ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಲೇನ್ಗಳಲ್ಲಿ ಬಣ್ಣದ ರೇಖೆ ಎಳೆಯಲು ಪ್ರಾಧಿಕಾರ ನಿರ್ಧಾರ; ವಾಹನಗಳ ಸಾಲು ಆ ಲೈನ್ ಮುಟ್ಟಿದರೆ ಶುಲ್ಕವೇ ಇಲ್ಲ!
ಇದೀಗ ಸಾರಿಗೆ ಸಚಿವಾಲಯ ಟೋಲ್ ಪ್ಲಾಜಾ ( toll plaza) ಗಳಲ್ಲಿ ಎಳೆಯಲು ನಿರ್ಧರಿಸಿರುವ ಬಣ್ಣದ ರೇಖೆಗಳು ಒಂದು ಟೋಲ್ ಪ್ಲಾಜಾದಿಂದ ಇನ್ನೊಂದಕ್ಕೆ ಭಿನ್ನವಾಗಿರುತ್ತವೆ.
ದೆಹಲಿ: ಎಲ್ಲ ರಾಷ್ಟ್ರೀಯ ಹೆದ್ದಾರಿಗಳ (NH) ಟೋಲ್ ಲೇನ್ ಗಳಲ್ಲಿ ಪ್ರತ್ಯೇಕವಾದ ಬಣ್ಣದ ಗೆರೆಯನ್ನು ಎಳೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಟೋಲ್ ಪ್ಲಾಜಾಗಳಲ್ಲಿ ಸಾಮಾನ್ಯವಾಗಿ ವಾಹನಗಳ ಉದ್ದನೆಯ ಸಾಲು ಇರುತ್ತದೆ. ಒಂದೊಂದು ಪಥದಲ್ಲೂ ನಿಗದಿತ ವಾಹನಗಳು ಕ್ಯೂ ಇರುತ್ತವೆ. ಹೀಗೆ ಸಾಲುಗಟ್ಟಿದ ವಾಹನಗಳ ಚಾಲಕರು ಟೋಲ್ ಪ್ಲಾಜಾದಲ್ಲಿ ಶುಲ್ಕ ಕಟ್ಟಿ ಮುಂದೆ ಹೋಗಬೇಕು.. ಇದು ನಿಯಮ. ಹೀಗಿರುವಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೀಗೊಂದು ಪ್ರತ್ಯೇಕ ಗೆರೆ ಎಳೆಯಲು ನಿರ್ಧರಿಸಿದ್ದಕ್ಕೆ ಪ್ರಮುಖ ಉದ್ದೇಶವಿದೆ.
ಲೈನ್ಗಳು ಯಾಕೆ? ಅಷ್ಟಕ್ಕೂ ಟೋಲ್ ಪ್ಲಾಜಾಗಳ ಪಥಗಳಲ್ಲಿ ಈ ಪ್ರತ್ಯೇಕ ಲೈನ್ಗಳು ಯಾಕೆ ಎಂದರೆ ವಾಹನಗಳ ಕ್ಯೂ (ಸಾಲು) ದಟ್ಟಣೆ ಎಷ್ಟಿದೆ ಎಂಬುದನ್ನು ನೋಡಿಕೊಂಡು ಉಚಿತವಾಗಿ ಬಿಡಲು. ಪ್ರತಿ ಲೇನ್ನಲ್ಲೂ ಒಂದು ನಿರ್ದಿಷ್ಟ ದೂರದಲ್ಲಿ ಗರೆ ಇರುತ್ತದೆ. ಯಾವುದೇ ಲೇನ್ನಲ್ಲಿರುವ ವಾಹನಗಳ ಕ್ಯೂ ಆ ಗೆರೆಯನ್ನು ಮುಟ್ಟುವಂತಿದ್ದರೆ ಆ ಲೇನ್ನಲ್ಲಿ ಶುಲ್ಕ ವಸೂಲಿಗೆಂದು ವಾಹನಗಳನ್ನು ಕಾಯಿಸುವುದಿಲ್ಲ. ಗೇಟ್ ತೆರೆದು ವಾಹನಗಳು ಮುಂದೆ ಸಾಗಲು ಬಿಡಲಾಗುತ್ತದೆ.
ಟೋಲ್ ಶುಲ್ಕ ಪಾವತಿಸಲು ಫಾಸ್ಟ್ಯಾಗ್ (FASTag) ಬಳಕೆಯನ್ನು ಕಡ್ಡಾಯಗೊಳಿಸಿದ ನಂತರವೂ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದಟ್ಟಣೆ ಜಾಸ್ತಿಯಾಗಿದೆ ಎಂಬ ವರದಿಯ ಬೆನ್ನಲ್ಲೇ ಕೇಂದ್ರ ಸಾರಿಗೆ ಇಲಾಖೆ, ಪ್ರತಿ ಟೋಲ್ಗಳ ನೈಜ ಸಮಯದ ವಾಹನ ದಟ್ಟಣೆಯ ಪರಿಮಾಣದ ಬಗ್ಗೆ ನಿಗಾವಹಿಸಲು ಪ್ರಾರಂಭಿಸಿತ್ತು. ಅದರ ಬೆನ್ನಲ್ಲೇ ಇಂಥದ್ದೊಂದು ನಿರ್ಧಾರ ಹೊರಬಿದಿದ್ದಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳು, ಜನರಲ್ ಮ್ಯಾನೇಜರ್ ಮತ್ತು ಚೀಫ್ ಜನರಲ್ ಮ್ಯಾನೇಜರ್ಗಳು ಟೋಲ್ ಪ್ಲಾಜಾಗಳಲ್ಲಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಫಾಸ್ಟ್ಯಾಗ್ ಮೂಲಕ ಶುಲ್ಕ ಪಾವತಿಸುವವರ ಸಂಖ್ಯೆ ಹೆಚ್ಚಾಗಿದೆ. ಒಳನಾಡಿನ ಪ್ರದೇಶಗಳಲ್ಲಿ ಶೇ.60-70ರಷ್ಟಿದ್ದ ಫಾಸ್ಟ್ಯಾಗ್ ಮೂಲಕದ ಶುಲ್ಕ ಪಾವತಿ ಶೇ.90ಕ್ಕೆ ಏರಿದೆ ಎಂದು ಹೀಗೆ ಮೇಲ್ವಿಚಾರಣೆ ಮಾಡುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೇ, ಟೋಲ್ ಪ್ಲಾಜಾಗಳಲ್ಲಿ ವೇಗವಾಗಿ ಶುಲ್ಕ ವಸೂಲಿ ಮಾಡುವ ಮೂಲಕ ವಾಹನಗಳ ಸಾಲು ದಟ್ಟಣೆಯನ್ನು ಕಡಿಮೆ ಮಾಡಬೇಕು. ವೇಗವಾಗಿ ಶುಲ್ಕ ಪಾವತಿ ಪ್ರಕ್ರಿಯೆ ನಡೆಯಬೇಕು ಎಂಬ ಉದ್ದೇಶದಿಂದಲೇ ಫಾಸ್ಟ್ಯಾಗ್ನ್ನು ಈ ಫೆಬ್ರವರಿಯಿಂದ ಕಡ್ಡಾಯ ಮಾಡಲಾಗಿದೆ. ಮೊದಲಾದರೆ ಶುಲ್ಕ ಪಾವತಿಗೆ, ಅದಕ್ಕೆ ನೀಡುವ ರಸೀದಿಗೆ ಸಮಯ ಬೇಕಿತ್ತು. ಹಾಗಾಗಿ ವಾಹನ ದಟ್ಟಣೆ ಸಹಜ ಎನ್ನಬಹುದಿತ್ತು. ಆದರೆ ಇದೀಗ ಫಾಸ್ಟ್ಯಾಗ್ ಮೂಲಕವೇ ಶುಲ್ಕ ಪಾವತಿ ನಡೆಯುತ್ತಿರುವುದರಿಂದ ವಾಹನ ಸಾಲುಗಳ ದಟ್ಟಣೆಗೆ ಇನ್ಯಾವುದೇ ಕಾರಣವನ್ನೂ ಕೊಡಲಾಗುವುದಿಲ್ಲ. ಈಗ ಹಲವು ದಿನಗಳಿಂದ ನಾವು ಮೇಲ್ವಿಚಾರಣೆ ನಡೆಸುತ್ತಿದ್ದೇವೆ. ಒಂದಷ್ಟು ಬದಲಾವಣೆಗಳನ್ನೂ ಮಾಡಲಾಗಿದೆ ಎಂದೂ ಹೇಳಿದ್ದಾರೆ.
ಹೇಗಿರಲಿದೆ ಈ ಬಣ್ಣದ ರೇಖೆ ಇದೀಗ ಸಾರಿಗೆ ಸಚಿವಾಲಯ ಟೋಲ್ ಪ್ಲಾಜಾಗಳಲ್ಲಿ ಎಳೆಯಲು ನಿರ್ಧರಿಸಿರುವ ಬಣ್ಣದ ರೇಖೆಗಳು ಒಂದು ಟೋಲ್ ಪ್ಲಾಜಾದಿಂದ ಇನ್ನೊಂದಕ್ಕೆ ಭಿನ್ನವಾಗಿರುತ್ತವೆ. ಆಯಾ ಟೋಲ್ ಲೇನ್ಗಳಲ್ಲಿ ವಾಹನಗಳ ಸಂಚಾರ ದಟ್ಟಣೆ ಮತ್ತು ಆ ನಿರ್ದಿಷ್ಟ ತಾಣದಲ್ಲಿ ಲಭ್ಯ ಇರುವ ಟೋಲ್ ಲೇನ್ಗ ಸಂಖ್ಯೆಯನ್ನಾಧರಿಸಿ ಬಣ್ಣದ ರೇಖೆಯನ್ನು ಹಾಕಲಾಗುತ್ತದೆ. ಯಾವ ಪಥದಲ್ಲಿ ವಾಹನಗಳ ಕ್ಯೂ ಈ ಲೈನ್ನ್ನು ಮುಟ್ಟುತ್ತಿದೆಯೋ ಅಥವಾ ಗೆರೆಯನ್ನೂ ದಾಟಿದೆಯೋ ಆ ಲೇನ್ನ ಗೇಟ್ನ್ನು ತೆರೆಯಬೇಕು ಮತ್ತು ಶುಲ್ಕ ರಹಿತವಾಗಿ ವಾಹನಗಳನ್ನು ಬಿಡಬೇಕು ಎಂಬುದು ಕೇಂದ್ರ ಸಾರಿಗೆ ಸಚಿವಾಲಯದ ನಿರ್ಧಾರ.
ಇನ್ನೊಂದು ದೂರು! ಒಂದು ಟೋಲ್ ಪ್ಲಾಜಾ ಮೂಲಕ ಹಾದು ಹೋಗಿ 24 ಗಂಟೆಯೊಳಗೆ ಅದೇ ಟೋಲ್ ಪ್ಲಾಜಾ ಮೂಲಕ ವಾಪಸ್ ಬಂದರೆ ಶುಲ್ಕದಲ್ಲಿ ರಿಯಾಯಿತಿ ಕೊಡಬೇಕು ಎಂಬುದು ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ಈ ನಿಯಮ ಎಲ್ಲ ಕಡೆ ಅನ್ವಯ ಆಗುತ್ತಿಲ್ಲ. ಕೆಲವು ಟೋಲ್ಗೇಟ್ಗಳು ನಮ್ಮ ರಿಟರ್ನ್ ಪ್ರಯಾಣಕ್ಕೂ ಪೂರ್ತಿ ಶುಲ್ಕ ತುಂಬುತ್ತಿದ್ದೇವೆ ಎಂದು ಕೆಲವು ಪ್ರಯಾಣಿಕರು ದೂರು ನೀಡಿದ್ದಾರೆ. ಇದನ್ನು ಪರಿಶೀಲನೆ ಮಾಡಿ, ಆದಷ್ಟು ಶೀಘ್ರವೇ ಸರಿಪಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:NSE Nifty Glitches: ತಾಂತ್ರಿಕ ಸಮಸ್ಯೆಯಿಂದ ನಿಫ್ಟಿ ವಹಿವಾಟು ಸ್ಥಗಿತ
Published On - 2:27 pm, Wed, 24 February 21