ಲಖನೌ: ದೇಶದ ಪ್ರತಿ ಸಮುದಾಯವೂ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆಯುತ್ತಿದೆ. ಅಭಿವೃದ್ಧಿಯ ದಿಸೆಯಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಶತಮಾನೋತ್ಸವದಲ್ಲಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ ಅವರು, ದೇಶದ ಯಾವುದೇ ಸಮುದಾಯ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ಎಲ್ಲರ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡುತ್ತಿದೆ. ಎಲ್ಲರೂ ಒಟ್ಟಾಗಿ ಅಭಿವೃದ್ಧಿಯ ದಾರಿಯಲ್ಲಿ ವೇಗವಾಗಿ ನಡೆಯುತ್ತಿದ್ದೇವೆ ಎಂದು ತಿಳಿಸಿದರು.
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಭಾರತದ ಹೆಸರನ್ನು ವಿದೇಶಗಳಲ್ಲಿ ಹೆಮ್ಮೆ ಪಡುವಂತೆ ಮಾಡಿದೆ. ಇಲ್ಲಿ ಅಧ್ಯಯನ ಕೈಗೊಂಡ ವಿದ್ಯಾರ್ಥಿಗಳು ವಿದೇಶಗಳಲ್ಲಿ ಹೆಮ್ಮೆಯಿಂದ ಅಲಿಗಢ ವಿವಿ ಹೆಸರು ಹೇಳುವುದನ್ನು ಕೇಳಿದ್ದೇನೆ. ಅಲಿಗಢ ವಿವಿ ಮಿನಿ ಭಾರತವಿದ್ದಂತೆ, ದೇಶದ ವೈವಿಧ್ಯತೆಯನ್ನು ಅಲಿಗಢ ವಿವಿ ಕಾಪಾಡಿಕೊಂಡಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕೈಗೊಂಡ ಮಹತ್ವದ ಕ್ರಮಗಳಿಂದ ಶಾಲೆ ತೊರೆಯುವ ಮುಸ್ಲಿಂ ಬಾಲಕಿಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸರ್ಕಾರ, ವಿಶ್ವವಿದ್ಯಾಲಯಗಳು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ. ತ್ರಿವಳಿ ತಲಾಕ್ನಂತಹ ಪದ್ಧತಿಗಳನ್ನು ಮಹಿಳೆಯರು ಶಿಕ್ಷಣವೇ ಅಂತ್ಯಗೊಳಿಸಲಿದೆ. ಅಲ್ಲದೇ ಆರ್ಥಿಕ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಡಲಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಸಾಮಾಜಿಕ ಬದಲಾವಣೆಗೆ ಕಾರಣವಾಗಲಿದೆ. ಇದು ದೇಶದ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಅವರು ವಿವರಿಸಿದರು.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್, ಅಲಿಗಢ ವಿವಿಯ ಕುಲಪತಿ ಸೈದ್ನಾ ಮುಫಾದ್ದಲ್ ಸೈಫುದ್ದಿನ್, ಉಪ ಕುಲಪತಿ ಪ್ರೊ. ತಾರಿಕ್ ಮನ್ಸೂರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಲಾಯಿತು.