ಎರಡನೇ ಅಲೆಯಲ್ಲಿ ಹೆಚ್ಚು ಯುವಕರು ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂಬ ಸಂಗತಿ ನಿಜವೇ? ಸರ್ಕಾರದ ಅಂಕಿ-ಅಂಶ ಹೇಳೋದೇನು?

|

Updated on: May 08, 2021 | 1:06 PM

Corona Second Wave: ಮೊದಲ ಅಲೆಯ ವೇಳೆಯಲ್ಲಿ ಒಟ್ಟಾರೆ ಸೋಂಕಿತರಲ್ಲಿ ಸುಮಾರು ಶೇ.31 ಮಂದಿ 30 ವರ್ಷಕ್ಕೂ ಕಡಿಮೆ ವಯಸ್ಸಿನವರಿದ್ದರು. ಆ ಪ್ರಮಾಣವೀಗ ಶೇ.32ಕ್ಕೆ ತಲುಪಿದೆ ಎಂಬುದನ್ನು ಬಿಟ್ಟರೆ ಭಾರೀ ವ್ಯತ್ಯಾಸವೇನೂ ಆಗಿಲ್ಲ. ಅಂತೆಯೇ, ಕಳೆದ ಬಾರಿ ಸೋಂಕಿತರಲ್ಲಿ 30ರಿಂದ 45 ವರ್ಷ ವಯಸ್ಸಿನವರು ಶೇ.21ರಷ್ಟಿದ್ದು ಆ ಪ್ರಮಾಣ ಈ ಬಾರಿ ಶೇ.19ಕ್ಕೆ ಇಳಿಕೆಯಾಗಿದೆ.

ಎರಡನೇ ಅಲೆಯಲ್ಲಿ ಹೆಚ್ಚು ಯುವಕರು ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂಬ ಸಂಗತಿ ನಿಜವೇ? ಸರ್ಕಾರದ ಅಂಕಿ-ಅಂಶ ಹೇಳೋದೇನು?
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೊರೊನಾ ಎರಡನೇ ಅಲೆ ಭಾರತದ ಹಲವು ರಾಜ್ಯಗಳಲ್ಲಿ ಈಗಾಗಲೇ ತಲ್ಲಣ ಸೃಷ್ಟಿಸಿದೆ. ವೈದ್ಯಕೀಯ ವ್ಯವಸ್ಥೆಯನ್ನು ಅಕ್ಷರಶಃ ಅಲುಗಾಡಿಸಿರುವ ಕೊವಿಡ್ 19ನಿಂದಾಗಿ ಸಾವು ನೋವುಗಳು ಹೆಚ್ಚಾಗುತ್ತಿವೆ. ದೇಶದಲ್ಲೀಗ ವಿಶ್ವದ ಬೇರೆ ರಾಷ್ಟ್ರಗಳಿಗಿಂತಲೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿದ್ದು, ಲೆಕ್ಕಕ್ಕೆ ಸಿಕ್ಕಿದ್ದಕ್ಕಿಂತಲೂ ಅಧಿಕ ಪ್ರಕರಣಗಳು ಇರಬಹುದು ಎಂಬ ಅಂದಾಜಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವುದೂ ಕಷ್ಟ, ಮೃತಪಟ್ಟರೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸುವುದೂ ಕಷ್ಟ ಎಂಬ ದುಸ್ಥಿತಿಯನ್ನು ಭಾರತೀಯರು ಎದುರಿಸುತ್ತಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ವಾಸ್ತವ ಸಂಗತಿಯ ಜತೆಗೆ ಒಂದಷ್ಟು ಊಹಾಪೋಹಗಳೂ ಭಾರತದಲ್ಲಿ ಹರಿದಾಡುತ್ತಿದ್ದು, ಎಷ್ಟೋ ವಿಚಾರಗಳು ಸತ್ಯಕ್ಕೆ ದೂರವಾಗಿದ್ದರೂ ಜನ ಅದನ್ನೇ ನಂಬುವಂತಾಗಿದೆ.

ಏಪ್ರಿಲ್ 15ರಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಯುವಕರು ಜಾಗ್ರತೆಯಿಂದ ಇರಬೇಕೆಂದು ಟ್ವೀಟ್ ಮೂಲಕ ಎಚ್ಚರಿಸಿದ್ದರು. ಅವರಷ್ಟೇ ಅಲ್ಲದೇ ಹಲವರು ಕೊರೊನಾ ಎರಡನೇ ಅಲೆ ಯುವಕರನ್ನೇ ಹೆಚ್ಚು ಕಾಡುತ್ತಿದೆ. ಯುವಕರೇ ಈ ಬಾರಿ ಹೆಚ್ಚು ಸೋಂಕಿಗೆ ಒಳಗಾಗಿದ್ದು ಎಂದು ಎಚ್ಚರಿಸಿದ್ದರು. ಆದರೆ ಇದೀಗ ಭಾರತ ಸರ್ಕಾರ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳನ್ನು ಗಮನಿಸಿದರೆ ಎರಡನೇ ಅಲೆಯಿಂದ ಆರೋಗ್ಯದ ವಿಚಾರದಲ್ಲಿ ಯುವ ಜನತೆ ಅತಿಹೆಚ್ಚು ತೊಂದರೆಗೀಡಾಗುತ್ತಿದ್ದಾರೆ ಎಂಬ ಮಾತಿಗೆ ಬಲ ನೀಡುವಂತಹ ಪುರಾವೆಗಳೇನೂ ಲಭಿಸಿಲ್ಲ.

ಮೊದಲ ಅಲೆಯ ವೇಳೆಯಲ್ಲಿ ಒಟ್ಟಾರೆ ಸೋಂಕಿತರಲ್ಲಿ ಸುಮಾರು ಶೇ.31 ಮಂದಿ 30 ವರ್ಷಕ್ಕೂ ಕಡಿಮೆ ವಯಸ್ಸಿನವರಿದ್ದರು. ಆ ಪ್ರಮಾಣವೀಗ ಶೇ.32ಕ್ಕೆ ತಲುಪಿದೆ ಎಂಬುದನ್ನು ಬಿಟ್ಟರೆ ಭಾರೀ ವ್ಯತ್ಯಾಸವೇನೂ ಆಗಿಲ್ಲ. ಅಂತೆಯೇ, ಕಳೆದ ಬಾರಿ ಸೋಂಕಿತರಲ್ಲಿ 30ರಿಂದ 45 ವರ್ಷ ವಯಸ್ಸಿನವರು ಶೇ.21ರಷ್ಟಿದ್ದು ಆ ಪ್ರಮಾಣ ಈ ಬಾರಿ ಶೇ.19ಕ್ಕೆ ಇಳಿಕೆಯಾಗಿದೆ. ಇತ್ತ ಮರಣ ಪ್ರಮಾಣದಲ್ಲೂ ಇಂತಹದ್ದೇ ಸಾಮ್ಯತೆ ಕಾಣಸಿಕ್ಕಿದ್ದು, ಕಳೆದ ವರ್ಷ ಸೋಂಕಿನಿಂದ ಮೃತಪಟ್ಟವರಲ್ಲಿ ಶೇ.20ರಷ್ಟು ಜನ 50 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಿದ್ದು, ಈ ಬಾರಿ ಸದರಿ ಪ್ರಮಾಣವು ಶೇ.19ರಷ್ಟಿದೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳಿವೆ.

ಈ ಬಗ್ಗೆ ಮಾತನಾಡಿರುವ ನೀತಿ ಆಯೋಗದ ಸದಸ್ಯ ಹಾಗೂ ಕೊವಿಡ್ ಟಾಸ್ಕ್ ಫೋರ್ಸ್​ ಮುಖ್ಯಸ್ಥ ಡಾ.ವಿ.ಕೆ.ಪೌಲ್, ಯುವ ಸಮುದಾಯದಲ್ಲಿ ಎರಡನೇ ಅಲೆಯ ವೇಳೆ ಸೋಂಕು ಹೆಚ್ಚುತ್ತಿದೆ ಎನ್ನುವ ಬಗ್ಗೆ ಆತಂಕ ಬೇಡ. ಅಂತಹ ಯಾವುದೇ ಬೆಳವಣಿಗೆಗಳು ಆಗುತ್ತಿಲ್ಲ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಮಕ್ಕಳಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾತನಾಡಿರುವ ದೆಹಲಿಯ ಮಧುಕರ್ ರೈನ್​ಬೋ ಮಕ್ಕಳ ಆಸ್ಪತ್ರೆ ವೈದ್ಯ ಡಾ.ಚಂದ್ರಶೇಖರ್ ಸಿಂಘ, ಈ ಬಾರಿ ಕೊರೊನಾ ಸೋಂಕಿಗೆ ಒಳಗಾದ ಮಕ್ಕಳ ಪ್ರಮಾಣ ಹೆಚ್ಚಿರುವುದು ಹೌದು. ಆದರೆ, ಒಟ್ಟಾರೆ ಪ್ರಕರಣಗಳ ಜತೆಗೆ ಸರಾಸರಿ ತೆಗೆದರೆ ಈ ಪ್ರಮಾಣ ಬಹುತೇಕ ಕಳೆದ ಬಾರಿಯಷ್ಟೇ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಕೊರೊನಾ ತಗುಲಿದರೆ ಪೋಷಕರು ಗಾಬರಿಪಡುವುದು ಬೇಕಿಲ್ಲ. ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಇರದಿದ್ದಲ್ಲಿ, ದೇಹದ ತೂಕ ಹೆಚ್ಚುವರಿ ಇಲ್ಲದಿದ್ದರೆ ಅವರು ಕೃತಕ ಉಸಿರಾಟದ ಅವಶ್ಯಕತೆ ಅಥವಾ ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲೇ ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:
Explainer: ಮಕ್ಕಳಿಗೆ ಸಮಸ್ಯೆ ತಂದೊಡ್ಡುವ ಕೊರೊನಾ 3ನೇ ಅಲೆ ಎದುರಿಸಲು ಸಿದ್ಧತೆ ಹೇಗಿರಬೇಕು? ತಜ್ಞರ ಅಭಿಪ್ರಾಯ ಇಲ್ಲಿದೆ