ನವದೆಹಲಿ, ನವೆಂಬರ್ 2: ಭಾರತದ ಕೆಲ ಮುಖಂಡರ ಐಫೋನ್ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಗಳಾಗುತ್ತಿರಬಹುದು ಎಂಬ ಅಲರ್ಟ್ ಮೆಸೇಜ್ ಬಂದ ಪ್ರಕರಣದಲ್ಲಿ ಸರ್ಕಾರದಿಂದ ತನಿಖೆ ಆರಂಭಗೊಂಡಿದೆ. ದೇಶದ ಸೈಬರ್ ಭದ್ರತೆಗೆ ಅಪಾಯ ಎದುರಾಗುವ ಘಟನೆಗಳಿಗೆ ಸ್ಪಂದಿಸಲೆಂದು ಇರುವ ಕಂಪ್ಯೂಟರ್ ತುರ್ತು ಸ್ಪಂದನಾ ಸಂಸ್ಥೆ ಸಿಇಆರ್ಟಿ-ಇನ್ (CERT-In) ಈ ಪ್ರಕರಣದ ತನಿಖೆ ಆರಂಭಿಸಿರುವುದು ವರದಿಯಾಗಿದೆ. ತನಿಖೆಯ ಭಾಗವಾಗಿ ಆ್ಯಪಲ್ ಸಂಸ್ಥೆಗೆ ಸಿಇಆರ್ಟಿಯಿಂದ ನೋಟೀಸ್ ಜಾರಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆಯ ಕಾರ್ಯದರ್ಶಿ ಎಸ್ ಕೃಷ್ಣನ್, ಈ ತನಿಖೆಗೆ ಆ್ಯಪಲ್ ಸಹಕಾರ ನೀಡಬಹುದು ಎಂದು ಭಾವಿಸಿರುವುದಾಗಿ ತಿಳಿಸಿದ್ದಾರೆ.
‘ಸಿಇಆರ್ಟಿ-ಇನ್ ತನ್ನ ತನಿಖೆ ಆರಂಭಿಸಿದೆ. ಅವರು (ಆ್ಯಪಲ್) ಈ ತನಿಖೆಗೆ ಸಹಕಾರ ನೀಡಬಹುದು,’ ಎಂದು ಎಸ್ ಕೃಷ್ಣನ್ ಹೇಳಿದ್ದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ನಿನ್ನೆ ಮತ್ತು ಮೊನ್ನೆಯೂ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಪ್ರಕರಣದ ತನಿಖೆ ನಡೆಯುವುದಾಗಿ ಹೇಳಿದ್ದರು. ಆ್ಯಪಲ್‌ನ ಐಫೋನ್ಗಳಿಗೆ ಕಳುಹಿಸಲಾಗಿರುವ ಅಲರ್ಟ್ ನೋಟಿಫಿಕೇಶನ್ನ ಮೂಲದ ಬಗ್ಗೆ ತನಿಖೆ ನಡೆಸುವುದಾಗಿ ಸಚಿವರು ಹೇಳಿದ್ದರು. ಅಲರ್ಟ್ ನೋಟಿಫಿಕೇಶನ್ನಲ್ಲಿ ಸರ್ಕಾರಿ ಪ್ರಾಯೋಜಿತ ದಾಳಿ ಎಂಬ ಪದಬಳಕೆ ಬಗ್ಗೆ ಸಚಿವರು ತಗಾದೆ ವ್ಯಕ್ತಪಡಿಸಿದ್ದಾರೆ. ಯಾವ ಆಧಾರದ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿ ಎಂದು ನಿರ್ಧರಿಸಲಾಗಿದೆ ಎಂದು ಅವರು ಆ್ಯಪಲ್ ಅನ್ನು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಚುನಾವಣಾ ಬಾಂಡ್ಗಳ ಮೂಲಕ ಯಾವ ಯಾವ ಪಕ್ಷಗಳಲ್ಲಿ ಎಷ್ಟು ಹಣ ಸಂದಾಯವಾಗಿದೆ? ಇಲ್ಲಿದೆ ಮಾಹಿತಿ
ಕುತೂಹಲವೆಂದರೆ, ಆ್ಯಪಲ್‌ನ ವಿವಿಧ ಉತ್ಪನ್ನಗಳ ಕೆಲ ಹಳೆಯ ಆವೃತ್ತಿಯ ತಂತ್ರಾಂಶಗಳಲ್ಲಿ ಭದ್ರತಾ ಲೋಪ ಇರುವ ಬಗ್ಗೆ ಕೆಲ ದಿನಗಳ ಹಿಂದೆಯೇ ಸಿಇಆರ್ಟಿ ಸಂಸ್ಥೆ ಬೆಳಕು ಚೆಲ್ಲಿತ್ತು. ಈ ನಿಟ್ಟಿನಲ್ಲಿ ಅಡ್ವೈಸರಿ ಬಿಡುಗಡೆ ಮಾಡಿತ್ತು. ಈ ಭದ್ರತಾ ಲೋಪದ ಬಗ್ಗೆ ಆ್ಯಪಲ್ ಸಂಸ್ಥೆಯ ಗಮನಕ್ಕೂ ತರಲಾಗಿತ್ತು.
ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮಹುವಾ ಮೊಯಿತ್ರಾ, ಪ್ರಿಯಾಂಕಾ ಚತುರ್ವೇದಿ ಮೊದಲಾದ ನಾಯಕರ ಐಫೋನ್ಗಳಲ್ಲಿ ಅಲರ್ಟ್ ಮೆಸೇಜ್ ಬಂದಿದ್ದವು. ಸರ್ಕಾರಿ ಪ್ರಾಯೋಜಿತ ದಾಳಿಕೋರರು ಈ ಐಫೋನ್ ಅನ್ನು ಹ್ಯಾಕ್ ಮಾಡಲು ಯತ್ನಿಸುತ್ತಿವೆ ಎಂಬುದು ಆ ಅಲರ್ಟ್ ಮೆಸೇಜ್ನಲ್ಲಿರುವ ಸಾರಾಂಶ. ಈ ಸಂದೇಶದ ಸ್ಕ್ರೀನ್ಶಾಟ್ ಅನ್ನು ಮಹುವಾ ಮೊಯಿತ್ರಾ ಮೊದಲಾದವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ಕೂಡ ನಡೆಸಿ ಸರ್ಕಾರವನ್ನು ಝಾಡಿಸಿದ್ದರು.
ಈ ಘಟನೆಗಳು ನಡೆದ ಬೆನ್ನಲ್ಲೇ ಆ್ಯಪಲ್ ಸಂಸ್ಥೆ ಹೇಳಿಕೆ ನೀಡಿ, ಐಫೋನ್ಗೆ ಬಂದ ಥ್ರೆಟ್ ನೋಟಿಫಿಕೇಶನ್ ಅನ್ನು ಸರ್ಕಾರಿ ಪ್ರಾಯೋಜಿತ ದಾಳಿಕೋರರಿಗೆ ನಿರ್ದಿಷ್ಟಪಡಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಇದನ್ನೂ ಓದಿ: ಆ್ಯಪಲ್‌ನ ‘ಹ್ಯಾಕಿಂಗ್’ ಎಚ್ಚರಿಕೆ ಪ್ರಕರಣ: ಲೋಕಸಭೆಯ ಸಮಿತಿ ತನಿಖೆಯ ಬೇಡಿಕೆಯನ್ನು ತಿರಸ್ಕರಿಸಿದ ಬಿಜೆಪಿ ಸಂಸದ
ಯಾವುದೇ ತಪ್ಪು ಅಂದಾಜಿನಲ್ಲಿ ಥ್ರೆಟ್ ಅಲರ್ಟ್ ಬಂದಿರಬಹುದು. ಈ ರೀತಿ 150 ದೇಶಗಳ ಐಫೋನ್ ಬಳಕೆದಾರರಿಗೆ ಮೆಸೇಜ್ ಹೋಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಲರ್ಟ್ ಮೆಸೇಜ್ನಲ್ಲಿ ಸರ್ಕಾರಿ ಪ್ರಾಯೋಜಿತ ದಾಳಿ ಎಂದು ನಮೂದು ಮಾಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಂತಿದೆ. ಇದೇ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಆ್ಯಪಲ್ ಸಂಸ್ಥೆ ತಪ್ಪಾಗಿ ಈ ಮೆಸೇಜ್ಗಳನ್ನು ಕಳುಹಿಸಿದ್ದರೆ ಸರ್ಕಾರದಿಂದ ಗಂಭೀರ ಕ್ರಮ ಎದುರಿಸಬೇಕಾದೀತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ