ನಾವು ಯಾರೂ ಮಾಡಿರದ ಸಾಧನೆ ರಶ್ಮಿಕಾ ಮಂದಣ್ಣ ಮಾಡಿದ್ದಾರೆ: ನಾಗಾರ್ಜುನ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಅನೇಕ ಸ್ಟಾರ್ ನಟರ ಸಿನಿಮಾಗಳು ಕೂಡ ಈ ಸಾಧನೆಯನ್ನು ಮಾಡಿಲ್ಲ. ಆ ಬಗ್ಗೆ ನಾಗಾರ್ಜುನ ಮಾತಾಡಿದ್ದಾರೆ. ‘ಕುಬೇರ’ ಸಿನಿಮಾದ ಹೊಸ ಹಾಡಿನ ಬಿಡುಗಡೆ ವೇಳೆ ರಶ್ಮಿಕಾ ಅವರನ್ನು ನಾಗಾರ್ಜುನ ಹೊಗಳಿದ್ದಾರೆ.

80ರ ದಶಕದಿಂದಲೂ ನಟ ನಾಗಾರ್ಜುನ (Nagarjuna) ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಟಾಲಿವುಡ್ನಲ್ಲಿ ಅವರು ಸ್ಟಾರ್ ನಟನಾಗಿ ಮಿಂಚಿದ್ದಾರೆ. ಆದರೆ ಈಗ ಅವರು ತಮಗಿಂತಲೂ 34 ವರ್ಷ ಕಿರಿಯ ನಟಿಯನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ‘ನಾವು ಯಾರೂ ಮಾಡಿರದ ಸಾಧನೆಯನ್ನು ರಶ್ಮಿಕಾ ಮಂದಣ್ಣ ಮಾಡಿದ್ದಾರೆ’ ಎಂದು ಪ್ರಶಂಸೆಯ ಮಳೆ ಸುರಿಸಿದ್ದಾರೆ. ಮುಂಬೈನಲ್ಲಿ ಅವರು ಮಾಧ್ಯಮಗಳ ಎದುರು ಅವರು ಈ ಮಾತು ಹೇಳಿದ್ದಾರೆ. ಇದನ್ನು ಕೇಳಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ನಟಿಯ ಇತ್ತೀಚಿನ ಬಾಕ್ಸ್ ಆಫೀಸ್ ಸಾಧನೆಯನ್ನು ಪರಿಗಣಿಸಿ ನಾಗಾರ್ಜುನ ಅವರು ಈ ರೀತಿ ಹೇಳಿದ್ದಾರೆ.
‘ಕುಬೇರ’ ಸಿನಿಮಾದಲ್ಲಿ ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ಅವರು ನಟಿಸಿದ್ದಾರೆ. ಈ ಸಿನಿಮಾ ಜೂನ್ 20ರಂದು ಬಿಡುಗಡೆ ಆಗಲಿದೆ. ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಹಲವು ಕಡೆಗಳಿಗೆ ತೆರಳಿ ಪ್ರಚಾರ ಮಾಡಲಾಗುತ್ತಿದೆ. ಪ್ರಚಾರ ಕಾರ್ಯದಲ್ಲಿ ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ಭಾಗಿಯಾಗಿದ್ದಾರೆ. ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾಗಾರ್ಜುನ ಮಾತನಾಡಿದರು.
‘ಈ ಹುಡುಗಿ ನಿಜಕ್ಕೂ ಪ್ರತಿಭಾವಂತೆ. ಕಳೆದ ಮೂರು ವರ್ಷಗಳಿಂದ ಈಕೆಯ ಸಿನಿಮಾಗಳನ್ನು ಗಮನಿಸಿ, ಅದ್ಭುತವಾಗಿವೆ. ನಾವು ಯಾರೂ ಕೂಡ 2 ಸಾವಿರ ಕೋಟಿ, 3 ಸಾವಿರ ಕೋಟಿಯ ಕಲಾವಿದರಲ್ಲ. ಈಕೆ ಮಾತ್ರ ನಮ್ಮನ್ನೆಲ್ಲ ಮೀರಿಸಿದ್ದಾಳೆ’ ಎಂದು ನಾಗಾರ್ಜುನ ಅವರು ರಶ್ಮಿಕಾರನ್ನು ಮನಸಾರೆ ಹೊಗಳಿಸಿದ್ದಾರೆ.
‘ರಶ್ಮಿಕಾ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಡಬ್ಬಿಂಗ್ ವೇಳೆ ನಾನು ಸಿನಿಮಾ ನೋಡಿದಾಗ ನಿನಗೆ ಕರೆ ಮಾಡಿದೆ. ಡಬ್ಬಿಂಗ್ ಥಿಯೇಟರ್ನಿಂದಲೇ ಕರೆ ಮಾಡಿದೆ’ ಎಂದಿದ್ದಾರೆ ನಾಗಾರ್ಜುನ. ‘ಈ ಸಿನಿಮಾದಲ್ಲಿ ರಶ್ಮಿಕಾ ತುಂಬ ಬ್ರಿಲಿಯಂಟ್ ಆಗಿದ್ದಾರೆ. ನಿಮ್ಮನ್ನೆಲ್ಲ ನಗಿಸುತ್ತಾರೆ’ ಎಂದು ನಾಗಾರ್ಜುನ ಅವರು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸುವಂತೆ ಮಾತನಾಡಿದ್ದಾರೆ.
ಇದನ್ನೂ ಓದಿ: ಸಿಕ್ಕಾಪಟ್ಟೆ ಗ್ಲಾಮರ್ ಪಾತ್ರ ಮಾಡಲು ಒಪ್ಪಿಕೊಂಡ ರಶ್ಮಿಕಾ ಮಂದಣ್ಣ; ಯಾವುದು ಈ ಸಿನಿಮಾ?
ಶೇಖರ್ ಕಮ್ಮುಲ ಅವರು ‘ಕುಬೇರ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ದೇವಿ ಶ್ರೀ ಪ್ರಸಾದ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರದ 3ನೇ ಹಾಡನ್ನು ಮುಂಬೈನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಅವರು ಸೂಪರ್ ಸಕ್ಸಸ್ ಪಡೆಯುವ ನಿರೀಕ್ಷೆ ಇದೆ. ಈಗಾಗಲೇ ಅವರು ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗಿವೆ. ‘ಪುಷ್ಪ 2’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಗಳಿಸಿತು. ‘ಅನಿಮಲ್’ ಮತ್ತು ‘ಛಾವ’ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದವು. ಹೀಗೆ, ರಶ್ಮಿಕಾ ಮಂದಣ್ಣ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿವೆ. ಹಾಗಾಗಿ ಅವರಿಗೆ ಬೇಡಿಕೆ ಕೂಡ ಹೆಚ್ಚಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.