ರಾಜಸ್ಥಾನದಲ್ಲಿ ಬನಾಸ್ ನದಿಯಲ್ಲಿ ಸ್ನಾನ ಮಾಡುತ್ತಿದ್ದ 8 ಸ್ನೇಹಿತರು ಮುಳುಗಿ ಸಾವು; ಮೂವರ ರಕ್ಷಣೆ
ರಾಜಸ್ಥಾನದಲ್ಲಿ ಟೋಂಕ್‌ನ ಬನಾಸ್ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನಾಲ್ವರು ಗೆಳೆಯರು ಮುಳುಗಿ ಮೃತಪಟ್ಟಿದ್ದಾರೆ. ಮೂವರನ್ನು ರಕ್ಷಿಸಲಾಗಿದೆ. ಸ್ಥಳೀಯ ನಿವಾಸಿಗಳು, ಆಡಳಿತದ ಸಹಾಯದಿಂದ ಹಲವು ಗಂಟೆಗಳ ಕಾಲ ಶೋಧ ಕಾರ್ಯಾಚರಣೆಯ ನಂತರ ಉಳಿದ ಎಲ್ಲಾ ಶವಗಳನ್ನು ಹೊರತೆಗೆಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.

ಟೋಂಕ್, ಜೂನ್ 10: ಇಂದು (ಮಂಗಳವಾರ) ರಾಜಸ್ಥಾನದ ಟೋಂಕ್ ಜಿಲ್ಲೆಯ ಬನಾಸ್ ನದಿಯಲ್ಲಿ ಮುಳುಗಿ 8 ಯುವಕರು ಸಾವನ್ನಪ್ಪಿದ ದುರಂತ ಘಟನೆ (Shocking News) ಸಂಭವಿಸಿದೆ. ಗೆಳೆಯರ ಗುಂಪು ಈಜಲು ನದಿಗೆ ಹೋಗಿತ್ತು ಎಂದು ವರದಿಯಾಗಿದೆ. ಆದರೆ, ಅವರ ಈ ಸಂತೋಷದ ಪ್ರವಾಸವು ದುರಂತವಾಗಿ ಮಾರ್ಪಟ್ಟಿತು. ಮೃತರು ಟೋಂಕ್ ಮತ್ತು ಜೈಪುರ ಜಿಲ್ಲೆಗಳ ವಿವಿಧ ಭಾಗಗಳಿಂದ ಬಂದವರು ಎನ್ನಲಾಗಿದೆ. ಅವರು ಪಿಕ್ನಿಕ್‌ಗೆ ಹೋಗಿದ್ದರು. ಈ ಘಟನೆ ಸಂಭವಿಸಿದಾಗ ನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿದ್ದರು ಎಂದು ಹೇಳಲಾಗಿದೆ.
ಮಾಹಿತಿಯ ಪ್ರಕಾರ, 25ರಿಂದ 30 ವರ್ಷ ವಯಸ್ಸಿನ 11 ಯುವಕರ ಗುಂಪು ಸ್ನಾನ ಮಾಡಲು ನದಿಗೆ ಇಳಿದರು. ಆದರೆ, ಆಳವಾದ ನೀರಿನಲ್ಲಿ ಇಳಿದಾಗ ದುರಂತ ಸಂಭವಿಸಿತು. ಅವರನ್ನು ಉಳಿಸುವ ಪ್ರಯತ್ನಗಳ ಹೊರತಾಗಿಯೂ ಪ್ರಜ್ಞೆ ತಪ್ಪಿದ್ದ 8 ಜನರನ್ನು ಹೊರಗೆಳೆದು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರು ಬರುವಾಗಲೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಮೇಘಾಲಯ ಕೊಲೆ ಪ್ರಕರಣ; ಆ ಒಂದೇ ಒಂದು ತಪ್ಪಿನಿಂದ ಸಿಕ್ಕಿಬಿದ್ದ ರಾಜಾ ರಘುವಂಶಿ ಪತ್ನಿ ಸೋನಂ
ಹಲವು ಗಂಟೆಗಳ ಕಾಲ ಶೋಧ ಕಾರ್ಯಾಚರಣೆಯ ನಂತರ ಎಲ್ಲಾ ಶವಗಳನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲಾದ ಜಿಲ್ಲಾ ಆಸ್ಪತ್ರೆಯ ಹೊರಗೆ ದೊಡ್ಡ ಜನಸಮೂಹ ಜಮಾಯಿಸಿತು.
ಕಳೆದ ತಿಂಗಳು ಜೈಪುರದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಅಲ್ಲಿ ಮೂವರು ಹುಡುಗಿಯರು ಸೇರಿದಂತೆ 4 ಮಕ್ಕಳು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದರು. ದುಡು ಪ್ರದೇಶದ ಕಾಕಡಿಯಾನ್ ಕಿ ಧಾನಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿತ್ತು. ಮೇಕೆ ಮೇಯಿಸುವವರ ಗುಂಪೊಂದು ಕೊಳದ ಬಳಿ ನಿಂತಿತ್ತು. ಸ್ನಾನ ಮಾಡುತ್ತಿದ್ದಾಗ 18 ವರ್ಷದ ಕಮಲೇಶ್ ದೇವಿ ನೀರಿಗೆ ಬಿದ್ದಳು. ಅವಳು ಮುಳುಗಲು ಪ್ರಾರಂಭಿಸಿದಾಗ ಇತರ ಮೂವರು – 20 ವರ್ಷದ ವಿನೋದ್ ಕುಮಾರ್, ರಾಮೇಶ್ವರಿ ಮತ್ತು 18 ವರ್ಷದ ಹೇಮಾ ಬವಾರಿಯಾ ಆಕೆಯನ್ನು ರಕ್ಷಿಸಲು ಜಿಗಿದರು. ಆದರೆ ನಾಲ್ವರೂ ದುರಂತವಾಗಿ ಮುಳುಗಿ ಸಾವನ್ನಪ್ಪಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ