
ನವದೆಹಲಿ, ಡಿಸೆಂಬರ್ 11: ಸಿಬ್ಬಂದಿ ಕೊರತೆಯ ಬಿಕ್ಕಟ್ಟಿನಿಂದ ಡಿಸೆಂಬರ್ 3ರಿಂದ 5ರ ನಡುವೆ ಸಾವಿರಾರು ಇಂಡಿಗೋ ವಿಮಾನಗಳು (IndiGo Planes) ರದ್ದಾಗಿದ್ದವು. ಉಂಟಾದ ವಿಮಾನ ನಿಲ್ದಾಣದ ದಟ್ಟಣೆಯ ನಡುವೆ ಗಂಟೆಗಟ್ಟಲೆ ಸಿಲುಕಿಕೊಂಡ ಹಾಗೂ ತೀವ್ರ ರೀತಿಯಲ್ಲಿ ತೊಂದರೆಗಳನ್ನು ಅನುಭವಿಸಿದ ಗ್ರಾಹಕರಿಗೆ 10,000 ರೂ. ಪ್ರಯಾಣ ವೋಚರ್‌ಗಳನ್ನು ನೀಡುವುದಾಗಿ ಇಂಡಿಗೋ ಘೋಷಿಸಿದೆ. ಮುಂದಿನ 12 ತಿಂಗಳುಗಳಲ್ಲಿ ಯಾವುದೇ ಇಂಡಿಗೋ ವಿಮಾನಕ್ಕೆ ಆ ವೋಚರ್‌ಗಳನ್ನು ಬಳಸಬಹುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಆದರೆ, ಇಂಡಿಗೋ ಹೇಳಿರುವ ಆ “ತೀವ್ರವಾಗಿ ಪರಿಣಾಮ ಎದುರಿಸಿದ” ಪ್ರಯಾಣಿಕರು ಯಾರು? ಇದರ ಮಾನದಂಡವೇನು? ಅಂತಹ ಗ್ರಾಹಕರನ್ನು ಹೇಗೆ ಗುರುತಿಸಲಾಗುತ್ತದೆ? ಎಂಬುದನ್ನು ಇಂಡಿಗೋ ಸ್ಪಷ್ಟಪಡಿಸಿಲ್ಲ. ಈಗಾಗಲೇ ರದ್ದಾದ ವಿಮಾನಗಳಿಗೆ ಅಗತ್ಯವಾದ ಮರುಪಾವತಿಯನ್ನು ಇಂಡಿಗೋ ಪ್ರಯಾಣಿಕರಿಗೆ ಮಾಡಿದೆ.
ಇದನ್ನೂ ಓದಿ: ಇಂಡಿಗೋ ಬಿಕ್ಕಟ್ಟು, ಪ್ರಯಾಣಿಕರಿಗೆ 610 ಕೋಟಿ ರೂ.ಮೊತ್ತದ ಟಿಕೆಟ್ ಹಣ ಮರುಪಾವತಿಸಿದ ವಿಮಾನಯಾನ ಸಂಸ್ಥೆ
“ಡಿಸೆಂಬರ್ 3, 4, 5ರಂದು ಪ್ರಯಾಣಿಸುತ್ತಿದ್ದ ನಮ್ಮ ಗ್ರಾಹಕರಲ್ಲಿ ಕೆಲವರು ಕೆಲವು ವಿಮಾನ ನಿಲ್ದಾಣಗಳಲ್ಲಿ ಹಲವು ಗಂಟೆಗಳ ಕಾಲ ಸಿಲುಕಿಕೊಂಡಿದ್ದರು. ಅವರಲ್ಲಿ ಹಲವರು ತೀವ್ರವಾಗಿ ಪರಿಣಾಮ ಎದುರಿಸಿದ್ದರು ಎಂಬುದನ್ನು ಇಂಡಿಗೋ ವಿಷಾದದಿಂದ ಒಪ್ಪಿಕೊಳ್ಳುತ್ತದೆ ಮತ್ತು ಕ್ಷಮೆಯನ್ನೂ ಕೋರುತ್ತದೆ. ಅಂತಹ ತೀವ್ರ ಪರಿಣಾಮ ಬೀರಿದ ಗ್ರಾಹಕರಿಗೆ ನಾವು 10,000 ರೂ. ಮೌಲ್ಯದ ಪ್ರಯಾಣ ವೋಚರ್‌ಗಳನ್ನು ನೀಡುತ್ತೇವೆ” ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮುಂದಿನ 12 ತಿಂಗಳೊಳಗೆ ಯಾವುದೇ ಇಂಡಿಗೋ ಪ್ರಯಾಣಕ್ಕೆ ಈ ವೋಚರ್‌ಗಳನ್ನು ಬಳಸಬಹುದು. “ಇಂಡಿಗೋದಲ್ಲಿ ನಿಮಗೆ ಮತ್ತೆ ಸೇವೆ ಸಲ್ಲಿಸಲು ನಮಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು” ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ