International Yoga Day 2025: ಮೈಸೂರಿನ ಈ ಪ್ರಕೃತಿ ಮಡಿಲಿನಲ್ಲಿ ಯೋಗ ಕಲಿಯಲು ಇದೆ ಅವಕಾಶ
ಪ್ರತಿ ವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ. ನಾಳೆ ಅಂತಾರಾಷ್ಟ್ರೀಯ ಯೋಗ ದಿನವಿದ್ದು ಎಲ್ಲರೂ ಈ ದಿನವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಆದರೆ ದಿನಿನಿತ್ಯ ಯೋಗ ಮಾಡುವುದರಿಂದ ದೈಹಿಕ ಸಮಸ್ಯೆಗಳು ದೂರವಾಗುತ್ತದೆ ಹಾಗೂ ಆಂತರಿಕ ಸಂತೋಷವನ್ನು ಪಡೆಯಬಹುದಾಗಿದೆ. ನೀವೇನಾದ್ರೂ ಹಚ್ಚಹಸಿರಿನ ವಾತಾವರಣದ ನಡುವೆ ಯೋಗ ಮಾಡಲು ಬಯಸುವವರು ಹಾಗೂ ಯೋಗ ಕಲಿಯಬೇಕೆನ್ನುವವರಿಗೆ ಭಾರತದ ಈ ಸ್ಥಳಗಳು ಉತ್ತಮ ಆಯ್ಕೆಗಳಾಗಿವೆ. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೋಗ ಬಲ್ಲವನಿಗೆ ರೋಗವಿಲ್ಲ ಎನ್ನುವ ಮಾತಿದೆ. ಹೌದು, ದಿನನಿತ್ಯ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ (physical and mental health) ವನ್ನು ಕಾಪಾಡಿಕೊಳ್ಳಬಹುದು. ಹೆಚ್ಚಿನವರು ಯೋಗ ಮಾಡಲು ಮನೆ, ಉದ್ಯಾನವನ, ಬಾಲ್ಕನಿ ಸೇರಿದಂತೆ ಮನೆಯ ಸುತ್ತಮುತ್ತಲಿನ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಪ್ರಶಾಂತವಾದ ವಾತಾವರಣದ ನಡುವೆ ಯೋಗಾಭ್ಯಾಸ ಮಾಡಬೇಕು ಎನ್ನುವವರಿಗೆ ಭಾರತದ ಈ ತಾಣಗಳು (places) ಬೆಸ್ಟ್ ಆಗಿವೆ. ಹೌದು, ನಾಳೆ ಅಂತಾರಾಷ್ಟ್ರೀಯ ಯೋಗ ದಿನ (International Yoga Day) ವಾಗಿದ್ದು, ಪ್ರಕೃತಿಯ ಮಡಿಲಿನಲ್ಲಿ ಹಾಗೂ ಪ್ರಶಾಂತವಾದ ವಾತಾವರಣದ ನಡುವೆ ಯೋಗಾಸನ ಮಾಡಬೇಕು, ಸರಿಯಾದ ತರಬೇತಿಯೊಂದಿಗೆ ಯೋಗ ಕಲಿಯಬೇಕು ಎನ್ನುವವರಿಗೆ ನಾವು ಒಂದಷ್ಟು ತಾಣಗಳ ಬಗ್ಗೆ ತಿಳಿಸಿ ಕೊಡ್ತೇವೆ.
ಮೈಸೂರು :ಕರ್ನಾಟಕದಲ್ಲಿರುವ ಮೈಸೂರು ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧಿ ಪಡೆದಿದೆ. ಆದರೆ ಈ ಮೈಸೂರು ಅಷ್ಟಾಂಗ ಯೋಗಕ್ಕೆ ಹೆಸರುವಾಸಿಯಾಗಿದೆ ಎನ್ನುವುದು ಬಹುತೇಕರಿಗೆ ತಿಳಿದೇ ಇಲ್ಲ. ಕೆ. ಪಟ್ಟಾಭಿ ಜೋಯಿಸ್ ಅವರು ಸ್ಥಾಪಿಸಿದ ಪ್ರತಿಷ್ಠಿತ ಅಷ್ಟಾಂಗ ಯೋಗ ಸಂಶೋಧನಾ ಸಂಸ್ಥೆಯೂ ಇಲ್ಲಿದೆ. ಸಾಂಸ್ಕೃತಿಕತೆಯೊಂದಿಗೆ ಬೆಸೆದುಕೊಂಡಿರುವ ಈ ಜಿಲ್ಲೆಯೂ ಅಷ್ಟಾಂಗ ಯೋಗಕ್ಕೆ ಸಂಬಂಧ ಪಟ್ಟಂತೆ ಆಳವಾಗಿ ಅಧ್ಯಯನ ಮಾಡಲು ಸಹಾಯಕವಾಗಿದೆ. ಯೋಗಾಸ್ತಕರು ಈ ಇಲ್ಲಿಗೆ ಭೇಟಿ ನೀಡಿ ಯೋಗವನ್ನು ಅಭ್ಯಾಸ ಮಾಡಬಹುದು.
ಋಷಿಕೇಶ :ಉತ್ತರಾಖಂಡದಲ್ಲಿರುವ ಈ ಋಷಿಕೇಶವು ಯೋಗದ ರಾಜಧಾನಿ ಎಂದೇ ಖ್ಯಾತಿ ಪಡೆದಿದೆ. ಇಲ್ಲಿಗೆ ಭೇಟಿ ನೀಡಿದ್ರೆ ಪ್ರಶಾಂತವಾದ ವಾತಾವರಣದೊಂದಿಗೆ ಗಂಗಾ ನದಿ ದಡದಲ್ಲಿ ಯೋಗ ಅಭ್ಯಾಸ ಮಾಡಬಹುದಾಗಿದೆ. ಇದು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಇಲ್ಲಿ ಪರಮಾರ್ಥ ನಿಕೇತನ ಮತ್ತು ಶಿವಾನಂದ ಆಶ್ರಮ ಸೇರಿದಂತೆ ಹಲವಾರು ಪ್ರಸಿದ್ಧ ಆಶ್ರಮಗಳಿವೆ. ಯೋಗ ಮಾಡುವ ಆಸಕ್ತಿಯಿರುವವರು, ಯೋಗ ಕಲಿಯಬೇಕೆನ್ನುವವರು ಈ ಆಶ್ರಮಕ್ಕೆ ಭೇಟಿ ಕೊಟ್ಟರೆ ಸಾಂಪ್ರದಾಯಿಕ ಯೋಗ, ಧ್ಯಾನ ಸೇರಿದಂತೆ ತರಬೇತಿಯನ್ನು ಪಡೆಯಬಹುದು. ಇನ್ನು ವಿಶೇಷ ಎಂಬಂತೆ ಇಲ್ಲಿ ಅಂತಾರಾಷ್ಟ್ರೀಯ ಯೋಗ ಉತ್ಸವವು ನಡೆಯುತ್ತದೆ.
ಧರ್ಮಶಾಲಾ : ಹಿಮಾಲಯ ಪ್ರದೇಶದಲ್ಲಿರುವ ಈ ಧರ್ಮಶಾಲಾ ಯೋಗಾಭ್ಯಾಸ ಮಾಡಲು ಬೆಸ್ಟ್ ತಾಣ ಎನ್ನಬಹುದು. ಟಿಬೆಟಿಯನ್ ಸಂಸ್ಕೃತಿ ಹಾಗೂ ಶಾಂತ ವಾತಾವರಣದಿಂದ ಕೂಡಿದ ಈ ತಾಣವು ಎಲ್ಲರಿಗೂ ಇಷ್ಟವಾಗುತ್ತದೆ. ವಿವಿಧ ಯೋಗ ತರಬೇತಿ ಕೇಂದ್ರಗಳಿದ್ದು, ಯೋಗ ಅಭ್ಯಾಸದೊಂದಿಗೆ ಇಲ್ಲಿನ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಿ ಸೌಂದರ್ಯವನ್ನು ಸವಿಯಬಹುದು.
ಪಾಂಡಿಚೇರಿ : ತಮಿಳುನಾಡಿನ ಈ ಪಾಂಡಿಚೇರಿ ಸ್ಥಳ ಯೋಗ ಆಸಕ್ತರಿಗೆ ಇಷ್ಟವಾಗದೇ ಇರದು. ಹಚ್ಚ ಹಸಿರಿನ ವಾತಾವರಣ, ನೈಸರ್ಗಿಕ ಸೌಂದರ್ಯದಿಂದ ಕೂಡಿದ ಈ ಯೋಗ ತಾಣವು ಯೋಗ ಕಲಿಯಲು ಬಯಸುವವರು ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿ ಅನೇಕ ಆಶ್ರಮಗಳು, ಯೋಗ ಹಾಗೂ ಧ್ಯಾನ ಕೇಂದ್ರಗಳಿದ್ದು, ವಿವಿಧ ಆಸನಗಳನ್ನು ಅಭ್ಯಾಸಿಸಬಹುದು.
ಪುಣೆ : ಯೋಗ ಕಲಿಯಲು ಬಯಸುವವರು ಮಹಾರಾಷ್ಟ್ರದ ಪುಣೆಗೆ ತೆರಳಬಹುದಾಗಿದೆ. ಇಲ್ಲಿನ ಅಯ್ಯಂಗಾರ್ ಸ್ಮಾರಕ ಯೋಗ ಸಂಸ್ಥೆಯೂ ನಿಖರತೆ ಆಧಾರಿತ ಯೋಗಕ್ಕಾಗಿ ಹೆಸರುವಾಸಿಯಾಗಿದೆ. ಯೋಗ ಅಭ್ಯಾಸ ಮಾತ್ರವಲ್ಲದೇ, ಆಧ್ಯಾತ್ಮಿಕ ವಿಹಾರಕ್ಕಾಗಿ ಸಮೀಪದ ಗಿರಿಧಾಮಗಳಿಗೂ ಭೇಟಿ ನೀಡಬಹುದು.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Fri, 20 June 25