88 Minutes In PMO: ಪ್ರಧಾನಿ ನರೇಂದ್ರ ಮೋದಿ, ರಾಹುಲ್ ನಡುವೆ ಏನೆಲ್ಲಾ ಚರ್ಚೆ ನಡೀತು, ಇನ್ಸೈಡ್ ಮಾಹಿತಿ ಇಲ್ಲಿದೆ
ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಮುಂದಿನ ಮುಖ್ಯ ಮಾಹಿತಿ ಆಯುಕ್ತರ (ಸಿಐಸಿ) ನೇಮಕ, ಇತರ ಮಾಹಿತಿ ಆಯುಕ್ತರು ಮತ್ತು ವಿಜಿಲೆನ್ಸ್ ಆಯುಕ್ತರ ನೇಮಕದ ಮೇಲೆ ಸಭೆ ಕೇಂದ್ರೀಕೃತವಾಗಿತ್ತು. ಗೃಹ ಸಚಿವರನ್ನು ಒಳಗೊಂಡ ಈ ಹುದ್ದೆಗಳಿಗೆ ನೇಮಕಾತಿ ಸಮಿತಿಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಿದ್ದರು. ಅಮಿತ್ ಶಾ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಇದ್ದರು.

ನವದೆಹಲಿ, ಡಿಸೆಂಬರ್ 11: ಸದಾ ಒಂದಲ್ಲಾ ಒಂದು ವಿಚಾರವಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ(Narendra Modi)ಯನ್ನು ಟೀಕಿಸುತ್ತಲೇ ಇರುತ್ತಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರಧಾನಿ ಬಳಿ ಶಾಂತಿಯಿಂದ ಕುಳಿತು ಮಾತನಾಡಿದ್ದಾರೆ. ಸಂಸತ್ತಿನಲ್ಲಿಎಸ್ಐಆರ್ ಬಗ್ಗೆ ಗದ್ದಲ ಎಬ್ಬಿಸಿ ಮುಖ್ಯ ಮಾಹಿತಿ ಆಯುಕ್ತರ ಅಭ್ಯರ್ಥಿಗಳ ಕುರಿತು ಚರ್ಚಿಸಲು ಮೋದಿಯವರನ್ನು ಭೇಟಿಯಾಗಿದ್ದರು.
ಪ್ರಧಾನಿ ಮೋದಿ ಕಚೇರಿಯಲ್ಲಿ 88 ನಿಮಿಷಗಳ ಕಾಲ ಇವರಿಬ್ಬರ ನಡುವೆ ಮಾತುಕತೆ ನಡೆಯಿತು. ರಾಹುಲ್ ಗಾಂಧಿ ಹೊರಬಂದಾಗ, ಚರ್ಚೆಯು ಮುಖ್ಯ ಮಾಹಿತಿ ಆಯುಕ್ತರ ನೇಮಕಾತಿಯ ಬಗ್ಗೆ ಮಾತ್ರವಲ್ಲ, ಎಂಟು ಮಾಹಿತಿ ಆಯುಕ್ತರು ಮತ್ತು ಒಬ್ಬ ವಿಜಿಲೆನ್ಸ್ ಆಯುಕ್ತರ ನೇಮಕಾತಿಗಳ ಬಗ್ಗೆಯೂ ಆಗಿತ್ತು ಎಂದು ತಿಳಿದುಬಂದಿದೆ. ಇಂತಹ ಸಭೆಗಳಿಗೆ ಹಾಜರಾಗುವ ವಿರೋಧ ಪಕ್ಷದ ನಾಯಕರ ಆಕ್ಷೇಪಗಳನ್ನು ಸಾಮಾನ್ಯವಾಗಿ ಊಹಿಸಬಹುದಾದವು. ಈ ಬಾರಿಯೂ ಫಲಿತಾಂಶ ಭಿನ್ನವಾಗಿರದಿದ್ದರೂ, 88 ನಿಮಿಷಗಳ ಸಭೆಯು ಸಂಸತ್ತಿನ ಕಾರಿಡಾರ್‌ಗಳಲ್ಲಿ ಬಿಸಿ ಚರ್ಚೆಗೆ ಕಾರಣವಾಯಿತು.
ಕೇಂದ್ರ ಮಾಹಿತಿ ಆಯೋಗದಲ್ಲಿ 8 ಹುದ್ದೆಗಳು ಖಾಲಿ ಇವೆ ಪ್ರಸ್ತುತ, ಕೇಂದ್ರ ಮಾಹಿತಿ ಆಯೋಗದಲ್ಲಿ (CIC) ಮುಖ್ಯ ಮಾಹಿತಿ ಆಯುಕ್ತರ ಹುದ್ದೆ ಸೇರಿದಂತೆ ಎಂಟು ಹುದ್ದೆಗಳು ಖಾಲಿ ಇವೆ. ಈ ಅಧಿಕಾರಿಯು RTI ಅರ್ಜಿದಾರರ ದೂರುಗಳು ಮತ್ತು ಮೇಲ್ಮನವಿಗಳನ್ನು ನೋಡಿಕೊಳ್ಳುತ್ತಾರೆ. ಹಿರಾಲಾಲ್ ಸಮಾರಿಯಾ ಅವರು ಸೆಪ್ಟೆಂಬರ್ 13 ರವರೆಗೆ ಭಾರತದ ಮುಖ್ಯ ಮಾಹಿತಿ ಆಯುಕ್ತರಾಗಿದ್ದರು. ಅವರ ನಿವೃತ್ತಿಯ ನಂತರ, ಈ ಹುದ್ದೆ ಖಾಲಿಯಾಗಿದೆ.
30,838 ಸಿಐಸಿ ಪ್ರಕರಣಗಳು ಇನ್ನೂ ಬಾಕಿ ಇವೆ ಸಿಐಸಿಯ ವೆಬ್‌ಸೈಟ್ ಪ್ರಕಾರ, ಇದು 30,838 ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 12(3) ರ ಅಡಿಯಲ್ಲಿ, ಪ್ರಧಾನಿ ಆಯ್ಕೆ ಸಮಿತಿಯ ಅಧ್ಯಕ್ಷತೆಯನ್ನು ವಹಿಸುತ್ತಾರೆ, ಇದರಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಪ್ರಧಾನಿ ನಾಮನಿರ್ದೇಶನ ಮಾಡಿದ ಕೇಂದ್ರ ಸಚಿವರು ಸಹ ಇರುತ್ತಾರೆ. ಅವರು ಒಟ್ಟಾಗಿ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ನೇಮಕಾತಿಗೆ ಹೆಸರುಗಳನ್ನು ಆಯ್ಕೆ ಮಾಡಿ ಶಿಫಾರಸು ಮಾಡುತ್ತಾರೆ.
ಈ ಸಭೆಯಲ್ಲಿ ರಾಹುಲ್ ಗಾಂಧಿ ಶಾರ್ಟ್‌ಲಿಸ್ಟ್ ಮಾಡಿದ ಹೆಸರುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ, ಅತ್ಯಂತ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭ್ಯರ್ಥಿಗಳು ಇಲ್ಲದಿರುವ ಬಗ್ಗೆ ರಾಹುಲ್ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಲವಾರು ವಾರಗಳ ಹಿಂದೆ, ಅರ್ಜಿದಾರರ ಜಾತಿ ಸಂಯೋಜನೆಯ ಬಗ್ಗೆ ರಾಹುಲ್ ಸರ್ಕಾರದಿಂದ ಮಾಹಿತಿಯನ್ನು ಕೋರಿದ್ದರು.
ಬುಧವಾರ ಸ್ವೀಕರಿಸಿದ ಮಾಹಿತಿಯ ಪ್ರಕಾರ, ಒಟ್ಟು ಅರ್ಜಿದಾರರಲ್ಲಿ ಕೇವಲ 50% ಮತ್ತು ಶಾರ್ಟ್‌ಲಿಸ್ಟ್‌ನಲ್ಲಿ ಕೇವಲ ಒಬ್ಬ ಅಭ್ಯರ್ಥಿ ಮಾತ್ರ ಹಿಂದುಳಿದ ವರ್ಗಗಳಿಂದ ಬಂದವರು. ಇದು ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಹೊರಗಿಡುವ ಕ್ರಮವಾಗಿದೆ ಎಂದು ಅವರು ಹೇಳದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




