ರತನ್ ಟಾಟಾ ಮಲತಾಯಿ ಸಿಮೋನ್ ವಿಧಿವಶ; ಲ್ಯಾಕ್ಮೆ, ವೆಸ್ಟ್ಸೈಡ್ನಂತಹ ಬ್ರ್ಯಾಂಡ್ ಕಟ್ಟಿದ್ದ ಚಾಣಾಕ್ಷ್ಯೆ ಅವರು
Simone Tata passes away at 95: ರತನ್ ಟಾಟಾ ಅವರ ಮಲತಾಯಿಯಾಗಿದ್ದ 95 ವರ್ಷದ ಸಿಮೋನ್ ಟಾಟಾ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಮರಣ ಅಪ್ಪಿದ್ದಾರೆ. ರತನ್ ಟಾಟಾರಂತೆ ಸಿಮೋನ್ ಕೂಡ ಪಾರ್ಕಿನ್ಸನ್ ಸಮಸ್ಯೆಯಿಂದ ಬಳಲುತ್ತಿದ್ದರು. ಸ್ವಿಟ್ಜರ್ಲೆಂಡ್ ಸಂಜಾತೆಯಾದ ಸಿಮೋನ್ ಅವರನ್ನು ರತನ್ ಟಾಟಾ ತಂದೆ ನಾವಲ್ ಟಾಟಾ 1955ರಲ್ಲಿ ವಿವಾಹವಾಗಿದ್ದರು.

ಮುಂಬೈ, ಡಿಸೆಂಬರ್ 5: ದಿವಂಗತ ರತನ್ ಟಾಟಾ ಅವರ ಮಲತಾಯಿಯಾಗಿದ್ದ ಸಿಮೋನ್ ಟಾಟಾ (Simone Tata) ನಿಧನರಾಗಿದ್ದಾರೆ. ಅವರಿಗೆ 9 ವರ್ಷ ವಯಸ್ಸಾಗಿತ್ತು. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಸಿಮೋನ್ ಅವರ ಆರೋಗ್ಯ ಸ್ಥಿತಿ ಆಗಸ್ಟ್ನಲ್ಲಿ ಗಂಭೀರಗೊಂಡಿತ್ತು. ದುಬೈನಿಂದ ಮುಂಬೈಗೆ ಅವರನ್ನು ಕರೆತಂದು ಇಲ್ಲಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇರಿಸಿಲಾಗಿತ್ತು. ಡಾ. ಫಾರೂಕ್ ಉಡವಾಡಿಯಾ ಅವರ ಕಣ್ಗಾವಲಿನಲ್ಲಿ ಸಿಮೋನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇವತ್ತು ಶುಕ್ರವಾರ ಆಸ್ಪತ್ರೆಯಲ್ಲೇ 95 ವರ್ಷದ ವೃದ್ಧೆಯ ಪ್ರಾಣಪಕ್ಷಿ ಹಾರಿ ಹೋಗಿದೆ.
ಸಿಮೋನ್ ಟಾಟಾ ಅವರು ಭಾರತ ಸಂಜಾತೆಯಲ್ಲ. ಸ್ವಿಟ್ಜರ್ಲೆಂಟಿನ ಜಿನಿವಾದಲ್ಲಿ ಹುಟ್ಟಿದವರು. ರತನ್ ಟಾಟಾ ಅವರ ತಂದೆ ನಾವಲ್ ಟಾಟಾ ಅವರನ್ನು 1953ರಲ್ಲಿ ಸಿಮೋನ್ ಭೇಟಿಯಾಗಿದ್ದರು. ಭಾರತಕ್ಕೆ ಪ್ರವಾಸಿಗಳಾಗಿ ಬಂದಿದ್ದ ಸಿಮೋನ್ ಅವರು ನಾವಲ್ ಟಾಟಾ ಅವರನ್ನು ಭೇಟಿಯಾದಾಗ ಅವರ ವಯಸ್ಸು 23 ವರ್ಷ. ಅದಾಗಲೇ ವಿಚ್ಛೇದನಗೊಂಡಿದ್ದ ನಾವಲ್ ಅವರು ಸಿಮೋನ್ ಅವರಿಗಿಂತ 26 ವರ್ಷ ಹಿರಿಯರು. 1955ರಲ್ಲಿ ಇಬ್ಬರೂ ಮದುವೆಯಾಗಿದೆ. ಅದಾದ ಬಳಿಕ ಸಿಮೋನ್ ಅವರು ಖಾಯಂ ಆಗಿ ಮುಂಬೈನಲ್ಲೇ ವಾಸವಿದ್ದರು.
ಇದನ್ನೂ ಓದಿ: ಭಾರತ-ರಷ್ಯಾ ಬ್ಯುಸಿನೆಸ್ ಫೋರಂಗೆ ಮುನ್ನ ವಿಷನ್ 2030 ಒಪ್ಪಂದಕ್ಕೆ ಸಹಿ
ನಾವಲ್ ಟಾಟಾ ಅವರ ಮೊದಲ ಪತ್ನಿಯ ಮಗ ರತನ್ ಟಾಟಾ. ರತನ್ ಅವರ ತಾಯಿ ಬೇರೊಂದು ವಿವಾಹವಾದರು. ರತನ್ ಅವರು ಟಾಟಾ ಕುಟುಂಬದಲ್ಲೇ ಉಳಿದುಕೊಂಡರು. ಇವರ ಮಲತಾಯಿಯಾದ ಸಿಮೋನ್ ಅವರು ಚಾಣಾಕ್ಷ್ಯ ಉದ್ಯಮಿ ಎನಿಸಿದ್ದರು. ಟ್ರೆಂಟ್, ಲ್ಯಾಕ್ಮೆ ಮೊದಲಾದ ಹಲವು ಸುಪ್ರಸಿದ್ಧ ಬ್ರ್ಯಾಂಡ್ಗಳನ್ನು ಕಟ್ಟಿ ಬೆಳೆಸಿದ ಚಾಣಾಕ್ಷ್ಯ ಆಕೆ.
ಎಂಬತ್ತರ ದಶಕದಲ್ಲಿ ಟಾಟಾ ಗ್ರೂಪ್ ಒಡೆತನದ ಲ್ಯಾಕ್ಮೆ ಕಂಪನಿಯ ಛೇರ್ಮನ್ ಆಗಿ ಜವಾಬ್ದಾರಿ ನಿರ್ವಹಿಸಿದ್ದರು. 1996ರಲ್ಲಿ ಲ್ಯಾಕ್ಮೆ ಉತ್ತಮ ಬ್ರ್ಯಾಂಡ್ ಆಗಿದ್ದಾಗಲೇ ಹಿಂದೂಸ್ತಾನ್ ಯುನಿಲಿವರ್ಗೆ ಮಾರಲ್ಪಟ್ಟಿತು.
ನಂತರ ಟ್ರೆಂಟ್ ಅನ್ನು ಸಿಮೋನ್ ಮುನ್ನಡೆಸಿದರು. ಲ್ಯಾಕ್ಮೆ ಮಾರಾಟದಿಂದ ಬಂದ ಆದಾಯ ಬಳಸಿ ವೆಸ್ಟ್ಸೈಡ್ ಬ್ರ್ಯಾಂಡ್ ಕಟ್ಟಿದರು. ಲ್ಯಾಕ್ಮೆ ಕಾಸ್ಮೆಟಿಕ್ಸ್ ಬ್ರ್ಯಾಂಡ್ ಆದರೆ, ವೆಸ್ಟ್ಸೈಡ್ ಫ್ಯಾಷನ್ ಉಡುಪುಗಳ ಬ್ರ್ಯಾಂಡ್ ಆಗಿದೆ.
ಇದನ್ನೂ ಓದಿ: ಭಾರತೀಯ ಅಂತರಿಕ್ಷ ನಿಲ್ದಾಣದ ರೂಪುರೇಖೆ ಅಂತಿಮಗೊಳಿಸಿದ ಇಸ್ರೋ ಮತ್ತು ಸರ್ಕಾರ
2006ರವರೆಗೂ ಸಿಮೋನ್ ಅವರು ಟ್ರೆಂಟ್ ಕಂಪನಿಯನ್ನು ಮುನ್ನಡೆಸಿದರು. ಅದಾದ ಬಳಿಕ ನಿವೃತ್ತರಾದರು. ಆನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆ. ರತನ್ ಟಾಟಾ ನಿಧನದ ಬಳಿಕ ಅವರ ಅಂತಿಮ ವಿಧಿವಿಧಾನ ಕಾರ್ಯಕ್ರಮದಲ್ಲಿ ಸಿಮೋನ್ ಅವರು ಕಾಣಿಸಿಕೊಂಡಿದ್ದೇ ಕೊನೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




