ಇಂಡಿಗೋ ಮಾಲೀಕ ಯಾರು? ಅವರ ಬಳಿ ಎಷ್ಟಿದೆ ಆಸ್ತಿ? ದಿಢೀರ್ ಬಿಕ್ಕಟ್ಟಿಗೆ ಕಾರಣ ಏನು ಗೊತ್ತೇ? ಇಲ್ಲಿದೆ ಸಮಗ್ರ ಮಾಹಿತಿ
ಇಂಡಿಗೋ ವಿಮಾನಯಾನ ಸಂಸ್ಥೆ ಎದುರಿಸುತ್ತಿರುವ ಸಿಬ್ಬಂದಿ ಕೊರತೆ, ಸಂಚಾರ ವಿಳಂಬ ಹಾಗೂ ಇತರ ಬಿಕ್ಕಟ್ಟು ಐದನೇ ದಿನಕ್ಕೆ ಕಾಲಿಟ್ಟಿದೆ. ಹಾಗಾದರೆ ನಿಜಕ್ಕೂ ಇಂಡಿಗೋಗೆ ಎದುರಾದ ಸಮಸ್ಯೆ ಏನು? ಇಂಡಿಗೋದ ಒಡೆತನ ಹೊಂದಿರುವ ಇಂಟರ್‌ಗ್ಲೋಬ್ ಏವಿಯೇಷನ್ ಪಾಲುದಾರರು ಯಾರು? ಅವರ ಆಸ್ತಿ ಎಷ್ಟು? ಈಗೇಕೆ ದಿಢೀರ್ ಸಮಸ್ಯೆ ಎದುರಾಯಿತು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಇಂಡಿಗೋ (IndiGo) ವಿಮಾನ ರದ್ದತಿ ಮತ್ತು ವಿಮಾನಯಾನ ಬಿಕ್ಕಟ್ಟು ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ತಾಂತ್ರಿಕ ದೋಷಗಳು ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ (DGCA) ಹೊಸ ಮಾನದಂಡಗಳಿಂದ ಈ ಸ್ಥಿತಿ ಉದ್ಭವಿಸಿದೆ ಎನ್ನಲಾಗುತ್ತಿದೆ. ವಿಮಾನಗಳ ರದ್ದತಿಗೆ ಕಾರಣವಾಗುವ ಸಮಸ್ಯೆಗಳನ್ನು ಸೋಮವಾರದೊಳಗೆ ಪರಿಹರಿಸಲಾಗುವುದು ಎಂದು ಕಂಪನಿಯು ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿದೆ. ಏತನ್ಮಧ್ಯೆ, ಜನರು ಇಂಡಿಗೋ ಮಾಲೀಕರು ಮತ್ತು ‘ಇಂಟರ್‌ಗ್ಲೋಬ್ ಏವಿಯೇಷನ್’ನ ಅತಿದೊಡ್ಡ ಪಾಲುದಾರರ ಬಗ್ಗೆ ಮಾಹಿತಿ ಹುಡುಕಲು ಆರಂಭಿಸಿದ್ದಾರೆ. ಹಾಗಾದರೆ, ಇಂಡಿಗೋ ಮಾಲೀಕ ಯಾರು? ‘ಇಂಟರ್‌ಗ್ಲೋಬ್ ಏವಿಯೇಷನ್’ ನಿಯಂತ್ರಣ ಯಾರ ಕೈಯಲ್ಲಿದೆ? ಮಾಹಿತಿ ಇಲ್ಲಿದೆ.
ಇಂಡಿಗೋ ಮಾಲೀಕ ರಾಹುಲ್ ಭಾಟಿಯಾ ಯಾರು?
ಇಂಡಿಗೋ ಎಂಬುದು ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ನ ಅಂಗಸಂಸ್ಥೆ. ಇದನ್ನು ರಾಕೇಶ್ ಗಂಗ್ವಾಲ್ ಮತ್ತು ರಾಹುಲ್ ಭಾಟಿಯಾ ಸ್ಥಾಪಿಸಿದ್ದಾರೆ. ಇವರು ಭಾಟಿಯಾ ಇಂಟರ್‌ಗ್ಲೋಬ್ ಏವಿಯೇಷನ್‌ನ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕಂಪನಿಯನ್ನು 1989 ರಲ್ಲಿ ಸ್ಥಾಪಿಸಲಾಯಿತು ಮತ್ತು ಕಂಪನಿಯ ಪ್ರಮುಖ ವ್ಯವಹಾರ ವೈಮಾನಿಕ ಸಾರಿಗೆ ನಿರ್ವಹಣೆಯಾಗಿದೆ. ರಾಕೇಶ್ ಗಂಗ್ವಾಲ್ ಕಂಪನಿಯಲ್ಲಿ ಸುಮಾರು ಶೇ 13.5 ರಷ್ಟು ಪಾಲು ಹೊಂದಿದ್ದಾರೆ.
ಇಂಟರ್‌ಗ್ಲೋಬ್ ವೆಬ್‌ಸೈಟ್ ಪ್ರಕಾರ, ರಾಹುಲ್ ಭಾಟಿಯಾ ಕೆನಡಾದ ಒಂಟಾರಿಯೊದಲ್ಲಿರುವ ವಾಟರ್‌ಲೂ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಭಾಟಿಯಾ ಅವರ ನಾಯಕತ್ವದಲ್ಲಿ, ಇಂಡಿಗೋ ವಿವಿಧ ವ್ಯವಹಾರಗಳಿಗೆ ವಿಸ್ತರಿಸಿದೆ. ಇವುಗಳಲ್ಲಿ ಆತಿಥ್ಯ, ಲಾಜಿಸ್ಟಿಕ್ಸ್, ತಂತ್ರಜ್ಞಾನ, ವಿಮಾನಯಾನ ನಿರ್ವಹಣೆ, ಪೈಲಟ್ ತರಬೇತಿ ಮತ್ತು ವಿಮಾನ ನಿರ್ವಹಣಾ ಎಂಜಿನಿಯರಿಂಗ್ ಸೇರಿವೆ.
ರಾಹುಲ್ ಭಾಟಿಯಾ ಬಳಿ ಎಷ್ಟಿದೆ ಆಸ್ತಿ?
ಫೋರ್ಬ್ಸ್ ಪ್ರಕಾರ, ರಾಹುಲ್ ಭಾಟಿಯಾ ಅವರ ಆಸ್ತಿಯ ನಿವ್ವಳ ಮೌಲ್ಯ 8.1 ಶತಕೋಟಿ ಡಾಲರ್. ಫೋರ್ಬ್ಸ್ ಶ್ರೀಮಂತರ ಪಟ್ಟಿಯ ಪ್ರಕಾರ ಭಾಟಿಯಾ ವಿಶ್ವದ ಶತಕೋಟ್ಯಾಧಿಪತಿಗಳಲ್ಲಿ 420 ನೇ ಸ್ಥಾನದಲ್ಲಿದ್ದಾರೆ. ಅವರು ಇಂಟರ್ ಗ್ಲೋಬ್ ಏವಿಯೇಷನ್‌ನ ಪ್ರವರ್ತಕರೂ ಆಗಿದ್ದಾರೆ. ಬಿಎಸ್‌ಇ ಸ್ಟಾಕ್ ಎಕ್ಸ್ಚೇಂಜ್ ಮಾಹಿತಿ ಪ್ರಕಾರ, ಅವರು ನೇರವಾಗಿ ಇಡೀ ವಿಮಾನಯಾನ ಕ್ಷೇತ್ರದಲ್ಲಿ ಶೇ 0.01 ರ ಪಾಲನ್ನು ಅಥವಾ 40,000 ಷೇರುಗಳನ್ನು ಹೊಂದಿದ್ದಾರೆ.
ರಾಕೇಶ್ ಗಂಗ್ವಾಲ್ ಯಾರು?
ರಾಕೇಶ್ ಗಂಗ್ವಾಲ್ ಇಂಡಿಗೋದ ಮತ್ತೊಬ್ಬ ಸಹ-ಸಂಸ್ಥಾಪಕ. 2022 ರಲ್ಲಿ ಕಂಪನಿಯ ನಿರ್ದೇಶಕರ ಮಂಡಳಿ ಹುದ್ದೆ ತ್ಯಜಿಸಿದ್ದು, ಅಂದಿನಿಂದ ವಿಮಾನಯಾನ ಸಂಸ್ಥೆಯಲ್ಲಿ ತಾವು ಹೊಂದಿರುವ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಿಎಸ್‌ಇ ಮಾಹಿತಿ ಪ್ರಕಾರ, ರಾಕೇಶ್ ಗಂಗ್ವಾಲ್ ಪ್ರಸ್ತುತ ಇಂಟರ್‌ಗ್ಲೋಬ್ ಏವಿಯೇಷನ್‌ನಲ್ಲಿ ಶೇ 4.53 ರ ಪಾಲನ್ನು ಅಥವಾ 1,75,30,493 ಷೇರುಗಳನ್ನು ಹೊಂದಿದ್ದಾರೆ.
ಇಂಡಿಗೋ ಏರ್ಲೈನ್ಸ್ ಬಳಿ ಎಷ್ಟಿವೆ ವಿಮಾನ?
ಇಂಡಿಗೋ ಪ್ರಸ್ತುತ ದೊಡ್ಡ ವಿಮಾನಗಳ ಸಮೂಹವನ್ನು ನಿರ್ವಹಿಸುತ್ತಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ವಿಮಾನಯಾನ ಸಂಸ್ಥೆಯ ಬಳಿ 434 ವಿಮಾನಗಳಿದ್ದು, ಪ್ರತಿದಿನ 2,300 ಟ್ರಿಪ್ ಸಂಚಾರ ಮಾಡುತ್ತವೆ. ಭಾರತದ ವೈಮಾನಿಕ ಸಾರಿಗೆ ವಲಯದಲ್ಲಿ ಇಂಡಿಗೋ ಅತಿಹೆಚ್ಚಿನ ಪಾಲು ಹೊಂದಿದೆ.
ಇಂಡಿಗೋ ಬಿಕ್ಕಟ್ಟು ಶುರುವಾಗಿದ್ಹೇಗೆ? ಯಾಕೆ?
ಡಿಜಿಸಿಎ ಬಿಡುಗಡೆ ಮಾಡಿದ ಹೊಸ ಸಿಬ್ಬಂದಿ ಕರ್ತವ್ಯ ನಿಯಮಗಳಿಂದ (FDTL) ಉಂಟಾದ ಸಮಸ್ಯೆಗಳ ಕಾರಣ ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಅಥವಾ ಭಾಗಶಃ ಸ್ಥಗಿತ ಉಂಟಾಗಿದೆ. ಇದೀಗ ಬಿಕ್ಕಟ್ಟು ಐದನೇ ದಿನಕ್ಕೆ ಕಾಲಿಟ್ಟಿದೆ. ಡಿಸೆಂಬರ್ 8 ರ ಒಳಗೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡು, ನಂತರ 2026 ರ ಫೆಬ್ರವರಿ 10 ರೊಳಗೆ ಎಂದಿನಂದತೆಯೇ ಕಾರ್ಯಾಚರಣೆಗೆ ಮರಳುವ ಬಗ್ಗೆ ವಿಮಾನಯಾನ ಸಂಸ್ಥೆ ಭರವಸೆ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಇಂಡಿಗೋ ವೈಫಲ್ಯದ ಜೊತೆಗೆ ವಿದೇಶಿ ಕೈವಾಡ? ಭಾರತೀಯ ವಿಮಾನಯಾನದ ಬೆನ್ನೆಲುಬು ಮುರಿದದ್ದು ಯಾರು?
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




