ಮೇಘಾಲಯ ಕೊಲೆ ಪ್ರಕರಣ; ಆ ಒಂದೇ ಒಂದು ತಪ್ಪಿನಿಂದ ಸಿಕ್ಕಿಬಿದ್ದ ರಾಜಾ ರಘುವಂಶಿ ಪತ್ನಿ ಸೋನಂ
ರಾಜಾ ರಘುವಂಶಿ ಹತ್ಯೆಯಲ್ಲಿ ಸೋನಂ ಮತ್ತು ಆಕೆಯ ಪ್ರಿಯಕರ ಮಾಡಿದ ಒಂದು ತಪ್ಪಿನಿಂದ ಆಕೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ರಾಜಾ ಕೊಲೆಯಾದ ನಂತರ ಮೇಘಾಲಯದಲ್ಲಿ ರಾಜಾ ಮತ್ತು ಸೋನಂ ರಘುವಂಶಿ ಅವರ ಹನಿಮೂನ್ ದುರಂತಮಯವಾಯಿತು. ಸೋನಂ ಮತ್ತು ಆಕೆಯ ಪ್ರಿಯಕರ ಈ ಅಪರಾಧವನ್ನು ಪ್ಲಾನ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇಂದೋರ್, ಜೂನ್ 10: ಮಧ್ಯಪ್ರದೇಶದ ಇಂದೋರ್‌ನ ನವವಿವಾಹಿತ ದಂಪತಿಗಳಾದ ರಾಜಾ ರಘುವಂಶಿ (Raja Raghuvanshi) ಮತ್ತು ಸೋನಂ ರಘುವಂಶಿ ಅವರ ಹನಿಮೂನ್ ಮೇಘಾಲಯದಲ್ಲಿ (Meghalaya Honeymoon Murder) ಭಯಾನಕ ಕೊಲೆ ನಿಗೂಢವಾಗಿ ಮಾರ್ಪಟ್ಟಿತು. ಈ ಪ್ರಕರಣದ ಕುರಿತು ಮೇಘಾಲಯದ ಪೊಲೀಸರು ನಡೆಸಿದ ತನಿಖೆಯು ಯಾವ ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲ. ಸೋನಂ ರಘುವಂಶಿ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾಹ ಅವರ ಮೂರ್ಖತನದ ಕೊಲೆ ಪ್ಲಾನ್ ಹೇಗೆ ವಿಫಲವಾಯಿತು, ಪೊಲೀಸರು ಹಂತ ಹಂತವಾಗಿ ಸತ್ಯವನ್ನು ಹೇಗೆ ಬಯಲು ಮಾಡಿದರು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ರಾಜಾ ರಘುವಂಶಿ ಮತ್ತು ಸೋನಂ ರಘುವಂಶಿ ಮೇ 11ರಂದು ಇಂದೋರ್‌ನಲ್ಲಿ ವಿವಾಹವಾದರು. ಅದಾದ 9 ದಿನಗಳ ನಂತರ ಅಂದರೆ ಮೇ 20ರಂದು ಅವರು ತಮ್ಮ ಮಧುಚಂದ್ರಕ್ಕೆ ತೆರಳಿದರು. ಆ ದಂಪತಿ ಮೊದಲು ಕಾಶ್ಮೀರಕ್ಕೆ ಹೋಗಲು ಪ್ಲಾನ್ ಮಾಡಿದ್ದರು. ಆದರೆ ಭಯೋತ್ಪಾದಕ ದಾಳಿಯ ವರದಿಗಳ ನಂತರ ಅವರು ಮೇಘಾಲಯದ ರಮಣೀಯ ತಾಣವನ್ನು ಆರಿಸಿಕೊಂಡರು. ದಂಪತಿಗಳು ಮೇ 22ರಂದು ಬಾಡಿಗೆ ಸ್ಕೂಟರ್‌ನಲ್ಲಿ ಮೌಲಖಿಯಾತ್ ಗ್ರಾಮವನ್ನು ತಲುಪಿದ್ದರು. ಅವರು ತಮ್ಮ ಸ್ಕೂಟರ್ ಅನ್ನು ನಿಲ್ಲಿಸಿ ಕಣಿವೆಯಿಂದ 3,000ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಇಳಿದು ನೊಂಗ್ರಿಯಾತ್ ಗ್ರಾಮದಲ್ಲಿರುವ ಪ್ರಸಿದ್ಧ ‘ಲಿವಿಂಗ್ ರೂಟ್ಸ್’ ಸೇತುವೆಗಳನ್ನು ವೀಕ್ಷಿಸಿದರು. ಅಲ್ಲಿ ಅವರು ಹೋಂಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಬೆಳಿಗ್ಗೆ ಹೊರಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 23ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ, ದಂಪತಿಗಳು ತಮ್ಮ ಹೋಂಸ್ಟೇಯಿಂದ ಹೊರಬಂದು ಬಾಡಿಗೆ ಸ್ಕೂಟರ್‌ನಲ್ಲಿ ಹೊರಗೆ ತೆರಳಿದರು. ಅದರ ನಂತರ, ಅವರು ತಮ್ಮ ಕುಟುಂಬಗಳೊಂದಿಗೆ ಸಂಪರ್ಕ ಕಳೆದುಕೊಂಡರು. ಮೇ 24ರಂದು ಶಿಲ್ಲಾಂಗ್‌ನಿಂದ ಸೊಹ್ರಾಗೆ ಹೋಗುವ ರಸ್ತೆಯಲ್ಲಿರುವ ಕೆಫೆಯ ಹೊರಗೆ ದಂಪತಿ ಹೋಗಿದ್ದ ಸ್ಕೂಟರ್ ಅನ್ನು ನಿಲ್ಲಿಸಲಾಗಿತ್ತು. ಅದಾದ ನಂತರ ಮೇಘಾಲಯದ ಪೊಲೀಸರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಸೊಹ್ರಾದಲ್ಲಿ ಭಾರೀ ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಯಿತು.
ಇದನ್ನೂ ಓದಿ: ನನ್ನ ಕಣ್ಣೆದುರೇ ಗಂಡನನ್ನು ಕೊಂದರು; ರಾಜಾ ರಘುವಂಶಿ ಪತ್ನಿ ಸೋನಮ್ ಹೇಳಿದ್ದೇನು?
ಜೂನ್ 2ರಂದು ಮೇಘಾಲಯ ಪೊಲೀಸರಿಗೆ ವೀ ಸಾವ್ಡಾಂಗ್ ಜಲಪಾತದ ಬಳಿಯ ಆಳವಾದ ಕಂದಕದಲ್ಲಿ ರಾಜಾ ಅವರ ಕೊಳೆತ ದೇಹ ಸಿಕ್ಕಿತು. ಅವನ ಮುಖ ಕೊಳೆತಿದ್ದರಿಂದ ಗುರುತಿಸಲಾಗಲಿಲ್ಲ. ಆದರೆ ಅವನ ಕೈಯಲ್ಲಿ “ರಾಜ” ಎಂಬ ಹೆಸರಿನ ಟ್ಯಾಟೂ ಅವನ ಗುರುತನ್ನು ದೃಢಪಡಿಸಿತು. ಮರಣೋತ್ತರ ಪರೀಕ್ಷೆಯಲ್ಲಿ ರಾಜಾ ಅವರ ತಲೆಗೆ ಹರಿತವಾದ ಆಯುಧದಿಂದ ಎರಡು ಬಾರಿ ಹೊಡೆದಿದ್ದು, ಅದು ಕೊಲೆ ಎಂದು ದೃಢಪಟ್ಟಿತು.
ರಾಜಾನ ಮೃತದೇಹವೇನೋ ಸಿಕ್ಕಿತು. ಆದರೆ, ಅವರ ಪತ್ನಿ ಸೋನಂ ಎಲ್ಲೂ ಪತ್ತೆಯಾಗಲಿಲ್ಲ. ಜೂನ್ 4ರಂದು, ತನಿಖಾಧಿಕಾರಿಗಳು ಸ್ಥಳದಲ್ಲಿ ಮಹಿಳೆಯ ಬಿಳಿ ಶರ್ಟ್, ಔಷಧಿ ಪಟ್ಟಿ, ಹಾಳಾದ ಮೊಬೈಲ್ ಫೋನ್ ಸ್ಕ್ರೀನ್ ಮತ್ತು ಸ್ಮಾರ್ಟ್‌ವಾಚ್ ಸೇರಿದಂತೆ ಹಲವು ವಸ್ತುಗಳು ಸಿಕ್ಕವು. ಆಕೆಯ ಕೊಲೆ ಪ್ರಕರಣವನ್ನು ದಾಖಲಿಸಲಾಗಿತ್ತು.
ನಿಗೂಢ ಕೊಲೆ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಹೊಸ ಹೊಸ ವಿಷಯಗಳು ಗೊತ್ತಾಯಿತು. ಸೋನಂ ಮೃತದೇಹಕ್ಕಾಗಿ ಒಂದು ತಂಡ ಹುಡುಕಾಡಿದರೆ ಆಕೆ ಎಲ್ಲಾದರೂ ತಪ್ಪಿಸಿಕೊಂಡಿರಬಹುದಾ ಎಂದು ಇನ್ನೊಂದು ತಂಡ ಹುಡುಕಾಡಿತ್ತು. ಸೋನಂ ಸಂಬಂಧ ಹೊಂದಿದ್ದ 20 ವರ್ಷದ ರಾಜ್ ಕುಶ್ವಾಹ 7 ದಿನಗಳ ಹಿಂದೆ ಮದುವೆಯಾದ ನಂತರ ಮೇ 18ರಂದು ಕೊಲೆಯನ್ನು ಪ್ಲಾನ್ ಮಾಡಿದ್ದರು ಎಂದು ಇಂದೋರ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೇಶ್ ದಂಡೋಟಿಯಾ ಹೇಳಿದ್ದಾರೆ. ರಾಜಾ ರಘುವಂಶಿಯನ್ನು ಕೊಲ್ಲಲು ಕುಶ್ವಾಹ ವಿಶಾಲ್ ಚೌಹಾಣ್, ಆನಂದ್ ಕುಮಾರ್ ಮತ್ತು ಆಕಾಶ್ ರಜಪೂತ್ ಅವರಿಗೆ ಸುಪಾರಿ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ರಾಜಾನನ್ನು ಕೊಲೆ ಮಾಡಿ, ಅಂತ್ಯಕ್ರಿಯೆಗೂ ಹೋಗಿದ್ದ ಸೋನಮ್ ಪ್ರಿಯಕರ ರಾಜ್ ಕುಶ್ವಾಹ
ಸೋನಮ್ ಮತ್ತು ರಾಜ್ ಮಾಡಿದ ದೊಡ್ಡ ತಪ್ಪು:
ತನ್ನ ಪ್ರೇಮಿ ರಾಜ್ ಜೊತೆ ಗಂಡ ರಾಜಾ ರಘುವಂಶಿಯ ಕೊಲೆಗೆ ಸೋನಂ ಪ್ಲಾನ್ ಮಾಡಿದ್ದಳು. ಎಲ್ಲವೂ ಸೋನಂ ಪ್ಲಾನ್ ರೀತಿಯೇ ನಡೆಯುತ್ತಿತ್ತು. ಆದರೆ, ಅಪರಾಧಿ ಎಷ್ಟೇ ಬುದ್ಧಿವಂತನಾಗಿದ್ದರೂ ಒಂದಾದರೂ ಸುಳಿವು ಬಿಟ್ಟಿರುತ್ತಾನೆ ಎಂಬುದು ಈ ಕೊಲೆ ಪ್ರಕರಣದಲ್ಲೂ ನಿಜವಾಗಿದೆ. ಮೇಘಾಲಯದ ಪೊಲೀಸರ ಪ್ರಕಾರ, ಅವರು ಕಂಡುಕೊಂಡ ಮೊದಲ ಸುಳಿವು ರಾಜಾ ಕೊಲೆಗೆ ಬಳಸಲಾದ ಆಯುಧವಾಗಿತ್ತು. “ಈ ರೀತಿಯ ಆಯುಧವನ್ನು ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಬಳಸಲಾಗುವುದಿಲ್ಲ. ಹೀಗಾಗಿ, ಈ ಕೊಲೆಯಲ್ಲಿ ಹೊರಗಿನ ಯಾರೋ ಭಾಗಿಯಾಗಿದ್ದಾರೆ ಎಂದು ನಮಗೆ ಅನುಮಾನ ಮೂಡಿಸಿತು. ನಂತರ ನಾವು ದಂಪತಿಗಳ ಕಾಲ್ ರೆಕಾರ್ಡ್ ತನಿಖೆ ಮಾಡಲು ನಿರ್ಧರಿಸಿದೆವು” ಎಂದು ಪೊಲೀಸರು ಹೇಳಿದ್ದಾರೆ.
ಆ ಕಾಲ್ ರೆಕಾರ್ಡ್ನಲ್ಲಿ ಮಹತ್ವದ ಅಂಶ ಬಯಲಿಗೆ ಬಂದಿತು. ಕೊಲೆಗೆ ಕೆಲವು ದಿನಗಳ ಮೊದಲು ಸೋನಮ್ ಸುಪಾರಿ ಕಿಲ್ಲರ್ಗಳಲ್ಲಿ ಒಬ್ಬರೊಂದಿಗೆ ಸಂಪರ್ಕದಲ್ಲಿದ್ದಳು. ಕಾಣೆಯಾಗುವ ಮೊದಲು ಅವಳ ಕೊನೆಯ ಸ್ಥಳ ಸುಪಾರಿ ಕಿಲ್ಲರ್ ಬಳಿಯೇ ಇತ್ತು ಎಂದು ಕಂಡುಬಂದಿದೆ. ಇದೇ ಸೋನಂ ವಿರುದ್ಧ ದೊಡ್ಡ ಸಾಕ್ಷಿಯಾಯಿತು. ಘಾಜಿಪುರ ಎಸ್ಪಿ ಇರಾಜ್ ರಾಜಾ ಅವರು ಸೋನಮ್ ಅವರನ್ನು ವಾರಣಾಸಿ-ಘಾಜಿಪುರ ಮುಖ್ಯ ರಸ್ತೆಯಲ್ಲಿರುವ ‘ಕಾಶಿ ಧಾಬಾ’ದಿಂದ ಬಂಧಿಸಲಾಗಿದೆ ಎಂದು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ