ಪಾಕಿಸ್ತಾನಕ್ಕೆ ಭಾರತದ ಖಡಕ್ ಸಂದೇಶವಾ? ಕಾಬೂಲ್​ನಲ್ಲಿ ಭಾರತದ ರಾಯಭಾರ ಕಚೇರಿ ಪುನಾರಂಭ

India to have full fledged embassy in Kabul: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ನಲ್ಲಿ ಇದ್ದ ತನ್ನ ಟೆಕ್ನಿಕಲ್ ಮಿಷನ್ ಅನ್ನು ಪೂರ್ಣಪ್ರಮಾಣದ ರಾಯಭಾರ ಕಚೇರಿಯಾಗಿ ಭಾರತ ಎತ್ತರಿಸಿದೆ. ಇತ್ತೀಚೆಗಷ್ಟೇ ಅಫ್ಗನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾರತಕ್ಕೆ ಬಂದು ಜೈಶಂಕರ್ ಅವರನ್ನು ಭೇಟಿಯಾಗಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 2022ರಲ್ಲಿ ಭಾರತವು ಅಫ್ಗಾನಿಸ್ತಾನದಲ್ಲಿ ತನ್ನ ರಾಯಭಾರ ಸೇವೆಯನ್ನು ಟೆಕ್ನಿಕಲ್ ಮಿಷನ್​ಗೆ ಮಾತ್ರ ಸೀಮಿತಗೊಳಿಸಿತ್ತು.

ಪಾಕಿಸ್ತಾನಕ್ಕೆ ಭಾರತದ ಖಡಕ್ ಸಂದೇಶವಾ? ಕಾಬೂಲ್​ನಲ್ಲಿ ಭಾರತದ ರಾಯಭಾರ ಕಚೇರಿ ಪುನಾರಂಭ
ಅಮೀರ್ ಖಾನ್ ಮುತ್ತಕಿ ಮತ್ತು ಎ ಜೈಶಂಕರ್

Updated on: Oct 21, 2025 | 7:37 PM

ನವದೆಹಲಿ, ಅಕ್ಟೋಬರ್ 21: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ಭಾರತ ಪೂರ್ಣ ಪ್ರಮಾಣದ ರಾಯಭಾರ ಕಚೇರಿಯನ್ನು (Full fledged embassy) ಮರಳಿ ಸ್ಥಾಪಿಸಿದೆ. ಅನೌಪಚಾರಿಕವಾಗಿ ಅಲ್ಲಿ ಇದ್ದ ತನ್ನ ಟೆಕ್ನಿಕಲ್ ಮಿಷನ್ (India’s technical mission in Kabul) ಅನ್ನು ರಾಯಭಾರ ಕಚೇರಿಯಾಗಿ ಮಾರ್ಪಡಿಸಿದೆ. ಇದರೊಂದಿಗೆ ಅಫ್ಗಾನಿಸ್ತಾನ ದೇಶದೊಂದಿಗೆ ಭಾರತದ ರಾಜತಾಂತ್ರಿಕ ಸಂಬಂಧ ನಾಲ್ಕು ವರ್ಷಗಳ ನಂತರ ಮರಳಿ ಸ್ಥಾಪನೆಯಾದಂತಾಗಿದೆ. ಈ ಬೆಳವಣಿಗೆಯು ಪಾಕಿಸ್ತಾನಕ್ಕೆ ಭಾರತ ಕೊಟ್ಟ ಎಚ್ಚರಿಕೆಯ ಸಂದೇಶವೆಂದೂ ಭಾವಿಸಬಹುದು.

ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಕಿ (Amir Khan Muttaqi) ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜತಾಂತ್ರಿಕ ಸಂಬಂಧ ಮರಳಿ ಸ್ಥಾಪಿಸುವುದು ಒಳಗೊಂಡಂತೆ ವಿವಿಧ ವಿಚಾರಗಳನ್ನು ಚರ್ಚಿಸಿದ್ದರು. ಇದರ ಬೆನ್ನಲ್ಲೇ ಭಾರತದಿಂದ ಈ ನಡೆ ಬಂದಿದೆ.

ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ, ಇಲ್ಲವಾದಲ್ಲಿ ಭಾರೀ ಸುಂಕ ಪಾವತಿಗೆ ಸಿದ್ಧರಾಗಿ: ಭಾರತಕ್ಕೆ ಮತ್ತೆ ಟ್ರಂಪ್ ಎಚ್ಚರಿಕೆ

ಭಾರತದ ಟೆಕ್ನಿಕಲ್ ಮಿಷನ್ ಎಂದರೇನು?

2021ರಲ್ಲಿ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ಅಧಿಕಾರಕ್ಕೆ ಬಂದಿತು. ಅಲ್ಲಿಯವರೆಗೆ ಕಾಬೂಲ್​ನಲ್ಲಿ ಭಾರತದ ರಾಯಭಾರ ಕಚೇರಿ ಇತ್ತು. ತಾಲಿಬಾನ್ ಆಗಮನದ ಬಳಿಕ ಕಾಬೂಲ್​ನಲ್ಲಿರುವ ರಾಯಭಾರ ಕಚೇರಿಯನ್ನು ಭಾರತ ಬಂದ್ ಮಾಡಿತು. 2022ರಲ್ಲಿ ಟೆಕ್ನಿಕಲ್ ಮಿಷನ್ ಮಾತ್ರವೇ ಸ್ಥಾಪಿಸಿತು. ಇದಕ್ಕೆ ರಾಜತಾಂತ್ರಿಕ ಮಟ್ಟದ ಅಧಿಕಾರ ಮತ್ತು ಸ್ಥಾನ ಇರಲಿಲ್ಲ. ಔಷಧ ಇತ್ಯಾದಿ ಅಗತ್ಯ ಮಾನವೀಯ ಸೇವೆಗಳನ್ನು ಕೈಗೊಳ್ಳಲು ಮಾತ್ರವೇ ಈ ಟೆಕ್ನಿಕಲ್ ಮಿಷನ್ ಸೀಮಿತವಾಗಿತ್ತು.

2022ರಲ್ಲೇ ಭಾರತದ ಜೊತೆ ಪೂರ್ಣ ರಾಜತಾಂತ್ರಿಕ ಸಂಬಂಧ ಬೆಳೆಸಲು ಇಚ್ಛಿಸಿದ್ದ ತಾಲಿಬಾನ್

ಮೊನ್ನೆ ಮೊನ್ನೆ ಭಾರತಕ್ಕೆ ಬಂದಿದ್ದ ಅಫ್ಗಾನ್ ಸಚಿವ ಅಮೀರ್ ಖಾನ್ ಮುತ್ತಕಿ ಅವರು 2022ರಲ್ಲೇ ಭಾರತದ ಜೊತೆ ರಾಜತಾಂತ್ರಿಕ ಸಂಬಂಧ ಮರಳಿ ಸ್ಥಾಪಿಸಲು ತಮ್ಮ ದೇಶ ಬಯಸುತ್ತಿರುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದನ್ನೂ ಓದಿ: ರಷ್ಯನ್ ತೈಲ ಖರೀದಿಸಲ್ಲ ಅಂತ ಟ್ರಂಪ್​ಗೆ ಮೋದಿ ಭರವಸೆ ಕೊಟ್ಟರಾ? ಇಲ್ಲಿದೆ ಭಾರತದ ನಿಲುವು

‘ಭಾರತ ಮತ್ತು ಅಫ್ಗಾನಿಸ್ತಾನ ನಡುವಿನ ಸಂಬಂಧವು ಮುಂದಿನ ದಿನಗಳಲ್ಲಿ ಬಲಗೊಳ್ಳಲಿದೆ. ಅವರ ರಾಯಭಾರ ಕಚೇರಿಯು ನಮ್ಮ ದೇಶದಲ್ಲಿ ಕಾರ್ಯನಿರ್ವಹಿಲಿದೆ. ನಮ್ಮ ರಾಯಭಾರ ಕಚೇರಿಯೂ ಅವರ ದೇಶದಲ್ಲಿ ಇರಲಿದೆ. ಈ ಎರಡೂ ದೇಶಗಳು ಪರಸ್ಪರ ಅನುಕೂಲವಾಗುವ ರೀತಿಯಲ್ಲಿ ಆರ್ಥಿಕ, ರಾಜಕೀಯ ಮತ್ತು ರಾಜತಾಂತ್ರಿಕ ಸಂಬಂಧ ಹೊಂದಿರಬೇಕು’ ಎಂದು ಅಮೀರ್ ಮುತ್ತಕಿ ಅವರು 2022ರಲ್ಲಿ ಬಯಸಿದ್ದರು. ಅದೀಗ ಕಾರ್ಯಗತವಾದಂತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ