ಪಶ್ಚಿಮ ಬಂಗಾಳದ (West Bengal) ಬಿರ್ಭೂಮ್ ಜಿಲ್ಲೆಯ (Birbhum Massacre) ರಾಂಪುರಹತ್ನ ಬರೋಸಾಲ್ ಗ್ರಾಮ ಪಂಚಾಯಿತಿ ಉಪಪ್ರಧಾನ್ (ಉಪಾಧ್ಯಕ್ಷ) ಭಡು ಶೇಖ್ ಎಂಬುವರ ಹತ್ಯೆ ನಡೆದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ, 12ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಇಟ್ಟ ಮತ್ತು ಇಬ್ಬರು ಮಕ್ಕಳು ಸೇರಿ 8 ಮಂದಿ ಸಜೀವ ದಹನಗೊಂಡ ಪ್ರಕರಣವನ್ನು ಇಂದು ಕೋಲ್ಕತ್ತ ಹೈಕೋರ್ಟ್ ಸುಮೊಟೊ (ಸ್ವಯಂಪ್ರೇರಿತ) ವಿಚಾರಣೆ ನಡೆಸಿತು. ಸೂಕ್ತ ವಿಚಾರಣೆ ನಡೆದು, ತೀರ್ಪು ಹೊರಬರಬೇಕು ಎಂದರೆ ಸಾಕ್ಷಿಗಳನ್ನು ಸಂರಕ್ಷಿಸಬೇಕು. ಹೀಗಾಗಿ ಕ್ರೈಂ-ಹಿಂಸಾಚಾರ ನಡೆದ ಸ್ಥಳಗಳನ್ನು ಎಲ್ಲ ಆಯಾಮಗಳಿಂದಲೂ ತೋರಿಸುವ ರೀತಿಯಲ್ಲಿ ಆ ಜಾಗದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಸಿಸಿಟಿವಿಯಲ್ಲಿ ಸಾಕಷ್ಟು ಸ್ಟೋರೇಜ್ಗೆ ಅವಕಾಶ ಇರಬೇಕು. ಸಾಕ್ಷಿ ನಾಶಕ್ಕೆ ಅವಕಾಶ ಕೊಡಬಾರದು ಮತ್ತು ಈ ಕೆಲಸವನ್ನು ಜಿಲ್ಲಾ ನ್ಯಾಯಾಧೀಶರಾದ ಪುರ್ಬಾ ಭುರ್ದಾವನ್ ಸಮ್ಮುಖದಲ್ಲಿಯೇ ನಡೆಸಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಘಟನೆಗೆ ಸಂಬಂಧಪಟ್ಟಂತೆ ಒಂದೂ ಸಾಕ್ಷಿ ನಾಶವಾಗದಂತೆ ನೋಡಿಕೊಳ್ಳುವುದು ಪಶ್ಚಿಮ ಬಂಗಾಳ ರಾಜ್ಯಸರ್ಕಾರದ ಹೊಣೆ ಎಂದು ಹೇಳಿರುವ ಕೋಲ್ಕತ್ತ ಹೈಕೋರ್ಟ್, ಯಾವುದೇ ರೀತಿಯ ವಿಳಂಬ ಮಾಡದೆ ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ. ವಿಧಿವಿಜ್ಞಾನ ಪರೀಕ್ಷೆಗೆ ಏನೆಲ್ಲ ವಸ್ತುಗಳ ಸಂಗ್ರಹ ಅಗತ್ಯವೋ ಅದನ್ನು ಕೂಡಲೇ ಮಾಡಿ ಎಂದು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಸಿಎಫ್‌ಎಸ್‌ಎಲ್) ಸೂಚನೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿಯ ಅಂಗಡಿಯೊಂದರಲ್ಲಿ ನಿಂತಿದ್ದ ಉಪಾಧ್ಯಕ್ಷ ಭಡು ಶೇಖ್ ಅವರನ್ನು, ಬೈಕ್ನಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಕಚ್ಚಾ ಬಾಂಬ್ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಆದರೆ ಭಡು ಶೇಖ್ ಬೆಂಬಲಿಗರು ಮಾತ್ರ ತಾಳ್ಮೆ ಕಳೆದುಕೊಂಡು 12 ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಇಟ್ಟಿದ್ದಾರೆ. ಇಲ್ಲಿಯವರೆಗೆ ಘಟನೆಗೆ ಸಂಬಂಧಪಟ್ಟಂತೆ ಸುಮಾರು 20 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಶೇಷ ತನಿಖಾ ತಂಡವೂ ರಚನೆಯಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರವೂ ಕೂಡ ಘಟನೆ ಬಗ್ಗೆ ಸಮಗ್ರ ವರದಿ ನೀಡುವಂತೆ ಪಶ್ಚಿಮ ಬಂಗಾಳ ರಾಜ್ಯ ಗೃಹ ಸಚಿವಾಲಯವನ್ನು ಕೇಳಿದೆ. ಇಷ್ಟರ ಮಧ್ಯೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾತ್ಸವ್ ಮತ್ತು ನ್ಯಾ. ರಾಜರ್ಷಿ ಭಾರದ್ವಾಜ್ ನೇತೃತ್ವದ ಪೀಠ ಈ ಸೂಚನೆಗಳನ್ನು ನೀಡಿದೆ.
Published On - 4:03 pm, Wed, 23 March 22