ಇಂಡಿಗೋ ಫೈಟ್ಸ್ ರದ್ದು ಬಿಕ್ಕಟ್ಟು: ವಿಮಾನ ನಿಲ್ದಾಣದಲ್ಲಿ ಕಿಲೋಮೀಟರ್ಗಟ್ಟಲೆ ಸರದಿ, ಪ್ರಯಾಣಿಕರ ಪರದಾಟ
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ರದ್ದತಿಯಿಂದ ಐದು ದಿನಗಳಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ದೀರ್ಘ ಸರದಿ ಸಾಲುಗಳು, ಸೂಕ್ತ ಮಾಹಿತಿ ಕೊರತೆ ಮತ್ತು ಹೆಚ್ಚಿದ ವೆಚ್ಚಗಳು ಪ್ರಯಾಣಿಕರನ್ನು ತೀವ್ರವಾಗಿ ಕಾಡುತ್ತಿವೆ. ವೃದ್ಧರು ಸೇರಿದಂತೆ ಹಲವರು ತೊಂದರೆ ಅನುಭವಿಸುತ್ತಿದ್ದು, ವಿಮಾನಯಾನ ಸಂಸ್ಥೆಯಿಂದ ಸ್ಪಷ್ಟ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಬೆಂಗಳೂರು, ಡಿಸೆಂಬರ್ 6: ಕಳೆದ ಐದು ದಿನಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ರದ್ದತಿಯಿಂದಾಗಿ ಪ್ರಯಾಣಿಕರು ತೀವ್ರ ಪರದಾಟ ನಡೆಸುತ್ತಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ವಿಮಾನ ಹತ್ತಲು ಉದ್ದುದ್ದದ ಸರದಿ ಸಾಲುಗಳು ಕಂಡುಬರುತ್ತಿವೆ. ವಿಮಾನ ನಿಲ್ದಾಣದ ಆವರಣದಲ್ಲಿ ಕಿಲೋಮೀಟರ್ಗಟ್ಟಲೆ ಸರದಿ ಸಾಲು ಕಂಡುಬಂದಿದೆ. ಬೆಳಗ್ಗೆಯಿಂದಲೂ ಕಾಯುತ್ತಿರುವ ಪ್ರಯಾಣಿಕರಿಗೆ ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಸೂಕ್ತ ಮಾಹಿತಿ ಲಭ್ಯವಾಗುತ್ತಿಲ್ಲ.
ವಿಮಾನ ನಿಲ್ದಾಣದ ಆಡಳಿತ ಮಂಡಳಿ ಪ್ರಯಾಣಿಕರಿಗೆ ನೀರು ಮತ್ತು ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡಿದ್ದರೂ, ಇಂಡಿಗೋ ವಿಮಾನಯಾನ ಸಂಸ್ಥೆಯು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿಲ್ಲ ಅಥವಾ ಸ್ಪಷ್ಟ ವಿವರಗಳನ್ನು ನೀಡಿಲ್ಲ. ಇದರಿಂದ ಪ್ರಯಾಣಿಕರ ಆಕ್ರೋಶ ಹೆಚ್ಚಿದ್ದು, ವೃದ್ಧರು ಸಹ ಕಷ್ಟಪಡುತ್ತಿದ್ದಾರೆ. ಇಂದು 37 ವಿಮಾನಗಳು ರದ್ದಾಗಿರುವುದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ.
