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಅನುಮತಿ ನೀಡಲಾದ ಲೇಬಲ್ಗೇ ಬದ್ಧವಾಗಿರಬೇಕು ಮತ್ತು ಅದನ್ನು ಬಳಿಕ ಯಾವುದೇ ರೀತಿಯಲ್ಲೂ ತಿರುಚುವಂತಿಲ್ಲ. ಈ ನಿಯಮಗಳು ಯುಟ್ಯೂಬ್, ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂ, ಸ್ನಾಪ್ಚಾಟ್, ಬ್ಲಾಗ್ ಸೇರಿ ಉಳಿದೆಲ್ಲ ರೀತಿಯ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೂ ಅನ್ವಯ ಆಗುತ್ತವೆ ಎಂದು ASCI ತಿಳಿಸಿದೆ.
ಇನ್ನು ಆಡಿಯೋ ಮೂಲಕ ಪ್ರಚಾರ ಮಾಡುತ್ತಿದ್ದು, ಅದು ಯಾವುದೇ ವಿವರಣೆಯನ್ನು ಒಳಗೊಂಡಿಲ್ಲದೆ ಇದ್ದರೆ, ಆ ಆಡಿಯೋ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಅದು ಯಾವ ವಿಚಾರಕ್ಕೆ ಸಂಬಂಧಪಟ್ಟ, ಯಾವ ಸ್ವರೂಪದ ಪ್ರಚಾರ ಎಂಬುದನ್ನು ಸ್ಪಷ್ಟವಾಗಿ ಪ್ರಕಟಪಡಿಸಬೇಕು ಎಂದೂ ಜಾಹೀರಾತು ಮಂಡಳಿ ತಿಳಿಸಿದೆ. ಇನ್ನು ಯಾವುದೇ ಪ್ರಚಾರದ ವಿಡಿಯೋ 15 ಸೆಕೆಂಡ್ಗಳಿದ್ದರೆ, 2 ಸೆಕೆಂಡ್ಗಳಷ್ಟು ಸಮಯವಾದರೂ ಡಿಸ್ಕ್ಲೋಸರ್ ಲೇಬಲ್ ಕಾಣಿಸಬೇಕು. 15 ಸೆಕೆಂಡ್ಗಳಷ್ಟೂ ಹೆಚ್ಚಿನ ಮತ್ತು 2 ನಿಮಿಷಕ್ಕೂ ಕಡಿಮೆ ವಿಡಿಯೋ ಆಗಿದ್ದರೆ, ಆ ವಿಡಿಯೋದ ಒಂದು ಮೂರರಷ್ಟು ಸಮಯದವರೆಗೆ ಲೇಬಲ್ ಇರಬೇಕು ಎಂದೂ ಕರಡು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಪರೋಕ್ಷವಾಗಿ ಪ್ರಚಾರ ಪ್ರಭಾವಶಾಲಿಗಳಿಗಾಗಿ ರೂಪಿಸಲಾದ ಕರಡು ಮಾರ್ಗಸೂಚಿಯು ಡಿಜಿಟಲ್ ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಎಲ್ಲ ಶೇಕ್ಹೋಲ್ಡರ್ಸ್, ಉದ್ಯಮಿಗಳು, ಡಿಜಿಟಲ್ ಪ್ರಭಾವಿಗಳು ಮತ್ತು ಗ್ರಾಹಕರು ಸೇರಿ ಎಲ್ಲ ಮಧ್ಯವರ್ತಿಗಳಿಗೂ ಲಭ್ಯವಿರುತ್ತದೆ. ಮಾರ್ಚ್ 8ರವರೆಗೆ ಫೀಡ್ಬ್ಯಾಕ್ ನೀಡಲು ಅವಕಾಶ ಇರುತ್ತದೆ. ಎಲ್ಲ ಆಕ್ಷೇಪಣೆ, ಸಲಹೆಗಳನ್ನೂ ಪರಿಶೀಲನೆ ನಡೆಸಿದ ಬಳಿಕ ಮಾರ್ಚ್ 31ರಂದು ಅಂತಿಮ ಮಾರ್ಗಸೂಚಿ ಹೊರಬರುತ್ತದೆ. ಏಪ್ರಿಲ್ 15ರ ನಂತರ ಪ್ರಚಾರಕ್ಕಾಗಿ ಬಳಸುವ ಪೋಸ್ಟ್ಗಳಲ್ಲಿ ಕಡ್ಡಾಯವಾಗಿ ನಿಯಮಗಳು ಪಾಲನೆಯಾಗಲೇಬೇಕಾಗುತ್ತದೆ ಎಂದು ಜಾಹಿರಾತು ಗುಣಮಟ್ಟ ಮಂಡಳಿ ತಿಳಿಸಿದೆ.