ಇಂಡಿಗೋ ಬಿಕ್ಕಟ್ಟಿನ ನಡುವೆ ವಿಮಾನಗಳ ದರದ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸೂಚನೆ
ಇಂಡಿಗೋ ಬಿಕ್ಕಟ್ಟಿನ ನಡುವೆ ವಿಮಾನಗಳ ದರವನ್ನು ಹೆಚ್ಚದಂತೆ ನೋಡಿಕೊಳ್ಳುವಂತೆ ಕೇಂದ್ರ ಸರ್ಕಾರ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ. ದಿನಕ್ಕೆ ಸಾವಿರಾರು ಇಂಡಿಗೋ ವಿಮಾನಗಳು ಕ್ಯಾನ್ಸಲ್ ಆಗುತ್ತಿರುವುದರಿಂದಾಗಿ ಬೇರೆ ವಿಮಾನಗಳಿಗೆ ಡಿಮ್ಯಾಂಡ್ ಕೂಡ ಜಾಸ್ತಿಯಾಗಿದೆ. ಇದರಿಂದಾಗಿ ಬೇರೆ ವಿಮಾನಗಳು ದರವನ್ನು ಹೆಚ್ಚು ಮಾಡಿವೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ.

ನವದೆಹಲಿ, ಡಿಸೆಂಬರ್ 6: ಇಂಡಿಗೋ ಸಂಸ್ಥೆಯ ಎಲ್ಲಾ ದೇಶೀಯ ವಿಮಾನಗಳ ವಿಳಂಬ ಮತ್ತು ರದ್ದತಿಯ ನಂತರ ಬೇರೆ ವಿಮಾನಗಳ ಟಿಕೆಟ್ ಬೆಲೆಗಳಲ್ಲಿನ ತೀವ್ರ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಇಂದು ವಿಮಾನ ದರಗಳ ಮಿತಿಯನ್ನು ಘೋಷಿಸಿದೆ. ಇಂಡಿಗೋ ಬಿಕ್ಕಟ್ಟನ್ನು (IndiGo Crisis) ಬಳಸಿಕೊಂಡು ಕೆಲವು ವಿಮಾನಯಾನ ಸಂಸ್ಥೆಗಳು ಹೆಚ್ಚಿನ ವಿಮಾನ ದರಗಳನ್ನು ವಿಧಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
5ನೇ ದಿನಕ್ಕೆ ಕಾಲಿಟ್ಟ ಇಂಡಿಗೋ ಬಿಕ್ಕಟ್ಟು ಮತ್ತು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ನೂರಾರು ವಿಮಾನಗಳು ರದ್ದಾಗಿರುವುದರಿಂದ, ಪ್ರಯಾಣಿಕರನ್ನು ಹೆಚ್ಚಿನ ಶುಲ್ಕ ವಿಧಿಸದಂತೆ ರಕ್ಷಿಸಲು ವಿಮಾನ ದರಗಳನ್ನು ಮಿತಿಗೊಳಿಸಲು ತಕ್ಷಣದ ನಿರ್ದೇಶನಗಳನ್ನು ಹೊರಡಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಪ್ರಯಾಣಿಕರಿಗೆ ಪೂರ್ಣ ಮರುಪಾವತಿ, ಊಟ, ವಸತಿ ಸೌಲಭ್ಯ; ವಿಮಾನ ರದ್ದುಗೊಳಿಸಿದ ಇಂಡಿಗೋಗೆ ಸರ್ಕಾರ ಸೂಚನೆ
ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಪ್ರಯಾಣಿಕರು ಸೇರಿದಂತೆ ಸಾವಿರಾರು ಪ್ರಯಾಣಿಕರು ವಿಮಾನಗಳ ವ್ಯಾಪಕ ರದ್ದತಿಯ ನಂತರ ಸೀಟುಗಳನ್ನು ಬುಕ್ ಮಾಡಲು ಹೆಣಗಾಡುತ್ತಿರುವ ಸಮಯದಲ್ಲಿ ಬೆಲೆಗಳ ಶಿಸ್ತನ್ನು ಕಾಪಾಡಿಕೊಳ್ಳಲು ಮತ್ತು ಶೋಷಣೆಯನ್ನು ತಡೆಯಲು ಈ ಕ್ರಮ ಅತ್ಯಗತ್ಯ ಎಂದು ಸರ್ಕಾರ ಹೇಳಿದೆ.
ವಿಮಾನಯಾನ ಸಂಸ್ಥೆಗಳು ಮತ್ತು ಆನ್‌ಲೈನ್ ಪ್ರಯಾಣ ಪ್ಲಾಟ್ಫಾರ್ಮ್ಗಳು ಪರಿಶೀಲನೆಗೆ ಒಳಪಡಲಿದ್ದು, ದರದ ಮಟ್ಟವನ್ನು ಈಗ ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಇಂಡಿಗೋ ವಿಮಾನ ರದ್ದು ಪ್ರಭಾವ, ಖಾಸಗಿ ಬಸ್ಗಳಿಂದ ಬೇಕಾಬಿಟ್ಟಿ ವಸೂಲಿ: ಬೆಂಗಳೂರು ಮುಂಬೈ ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಿ!
ಇಂಡಿಗೋ ವಿಮಾನಯಾನದಲ್ಲಿ ಐದನೇ ದಿನವೂ ಅವ್ಯವಸ್ಥೆ ಮುಂದುವರಿದಿದ್ದು, ವಿಮಾನ ದರದಲ್ಲಿ ಭಾರಿ ಏರಿಕೆಯಾಗಿದೆ. ವಿಮಾನ ಟಿಕೆಟ್ ಬೆಲೆಗಳು ತೀವ್ರವಾಗಿ ಏರಿದ್ದರಿಂದ ಪ್ರಯಾಣಿಕರು ಮತ್ತಷ್ಟು ತೊಂದರೆಗಳನ್ನು ಎದುರಿಸಿದ್ದಾರೆ. ಕೆಲವು ಮಾರ್ಗಗಳಲ್ಲಿನ ದರಗಳು ಸಾಮಾನ್ಯ ಮಟ್ಟಕ್ಕಿಂತ 4 ಪಟ್ಟು ಹೆಚ್ಚಾದವು. ಶುಕ್ರವಾರ ಒಂದೇ ದಿನ ಸುಮಾರು 1,000 ವಿಮಾನಗಳು ರದ್ದಾಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:03 pm, Sat, 6 December 25




