Indigo Refunds Ordered: ನಾಳೆ ರಾತ್ರಿ 8 ಗಂಟೆಯೊಳಗೆ ಬಾಕಿ ಹಣ ಮರುಪಾವತಿಸುವಂತೆ ಇಂಡಿಗೋ ಸಂಸ್ಥೆಗೆ ಕೇಂದ್ರ ಸೂಚನೆ

ಇಂಡಿಗೋ ವಿಮಾನಗಳ ಹಾರಾಟ ರದ್ದತಿ ಮತ್ತು ಪ್ರಯಾಣಿಕರ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಮಾನಯಾನ ಸಚಿವಾಲಯವು ಇಂಡಿಗೋ ಸಂಸ್ಥೆಗೆ ಬಾಕಿ ಹಣವನ್ನು ನಾಳೆ ರಾತ್ರಿ 8 ಗಂಟೆಯೊಳಗೆ ಮರುಪಾವತಿಸುವಂತೆ ಸೂಚಿಸಿದೆ. ವಿಫಲವಾದರೆ ಕ್ರಮದ ಎಚ್ಚರಿಕೆ ನೀಡಿದೆ. ಅಲ್ಲದೆ, ಟಿಕೆಟ್ ದರ ಏರಿಕೆಯನ್ನು ನಿಯಂತ್ರಿಸಲು ಎಲ್ಲಾ ಏರ್‌ಲೈನ್ಸ್‌ಗಳಿಗೆ ಏಕರೂಪ ದರ ನಿಗದಿಪಡಿಸಿದೆ.

Indigo Refunds Ordered: ನಾಳೆ ರಾತ್ರಿ 8 ಗಂಟೆಯೊಳಗೆ ಬಾಕಿ ಹಣ ಮರುಪಾವತಿಸುವಂತೆ ಇಂಡಿಗೋ ಸಂಸ್ಥೆಗೆ ಕೇಂದ್ರ ಸೂಚನೆ
ಸಾಂದರ್ಭಿಕ ಚಿತ್ರ

Updated on: Dec 06, 2025 | 5:42 PM

ದೆಹಲಿ, ಡಿ.6: ಇಂಡಿಗೋ ವಿಮಾನ ಸಂಸ್ಥೆಯ (Indigo flight) ಎಡವಟ್ಟಿನಿಂದ ಪ್ರಯಾಣಿಕರು ಸಂಕಷ್ಟಕ್ಕೆ ಒಳಲಾಗಿದ್ದರು. ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇಂಡಿಗೋ ಏರ್​ಲೈನ್ಸ್ ವಿಮಾನಗಳ ಹಾರಾಟ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರಿಗೆ ಬಾಕಿ ಹಣ ಪಾವತಿಸಿದ ಇಂಡಿಗೋ ಏರ್​ಲೈನ್ಸ್​​ಗೆ ಖಡಕ್​​ ಸಂದೇಶವನ್ನು ಕೇಂದ್ರ ವಿಮಾನಯಾನ ಸಚಿವಾಲಯವು ನೀಡಿದೆ. ನಾಳೆ ರಾತ್ರಿ 8 ಗಂಟೆಯೊಳಗೆ ಬಾಕಿ ಹಣವನ್ನು ಮರುಪಾವತಿಸುವಂತೆ ಸೂಚನೆ ನೀಡಿದೆ. ಒಂದು ವೇಳೆ ಮರುಪಾವತಿ ಮಾಡದಿದ್ದರೆ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಇದರ ಜತೆಗೆ ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ಇತರ ವಿಮಾನಗಳ ಟಿಕೆಟ್‌ ದರ ಹೆಚ್ಚಳ ಮಾಡಲಾಗಿದೆ. ಅದಕ್ಕಾಗಿ ಈ ಬಿಕ್ಕಟ್ಟು ಪರಿಹಾರ ಆಗುವವರೆಗೆ ವಿಮಾನಯಾನ ಸಚಿವಾಲಯ ಎಲ್ಲಾ ಏರ್‌ಲೈನ್ಸ್‌ಗಳಿಗೆ ಅನ್ವಯವಾಗುವಂತೆ ಏಕರೂಪ ದರ ನಿಗದಿ ಮಾಡಿದೆ.

ಕೇಂದ್ರ ವಿಮಾನಯಾನ ಸಚಿವಾಲಯವು ಎಲ್ಲಾ ಏರ್‌ಲೈನ್ಸ್‌ಗಳಿಗೆ ಅನ್ವಯವಾಗುವಂತೆ ಬೆಲೆಯೊಂದನ್ನು ನಿಗದಿ ಮಾಡಿದೆ. 500-1000 ಕಿ.ಮೀ.ವರೆಗೆ ಗರಿಷ್ಠ 12 ಸಾವಿರ ರೂಪಾಯಿ ದರ ಇರಬೇಕು. ಹಾಗೂ 1000-1500 ಕಿ.ಮೀ.ವರೆಗೆ ಗರಿಷ್ಠ 15 ಸಾವಿರ ರೂಪಾಯಿ ದರ ಇರಬೇಕು ಎಂದು ಹೇಳಿದೆ. ಈ ನಿಗದಿಪಡಿಸಿದ ಟಿಕೆಟ್‌ ದರಕ್ಕಿಂತ ಹೆಚ್ಚಿನ ಹಣ ಪಡೆಯದಂತೆ ಸೂಚನೆ. ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.  ಇದರ ಜತೆಗೆ ಸಚಿವಾಲಯವು ಇಂಡಿಗೋ ಏರ್​ಲೈನ್ಸ್ ವಿಮಾನಗಳ ಹಾರಾಟ ರದ್ದಾಗಿರುವುದಕ್ಕೆ ಕಾರಣ ಏನು ಎಂಬುದನ್ನು ತಿಳಿಸಿ ಎಂದು ಇಂಡಿಗೋ ಏರ್​ಲೈನ್ಸ್ ಅಧಿಕಾರಿಗಳಿಗೆ ಸೂಚನೆಯನ್ನು ಕೂಡ ನೀಡಿದೆ. ಸಂಜೆ 6 ಗಂಟೆಗೆ ಸಚಿವಾಲಯಕ್ಕೆ ಬರುವಂತೆ ಅಧಿಕಾರಿಗಳಿಗೆ ಸಮನ್ಸ್‌ ನೀಡಲಾಗಿತ್ತು.ಇದೀಗ ಇಂಡಿಗೋ ವಿಮಾನ ಸಂಸ್ಥೆಯ ಅಧಿಕಾರಿಗಳು ವಿಮಾನಯಾನ ಸಚಿವಾಲಯಕ್ಕೆ ಭೇಟಿ ನೀಡಿದ್ದಾರೆ. ಇನ್ನು ಕೆಲವೇ ಕ್ಷಣದಲ್ಲಿ ಇಂಡಿಗೋ ವಿಮಾನ ಸಂಸ್ಥೆಯ ಅಧಿಕಾರಿಗಳ ಜತೆಗೆ ಸಭೆ ನಡೆಯಲಿದೆ.

ಇದನ್ನೂ ಓದಿ: ಇಂಡಿಗೋ ವಿಮಾನ ಎಡವಟ್ಟು: ದೆಹಲಿಯಿಂದ ಕೊಚ್ಚಿಯಲ್ಲಿ ಬಂದು ಇಳಿದ್ರೂ ತಲುಪಲಿಲ್ಲ ಮಹಿಳೆಯ ಸೂಟ್‌ಕೇಸ್

ಟ್ವೀಟ್​​ ಇಲ್ಲಿದೆ ನೋಡಿ:

ರದ್ದಾದ ವಿಮಾನಗಳ ಪ್ರಯಾಣಿಕರಿಗೆ ಹಣ ವಾಪಸ್ ಮಾಡುವುದರ ಜತೆಗೆ ಲಗೇಜ್ ಹಾಗೂ  ವಸ್ತುಗಳನ್ನು ಸುರಕ್ಷಿತವಾಗಿ ಪ್ರಯಾಣಿಕರಿಗೆ 48 ಗಂಟೆಯೊಳಗೆ ತಲುಪಿಸುವಂತೆ ಆದೇಶ ನೀಡಿದೆ. ಕಳೆದ ಐದು ದಿನಗಳಿಂದ ಇಂಡಿಗೋ ವಿಮಾನ ರದ್ದಾಗಿತ್ತು. ಹಾರಾಟ ರದ್ದಿನಿಂದ ಹಣ ನೀಡಿ ಟಿಕೆಟ್ ಖರೀದಿಸಿದ್ದ ಪ್ರಯಾಣಿಕರು ಪರದಾಡಿದ್ರು, ಹೀಗಾಗಿ ಬುಕ್ ಆಗಿದ್ದ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡವರಿಗೆ ಹಣ ವಾಪಸ್ ಆಗಿರಲಿಲ್ಲ. ಇದೀಗ ಈ ಗೊಂದಲಕ್ಕೆ ಸರ್ಕಾರ ಹಸ್ತಕ್ಷೇಪ ಮಾಡಿದ್ದು, ನಾಳೆ ರಾತ್ರಿ 8 ಗಂಟೆಯೊಳಗೆ ಹಣ ನೀಡುವಂತೆ. ಹಾಗೂ ಮರು ಬುಕ್ಕಿಂಗ್ ಮಾಡಿಕೊಳ್ಳುವವರಿಗೆ ಯಾವುದೇ ಶುಲ್ಕವಿಲ್ಲದೆ ಟಿಕೆಟ್ ಬುಕ್ ಮಾಡಿಕೊಡುವಂತೆ ಆದೇಶ ನೀಡಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Sat, 6 December 25