
ವಿಶಾಖಪಟ್ಟಣಂ, ಜೂನ್ 21: ಯೋಗ ಇಂದು ವಿಶ್ವವನ್ನು ಒಂದಾಗಿ ಮಾಡಿದೆ. ವಿಶ್ವದ ಕೋಟ್ಯಂತರ ಜನರ ಜೀವನ ಶೈಲಿಯನ್ನು ಯೋಗ ಬದಲಿಸಿದೆ. ಯೋಗ ಅಂದರೆ ಒಬ್ಬರಿಗಾಗಿ ಅಲ್ಲ ಎಲ್ಲರಿಗಾಗಿ ಯೋಗ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ‘1 ಭೂಮಿ, 1 ಆರೋಗ್ಯಕ್ಕಾಗಿ ಯೋಗ’ ಶೀರ್ಷಿಕೆಯಡಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಯೋಗ ವಿಶ್ವಾದ್ಯಂತ ಒಂದು ಆಂದೋಲನವಾಗಿ ಮಾರ್ಪಟ್ಟಿದೆ ಎಂದು ಹೇಳಿದರು.
ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್.ಕೆ.ಬೀಚ್‌ನಿಂದ ಭೋಗಪುರಂವರೆಗೆ 26 ಕಿ.ಮೀ. ಉದ್ದದ ಕಾರಿಡಾರ್ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ಏಕಕಾಲದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಯೋಗ ಮಾಡಿದರು.
Yoga isn’t just an exercise. It is a way of life. Wonderful to join this year’s Yoga Day celebrations in Visakhapatnam. https://t.co/ReTJ0Ju2sN
— Narendra Modi (@narendramodi) June 21, 2025
ದೇಶದ ಜನತೆಗೆ ಯೋಗ ದಿನಾಚರಣೆಯ ಶುಭಾಶಯ ತಿಳಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು 175 ದೇಶಗಳು ಯೋಗ ದಿನ ಆಚರಣೆ ಮಾಡುತ್ತಿವೆ. ಮಾನಸಿಕ, ದೈಹಿಕ ಆರೋಗ್ಯ ಕಾಪಾಡಲು ಯೋಗ ನೆರವಾಗಲಿದೆ. ಯೋಗ ಎಂದರೆ ಎಲ್ಲರೂ ಒಂದಾಗುವುದು ಎಂದರ್ಥ. ಇಡೀ ವಿಶ್ವವೇ ಯೋಗ ದಿನ ಆಚರಿಸುತ್ತಿರುವುದು ಸಾಧಾರಣ ವಿಷಯವಲ್ಲ. ವಿಶ್ವದ ಕೋಟ್ಯಂತರ ಜನರ ಜೀವನ ಶೈಲಿಯನ್ನು ಯೋಗ ಬದಲಿಸಿದೆ. ಮನುಷ್ಯ ಶಿಸ್ತುಬದ್ಧ ಜೀವನ ನಡೆಸಲು ಯೋಗ ಸಹಕಾರಿಯಾಗಲಿದೆ ಎಂದರು.
ಇದನ್ನೂ ಓದಿ: Yoga Live: ವಿಶಾಖಪಟ್ಟಣಂನಲ್ಲಿ ಯೋಗ ದಿನಾಚರಣೆ: ಪ್ರಧಾನಿ ಮೋದಿ ಭಾಗಿ
ಮಾನವೀಯತೆ, ಶಾಂತಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ನೆರವಾಗಲಿದೆ. ಯೋಗ ಹಲವು ದೇಶಗಳ ಜೊತೆ ಬಾಂಧವ್ಯ ವೃದ್ಧಿಗೆ ನೆರವಾಗಿದೆ. ನೌಕಾಪಡೆ ಸಿಬ್ಬಂದಿ ನೌಕೆಯಲ್ಲೇ ಯೋಗಾಸನ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಕೂಡ ಯೋಗಾಸನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಮಾತನಾಡಿದ್ದು, ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲಬೇಕು. 2014ರ ಜೂನ್ 21ರಂದು ವಿಶ್ವಸಂಸ್ಥೆ ಯೋಗ ದಿನವನ್ನು ಘೋಷಿಸಿತು. ಇಂದು ವಿಶ್ವಾದ್ಯಂತ 10 ಕೋಟಿ ಜನ ಯೋಗಾಸನ ಮಾಡುತ್ತಿದ್ದಾರೆ. ಮಾನಸಿಕ, ದೈಹಿಕ ಆರೋಗ್ಯ ಸುಧಾರಣೆಗೆ ಯೋಗಾಸನ ಸಹಾಯಕವಾಗಲಿದೆ ಎಂದರು.
ಇದನ್ನೂ ಓದಿ: International Yoga Day 2025: ಮೈಸೂರಿನ ಈ ಪ್ರಕೃತಿ ಮಡಿಲಿನಲ್ಲಿ ಯೋಗ ಕಲಿಯಲು ಇದೆ ಅವಕಾಶ
ಸೆಪ್ಟೆಂಬರ್ನಿಂದ ಯೋಗ ಸೂಪರ್ ಲೀಗ್ ಕಾರ್ಯಕ್ರಮ ಆರಂಭವಾಗಲಿದೆ. ಶುಕ್ರವಾರ 22 ಸಾವಿರ ಗಿರಿಜನ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಿದರು. ಈ ಮೂಲಕ ಗಿರಿಜನ ವಿದ್ಯಾರ್ಥಿಗಳು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಯೋಗಾಸನದಲ್ಲಿ 5 ಲಕ್ಷ ಜನ ಭಾಗಿಯಾಗಿ ಗಿನ್ನೆಸ್ ದಾಖಲೆ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.
ಡಿಸಿಎಂ ಪವನ್ ಕಲ್ಯಾಣ್ ಮಾತನಾಡಿ, ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದ್ದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲುತ್ತೆ. ವಿಶ್ವಸಂಸ್ಥೆಯಲ್ಲಿ ಯೋಗದ ಮಹತ್ವದ ಬಗ್ಗೆ ಮನವರಿಕೆ ಮಾಡಿದರು. ಇದರಿಂದಾಗಿ ಈ ದಿನವನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:59 am, Sat, 21 June 25