Sign In

By signing in or creating an account, you agree with Associated Broadcasting Company's Terms & Conditions and Privacy Policy.

FASTag ಕಡ್ಡಾಯ: ಹೆಚ್ಚಾಯ್ತು ಗೊಂದಲ, ಟೋಲ್​ಗಳಲ್ಲಿ ಮಾತಿನ ಚಕಮಕಿ

ಈ ಮೊದಲು ಫಾಸ್ಟ್ಯಾಗ್ ಇಲ್ಲದಿದ್ದರೂ ಹಣ ಪಾವತಿಸಿದರೆ ಟೋಲ್‌ನಲ್ಲಿ ವಾಹನ ಪಾಸ್ ಆಗುತ್ತಿತ್ತು. ಆದರೆ ಇನ್ನು ಮುಂದೆ ಇದಕ್ಕೆ ಅವಕಾಶ ಇರುವುದಿಲ್ಲ. ಫಾಸ್ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಹಣ ಪಾವತಿ ಕಡ್ಡಾಯವಾಗಿದೆ.

FASTag ಕಡ್ಡಾಯ: ಹೆಚ್ಚಾಯ್ತು ಗೊಂದಲ, ಟೋಲ್​ಗಳಲ್ಲಿ ಮಾತಿನ ಚಕಮಕಿ
ಟೋಲ್​ಗಳಲ್ಲಿ ಫಾಸ್ಟ್ಯಾಗ್​ ಕಡ್ಡಾಯ ಶುಲ್ಕ ಅಳವಡಿಸಲಾಗಿದೆ
Follow us
preethi shettigar
|

Updated on:Feb 17, 2021 | 9:38 AM

ಫೆಬ್ರವರಿ 15ರ ಮಧ್ಯರಾತ್ರಿಯಿಂದ ಎಲ್ಲಾ ಟೋಲ್‌ಗಳಲ್ಲಿ FASTag ಕಡ್ಡಾಯ ಎಂಬ ಕೇಂದ್ರ ಸರ್ಕಾರದ ಆದೇಶ ಕರ್ನಾಟಕ ರಾಜ್ಯದಲ್ಲಿಯೂ ಜಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯ ಟೋಲ್​ ಲೇನ್‌ಗಳಲ್ಲಿ ಫಾಸ್ಟ್ಯಾಗ್ ಇಲ್ಲದಿದ್ದವರು ದುಪ್ಪಟ್ಟು ಹಣ ತೆರುವಂತಾಗಿದೆ. ಈ ಮೊದಲು ಫಾಸ್ಟ್ಯಾಗ್ ಇಲ್ಲದಿದ್ದರೂ ಹಣ ಪಾವತಿಸಿದರೆ ಟೋಲ್‌ನಲ್ಲಿ ವಾಹನ ಪಾಸ್ ಆಗುತ್ತಿತ್ತು. ಆದರೆ ಇನ್ನು ಮುಂದೆ ಇದಕ್ಕೆ ಅವಕಾಶ ಇರುವುದಿಲ್ಲ. ಫಾಸ್ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಹಣ ಪಾವತಿ ಕಡ್ಡಾಯವಾಗಿದೆ.

ಫಾಸ್ಟ್ಯಾಗ್ ಇಲ್ಲದವರಿಗೆ ಟೋಲ್​ ಸಿಬ್ಬಂದಿ ಕೇವಲ ಒನ್ ಸೈಡ್ ಟೋಕನ್ ನೀಡುತ್ತಿದ್ದಾರೆ. ಇದಕ್ಕೂ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತಿದೆ. ಫಾಸ್ಟ್ಯಾಗ್​ ಇರುವ ವಾಹನಗಳಿಗೆ ಒಮ್ಮೆ ಟೋಲ್ ದಾಟಲು 20 ರೂಪಾಯಿ ಶುಲ್ಕವಿದ್ದರೆ, ಫಾಸ್ಟ್ಯಾಗ್ ಇಲ್ಲದ ವಾಹನಗಳಿಂದ 40 ರೂಪಾಯಿ ತೆರಬೇಕಾಗುತ್ತದೆ.

ದೇಶದಲ್ಲಿ ಪ್ರಸ್ತುತ ಶೇ 90ರಷ್ಟು ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಕೆ ಆಗಿದೆ. ಇನ್ನೂ ಶೇ 10ರಷ್ಟು ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಕೆ ಆಗಿಲ್ಲ. ಫಾಸ್ಟ್ಯಾಗ್ ಅಳವಡಿಕೆಗೆ ಕೇಂದ್ರ ಸರ್ಕಾರ ಫೆ 15ರವರೆಗೆ ಗಡುವು ನೀಡಿತ್ತು. ಆದರೆ ಗಡುವು ಮುಗಿದಿದ್ದರೂ ಕೆಲವರು ಫಾಸ್ಟ್ಯಾಗ್ ಅಳವಡಿಸಿಕೊಳ್ಳಲು ಚಾಲಕರು ಹಿಂದೇಟು ಹಾಕಿದ್ದಾರೆ. ಈಗ ದುಪ್ಪಟ್ಟು ಹಣ ಪಾವತಿಸುವಂತಾಗಿದೆ.

ಸದ್ಯ ಈ ಬಾರಿ ಗಡುವು ವಿಸ್ತರಣೆ ಮಾಡುವುದಿಲ್ಲ. ಇಂದಿನಿಂದಲೇ ಫಾಸ್ಟ್ಯಾಗ್ ಕಡ್ಡಾಯ ಎಂದು ಕೇಂದ್ರ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಇಂದಿನಿಂದ ಫಾಸ್ಟ್ಯಾಗ್ ಇಲ್ಲದ ವಾಹನಗಳು ಒಂದಕ್ಕೆ ಎರಡರಷ್ಟು ಸುಂಕ ಕಟ್ಟಿ ಟೋಲ್ ದಾಟಬೇಕಾಗಿದೆ. ರಾಜ್ಯದ ವಿವಿಧೆಡೆ ಇಂದು ಕಂಡು ಬಂದ ದೃಶ್ಯಗಳು ಹೀಗಿದ್ದವು.

ದೇವನಹಳ್ಳಿಯಲ್ಲಿ ವಾಪಸ್ ಹೋದವು ವಾಹನಗಳು ಫಾಸ್ಟ್ಯಾಗ್ ಇಲ್ಲದ ವಾಹನಗಳ ಚಾಲಕರಿಂದ ಸಾದಹಳ್ಳಿ ಟೋಲ್ ಬಳಿ 190 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿರುವ ಈ ಟೋಲ್ ಬಳಿ ಮೊದಲು 95 ರೂಪಾಯಿ ಶುಲ್ಕವಿತ್ತು. ಇಂದಿನಿಂದ ಫಾಸ್ಟ್ಯಾಗ್ ಕಡ್ಡಾಯವಾದ ಹಿನ್ನೆಲೆಯಲ್ಲಿ ಫಾಸ್ಟ್ಯಾಗ್ ಇಲ್ಲದವರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಫಾಸ್ಟ್ಯಾಗ್ ಇಲ್ಲದ ಕೆಲ ವಾಹನಗಳು ಟೋಲ್​ನಿಂದ ವಾಪಸ್ ಹೋದವು. ಕೆಲ ಕಾರ್ ಚಾಲಕರು ದುಪ್ಪಟ್ಟು ಹಣ ಪಾವತಿಸಲು ನಿರಾಕರಸಿ ವಾಗ್ವಾದ ಮಾಡಿದರು.

ನನ್ನ ಕಾರಿಗೆ ಫಾಸ್ಟ್ಯಾಗ್ ಇದೆ, ಆದರೆ ರೀಚಾರ್ಜ್ ಮಾಡಿಸಿಲ್ಲ. ಹೀಗಾಗಿ ನಾನು ದುಪ್ಪಟ್ಟು ಹಣ ಪಾವತಿಸುವುದಿಲ್ಲ ಎಂದು ಕಾರ್ ಚಾಲಕರು ವಾದಿಸಿದರು. 95 ರೂಪಾಯಿಯಷ್ಟೇ ಪಾವತಿ ಮಾಡುತ್ತೇನೆಂದು ಪಟ್ಟುಹಿಡಿದರು. ಈ ಹಿನ್ನೆಲೆಯಲ್ಲಿ ಟೋಲ್ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.

ಫಾಸ್ಟ್ಯಾಗ್ ಇಲ್ಲದೆ ಬಂದ ವಾಹನ ಚಾಲಕರು ದುಪ್ಪಟ್ಟು ಶುಲ್ಕ ಪಾವತಿಗೆ ನಿರಾಕರಿಸಿದ್ದರಿಂದ ಟೋಲ್ ಸಿಬ್ಬಂದಿ ಫಾಸ್ಟ್ಯಾಗ್ ಕಡ್ಡಾಯದ ಆದೇಶ ಪ್ರತಿಯನ್ನು ತೋರಿಸಿದರು. ದುಪ್ಪಟ್ಟು ಹಣ ನೀಡಲು ನಿರಾಕರಿಸುವವರ ಮನವೊಲಿಸಲು ಯತ್ನಿಸಿದರು. ದುಪ್ಪಟ್ಟು ಹಣ ನೀಡಲು ಮನಸ್ಸಿಲ್ಲದ ಕೆಲ ಚಾಲಕರು ಪರ್ಯಾಯ ಮಾರ್ಗದ ಮೊರೆ ಹೋಗಿ, ಸುಮಾರು 5 ಕಿ.ಮೀ. ಸುತ್ತಿಕೊಂಡು ಏರ್‌ಪೋರ್ಟ್‌ ತಲುಪಿದರು.

ನೆಲಮಂಗಲ ಟೋಲ್​ನಲ್ಲೂ ದುಪ್ಪಟ್ಟು ಶುಲ್ಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ನವಯುಗ ಟೋಲ್‌ನಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಕಾರು, ಜೀಪ್‌ಗಳಿಗೆ 40 ರೂಪಾಯಿ, ಎಲ್‌ಸಿವಿಗೆ 70 ರೂಪಾಯಿ, ಟ್ರಕ್ ಮತ್ತು ಬಸ್ 150 ರೂಪಾಯಿ, ಮಲ್ಟಿ ಆ್ಯಕ್ಸಲ್ ವ್ಹೀಲ್ಸ್​ಗೆ 250 ರೂಪಾಯಿಯಂತೆ ನಿಗದಿ ಪಡಿಸಲಾಗಿದೆ.

ಕೇಂದ್ರ ಸಾರಿಗೆ ಇಲಾಖೆ ರೂಲ್ಸ್ ‌ಫಾಲೋ ಮಾಡುತ್ತಿರುವ ನೆಲಮಂಗಲ ಟೋಲ್ ಸಿಬ್ಬಂದಿಗಳು, ಫಾಸ್​ಟ್ಯಾಗ್ ಇಲ್ಲದೇ ಬಂದ ಲಾರಿ ಚಾಲಕನಿಂದ ಡಬಲ್ ಚಾರ್ಜ್ ವಸೂಲಿ ಮಾಡಲು ಮುಂದಾದಾಗ ಲಾರಿ ಚಾಲಕ ಈಗ ಹೇಳಿದರೆ ಹೇಗೆ ಎಂದು ತನ್ನ ಅಳಲು ತೋಡಿಕೊಂಡ. ಇದಕ್ಕೆ ಉತ್ತರಿಸಿದ ಟೋಲ್ ಸಿಬ್ಬಂದಿ ಕಳೆದ ಆರು ತಿಂಗಳಿನಿಂದ ಮಾಹಿತಿ ನೀಡಿದ್ದೀವಿ, ಟಿವಿ ನೋಡಿಲ್ವಾ ಎಂದು ಹೇಳಿದ್ದಾರೆ. ನಂತರದಲ್ಲಿ 130 ರೂಪಾಯಿ ಕಟ್ಟಿದ ತಮಿಳುನಾಡು ಲಾರಿ ಚಾಲಕ ಬೇಸರದಿಂದ ಮುಂದುವರಿದ.

ಬೆಂಗಳೂರಿನ ಹೆದ್ದಾರಿಗಳಲ್ಲಿ ನ್ಯೂ ರೂಲ್ಸ್ ಬೆಂಗಳೂರಿನ 8ನೇ ಮೈಲಿ ಬಳಿಯಿರುವ ಟೋಲ್​ನಲ್ಲಿ ವಾಹನಗಳ ಕ್ಯೂ ಹೆಚ್ಚಾದ ಹಿನ್ನಲೆ ಎರಡು ಕ್ಯಾಶ್ ಲೇನ್ ಮಾಡಿದ ಟೋಲ್ ಸಿಬ್ಬಂದಿಗಳು ದುಪ್ಪಟ್ಟು ಹಣವನ್ನು ಸ್ವೀಕರಿಸುತ್ತಿದ್ದು, ಕಾರು ಟೋಲ್ ಶುಲ್ಕ- ಮೊದಲು 20ರೂಪಾಯಿ ಇತ್ತು, ಈಗ 40 ರೂಪಾಯಿ ಆಗಿದೆ. ಎಲ್​ಸಿವಿ ಟೋಲ್ ಶುಲ್ಕಮೊದಲು 35 ರೂಪಾಯಿ ಇತ್ತು, ಈಗ 70 ರೂಪಾಯಿ ಆಗಿದೆ. ಟ್ರಕ್, ಬಸ್ ಟೋಲ್ ಶುಲ್ಕ ಮೊದಲು 75ರೂಪಾಯಿ ಇತ್ತು, ಈಗ 150ರೂಪಾಯಿ ಆಗಿದೆ. ಬೃಹತ್ ವಾಹನಗಳಿಗೆ ಮೊದಲು 125ರೂಪಾಯಿ ಈಗ 250 ರೂಪಾಯಿ ಆಗಿದೆ ಎಂದು ಹೇಳಿದರು.

ಟೋಲ್​ನ ಎಲ್ಲಾ ಲೇನ್​ಗಳ ಫಾಸ್ಟ್ಯಾಗ್​ಗಳನ್ನು ಕಡ್ಡಾಯಗೊಳಿಸಿದ ಎನ್​ಎಚ್​ಎಐ ಕೇವಲ ಒಂದು ಲೇನ್​ನಲ್ಲಿ ಮಾತ್ರ ಕ್ಯಾಶ್​ನಲ್ಲಿ ಹಣ ಪಡೆದು ನೋಂದಣಿ ಮಾಡಿಕೊಳ್ಳುತ್ತಿದ್ದು, ಆ ಮೂಲಕ ವಾಹನಗಳಿಂದ ದುಪ್ಪಟ್ಟು ಹಣ ತೆಗೆದುಕೊಳ್ಳಲಾಯಿತು. ಇನ್ನು ಫಾಸ್ಟ್ಯಾಗ್ ಇಲ್ಲದ ವಾಹನಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಟೋಲ್ ಶುಲ್ಕ ಕಟ್ಟಿಸಿಕೊಳ್ಳಲು 2 ಲೇನ್‌ಗಳ ವ್ಯವಸ್ಥೆ ಮಾಡಲಾಯಿತು.

ಈ ವೇಳೆ ಬೇಸರಗೊಂಡ ಚಾಲಕರು ಸರ್ಕಾರ ತನ್ನ ಲಾಭಕ್ಕಾಗಿ ಫಾಸ್ಟ್ಯಾಗ್ ಕಡ್ಡಾಯ ಮಾಡಿದೆ. ಫಾಸ್ಟ್ಯಾಗ್ ಅಳವಡಿಸಿಕೊಂಡಿದ್ದರೂ ಏನು ಪ್ರಯೋಜನವಿಲ್ಲ. ಟೋಲ್‌ನಲ್ಲಿ ಕಾಯುವುದು ಮಾತ್ರ ತಪ್ಪಿಲ್ಲ. ಹೊಸ ನಿಯಮ ಜಾರಿಯಿಂದ ನಮಗೆ ಹೊರೆಯಾಗುತ್ತಿದೆ. ಟೋಲ್‌ಗಳಲ್ಲಿ ಯಾವುದೇ ರೀತಿಯ ಬದಲಾವಣೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರ ಫಾಸ್​​ಟ್ಯಾಗ್ ಕಡ್ಡಾಯ ವಿಜಯಪುರ ‌ನಗರದ ಹೊರ ಭಾಗದಲ್ಲಿರುವ ರಾಷ್ಟ್ರಿಯ ಹೆದ್ದಾರಿ 50 ರಲ್ಲಿನ ಟೋಲ್ ಗೇಟ್​ನಲ್ಲಿ ಫಾಸ್ಟ್ಯಾಗ್ ಕಡ್ಡಾಯವಾದ ಹಿನ್ನೆಲೆಯಲ್ಲಿ ಕೆಲ ಲಾರಿ ಚಾಲಕರಿಗೆ ಸಮಸ್ಯೆಯಾಗಿದೆ. ಡಬಲ್ ದರ ನೀಡಲು ನಿರಾಕರಿಸಿದ್ದು, ಮಧ್ಯರಾತ್ರಿ ಫಾಸ್ಟ್​ಟ್ಯಾಗ್ ಕಡ್ಡಾಯ ಆದೇಶ ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಹೆದ್ದಾರಿ ಬದಿಯಲ್ಲಿ ಕೆಲ ವಾಹನಗಳು ಫಾಸ್ಟ್​ಟ್ಯಾಗ್​ ಇಲ್ಲದೆ ನಿಂತು ಪರದಾಡುವ ಪರಿಸ್ಥಿತಿಯು ಎದುರಾಗಿತ್ತು.

ಹುಬ್ಬಳ್ಳಿ: ಡಬಲ್ ಹಣ ಇಲ್ಲ ರಾಷ್ಟ್ರೀಯ ಹೆದ್ದಾರಿ 4 ರಲ್ಲಿರುವ ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಿರೋ ಬಳಿಯಿರುವ ಟೋಲ್​ನಲ್ಲಿ ಭಿತ್ತಿ ಪತ್ರದ ಮೂಲಕ ಮಾಹಿತಿ ಅಂಟಿಸಿರುವ ಸಿಬ್ಬಂದಿಗಳು ಫಾಸ್ಟ್ಯಾಗ್ ಇಲ್ಲದ ವಾಹನಗಳಿಂದ ಡಬಲ್ ಹಣ ಸ್ವಿಕರಿಸಲಿಲ್ಲ. ಯಾವ ಆಧಾರದ ಮೇಲೆ ಡಬಲ್ ಹಣ ತಗೆದುಕೊಳ್ಳಬೇಕು ಎನ್ನುವ ಮಾಹಿತಿ ಇಲ್ಲ. ನಮ್ಮಲ್ಲಿ ಇನ್ನು ಸಾಫ್ಟ್​ವೇರ್ ಅಪಡೇಟ್ ಆಗಿಲ್ಲ ಎಂದು ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಟೋಲ್‌ನಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಟೋಲ್‌ನಿಂದ ವಾಹನ ಸವಾರರು ವಾಪಸಾಗುತ್ತಿದ್ದು, ಮ್ಯಾಕ್ಸಿಕ್ಯಾಬ್ ಡ್ರೈವರ್ ತಮ್ಮ ವಾಹನದಲ್ಲಿದ್ದ ಜನರನ್ನ ಟೋಲ್ ಬಳಿಯೇ ಇಳಿಸಿ ವಾಪಾಸ್ಸಾಗಿದ್ದಾರೆ.

ಮಂಗಳೂರು ಫಾಸ್​​ಟ್ಯಾಗ್ ಕಡ್ಡಾಯ ಟೋಲ್ ಶುಲ್ಕ ಕಾಣದಂತೆ ಇಲ್ಲಿನ ಸಿಬ್ಬಂದಿಗಳು ಗಮ್ ಟೇಪ್ ಹಾಕಿ ಅಂಟಿಸಿದ್ದು, ಫಾಸ್​​ಟ್ಯಾಗ್ ಇಲ್ಲದವರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ದಾರೆ. ಇನ್ನು ಹಳೆಯ ದರಗಳನ್ನ ನೋಡಿ ವಾಹನ ಸವಾರರು ಕಿರಿಕ್ ಮಾಡಿದ್ದು, ಈ ಹುನ್ನಾರಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಹಳೇ ಶುಲ್ಕವೇ ಅಸ್ತಿತ್ವದಲ್ಲಿ ದೇಶದಾದ್ಯಂತ ಎಲ್ಲಾ ಟೋಲ್‌ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯವಾಗಿದೆ. ಆದರೆ ಮೈಸೂರು -ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್‌ನಲ್ಲಿ ಈ ಆದೇಶ ಜಾರಿಯಾಗಿಲ್ಲ. ಮೈಸೂರಿನಲ್ಲಿ ಎಂದಿನಂತೆಯೇ ಟೋಲ್ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಕಾರುಗಳಿಗೆ 50 ರೂಪಾಯಿ, ಮಿನಿಬಸ್ 75 ರೂಪಾಯಿ, ಟ್ರಕ್ 160 ರೂಪಾಯಿ, 3ಆ್ಯಕ್ಸೆಲ್ ವಾಹನ 175 ರೂಪಾಯಿ, 4 ರಿಂದ 6 ಆ್ಯಕ್ಸೆಲ್ 255 ರೂಪಾಯಿ, 7 ಆ್ಯಕ್ಸೆಲ್ ವಾಹನ 310 ರೂಪಾಯಿ ಹಣ ಸಂಗ್ರಹಿಸಲಾಗುತ್ತಿದೆ.

ತುಮಕೂರು ಫಾಸ್​​ಟ್ಯಾಗ್ ಕಡ್ಡಾಯ ಫಾಸ್ಟ್ಯಾಗ್ ಕಡ್ಡಾಯ ಹಿನ್ನೆಲೆಯಲ್ಲಿ ತುಮಕೂರಿನ ಜಾಸ್ ಟೋಲ್​ನಲ್ಲಿ ಟ್ಯಾಗ್ ಇಲ್ಲದ ವಾಹನಗಳಿಗೆ ದುಪ್ಪಟ್ಟು ಹಣ ವಸೂಲಿ ಮಾಡಿದ್ದಾರೆ. ಆದರೆ ಹಣ ನೀಡಲು ವಾಹನ ಚಾಲಕರು ಮಾತ್ರ ಹಿಂದೇಟು ಹಾಕಿದ್ದು, ಟೋಲ್ ಸಿಬ್ಬಂದಿ ಜೊತೆ ಚಾಲಕರು ವಾಗ್ವಾದ ನಡೆಸಿದ್ದಾರೆ. ತುಮಕೂರಿನ ಕ್ಯಾತ್ಸಂದ್ರ ಬಳಿಯಿರುವ ಜಾಸ್ ಟೋಲ್ ಬಳಿಯಿರುವ 48 ಹೆದ್ದಾರಿಯಲ್ಲಿ ಡಬಲ್ ಹಣ ವಸೂಲಿ ಮಾಡುತ್ತಿರುವುದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದು, ಟೋಲ್ ಹಣ ಹೆಚ್ಚು ಮಾಡಿದ್ದರಿಂದ ಜನರಿಗೆ ಹೊಡೆತ ಬೀಳುತ್ತಿದೆ. ಪೆಟ್ರೋಲ್, ಡಿಸೆಲ್ ಅಡುಗೆ ಎಣ್ಣೆ ಎಲ್ಲವು ಜಾಸ್ತಿಯಾಗಿದೆ. ಹೀಗೆ ಆದಲ್ಲಿ ಜನರು ರೊಚ್ಚಿಗೇಳಬೇಕಾಗುತ್ತದೆ ಎಂದು ವಾಹನ ಸಂಚಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸಕೋಟೆ ಫಾಸ್ಟ್ಯಾಗ್  ಕಡ್ಡಾಯ ಟೋಲ್​ನಲ್ಲಿ ಸಿಬ್ಬಂದಿ ಮತ್ತು ವಾಹನ ಸವಾರರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ದುಪ್ಪಟ್ಟು ಹಣ ಕೇಳುತ್ತಿದ್ದಂತೆ ಕೆಲವು ಕಾರುಗಳು ಹಿಂದಕ್ಕೆ ಸರಿದರೆ ಇನ್ನು ಫಾಸ್​​ಟ್ಯಾಗ್ ಇಲ್ಲದ ವಾಹನಗಳಿಗೆ ಟೋಲ್ ಬಳಿಯೇ ಫಾಸ್ಟ್ಯಾಗ್​ ನೀಡಲು ವ್ಯವಸ್ಥೆ ಮಾಡಲಾಗಿದೆ.

ಕೋಲಾರ ಫಾಸ್ಟ್ಯಾಗ್ ಕಡ್ಡಾಯ ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ದುಪ್ಪಟ್ಟು ಶುಲ್ಕ ಹಿನ್ನೆಲೆ ಟೋಲ್ ಗೇಟ್ ಬಳಿ ವಾಹನ ಸವಾರರಿಂದ ಕಿರಿಕ್ ಹೀಗಾಗಿ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹನುಮನಹಳ್ಳಿ ಟೋಲ್ ಬಳಿ ಪೊಲೀಸ್ ಭದ್ರತೆ ಮಾಡಲಾಗಿದೆ.

ಹಾವೇರಿ ಫಾಸ್ಟ್ಯಾಗ್ ಕಡ್ಡಾಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ನಲ್ಲಿ ದುಪ್ಪಟ್ಟು ಹಣ ವಸೂಲಿ. ಕೆಲವು ವಾಹನ ಸವಾರರಿಂದ ಟೋಲ್‌ ಸಿಬ್ಬಂದಿ ಜೊತೆ ಮಾತಿನ ಚಕಮಕಿ. ದುಪ್ಪಟ್ಟು ಟೋಲ್ ನೀಡುವುದಿಲ್ಲ ಎಂದು ಗಲಾಟೆ ಮಾಡಿದ್ದು, ಕೊನೆಗೆ ದುಪ್ಪಟ್ಟು ಹಣ ನೀಡಿ ಹೋದ ವಾಹನ ಸವಾರರು.

ಗದಗ ಫಾಸ್ಟ್​ಟ್ಯಾಗ್ ಕಡ್ಡಾಯ ಗದಗ ತಾಲೂಕಿನ ಪಾಪನಾಶಿ ಬಳಿಯ ಟೋಲ್ ಗೇಟ್ ಬಳಿ ಯಾವುದೇ ಬದಲಾವಣೆಗಳಿಲ್ಲ ಎಂದಿನಂತೆ ವಾಹನ ಮಾಲೀಕರ ಬಳಿ ಟೋಲ್​ನಲ್ಲಿ ಶುಲ್ಕ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: FASTag ಟೋಲ್​ಗಳಲ್ಲಿ ಫಾಸ್ಟ್​​ಟ್ಯಾಗ್​ ಕಡ್ಡಾಯ.. ಇಲ್ಲದಿದ್ರೆ ಕಟ್ಟಬೇಕಾಗುತ್ತೆ ದುಬಾರಿ ಹಣ

Published On - 7:16 pm, Tue, 16 February 21

ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್