ಹಮಾಸ್ ದಾಳಿಯಲ್ಲಿ ಮೃತಪಟ್ಟಿದ್ದ ಕೇರಳದ ಮಹಿಳೆಯ ಕುಟುಂಬಕ್ಕೆ ಪರಿಹಾರ ಘೋಷಿಸಿದ ಇಸ್ರೇಲ್ ಸರ್ಕಾರ…
ರಾನ್ ಮಲ್ಕಾ ಅವರು ಕೇರಳದಲ್ಲಿರುವ ಸೌಮ್ಯಾ ಕುಟುಂಬದೊಂದಿಗೆ ಮಾತುಕತೆ ನಡೆಸಿದ್ದು, ಈ ವಾರದ ಕೊನೆಯಲ್ಲಿ ಆಕೆಯ ಮೃತದೇಹ ಇಸ್ರೇಲ್ನಿಂದ ಭಾರತಕ್ಕೆ ತಲುಪುವ ಭರವಸೆ ನೀಡಿದ್ದಾರೆ. 2008ರಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.
ದೆಹಲಿ: ಪ್ಯಾಲೆಸ್ಟೈನ್ನ ಉಗ್ರಸಂಘಟನೆ ಹಮಾಸ್, ಗಾಜಾದಿಂದ ಇಸ್ರೇಲ್ ಮೇಲೆ ನಡೆಸಿದ್ದ ರಾಕೆಟ್ ದಾಳಿಯಲ್ಲಿ ಮೃತಪಟ್ಟಿದ್ದ ಕೇರಳದ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಇಸ್ರೇಲ್ ಸರ್ಕಾರ ತಿಳಿಸಿದೆ. ಭಾರತದಲ್ಲಿರುವ ಇಸ್ರೇಲಿ ರಾಯಭಾರಿ ರಾನ್ ಮಲ್ಕಾ ಈ ವಿಷಯವನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಕೇರಳದ 31 ವರ್ಷದ ಮಹಿಳೆ ಸೌಮ್ಯಾ ಸಂತೋಷ್ ಅವರ ಸಾವಿಗೆ ವೈಯಕ್ತಿಕವಾಗಿ ಮತ್ತು ಇಡೀ ಇಸ್ರೇಲ್ ಪರವಾಗಿ ಸಂತಾಪ ಸೂಚಿಸುವುದಾಗಿ ಹೇಳಿದ್ದಾರೆ. ಸೌಮ್ಯಾ ಅವರ 9 ವರ್ಷದ ಮಗನ ಬಗ್ಗೆ ಯೋಚಿಸಿದರೆ ತುಂಬ ನೋವಾಗುತ್ತದೆ. ಆ ಮಗು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಮ್ಮನನ್ನು ಕಳೆದುಕೊಳ್ಳುವಂತಾಯಿತು ಎಂದು ಟ್ವೀಟ್ ಮಾಡಿದ್ದಾರೆ.
ರಾನ್ ಮಲ್ಕಾ ಅವರು ಕೇರಳದಲ್ಲಿರುವ ಸೌಮ್ಯಾ ಕುಟುಂಬದೊಂದಿಗೆ ಮಾತುಕತೆ ನಡೆಸಿದ್ದು, ಈ ವಾರದ ಕೊನೆಯಲ್ಲಿ ಆಕೆಯ ಮೃತದೇಹ ಇಸ್ರೇಲ್ನಿಂದ ಭಾರತಕ್ಕೆ ತಲುಪುವ ಭರವಸೆ ನೀಡಿದ್ದಾರೆ. 2008ರಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭ ನೆನಪಿಗೆ ಬರುತ್ತಿದೆ. ಆ ಸಮಯದಲ್ಲಿ ಅನೇಕ ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡಿದ್ದರು, ಅದೆಷ್ಟೋ ಜನರು ತಮ್ಮ ಆಪ್ತರನ್ನು ಕಳೆದುಕೊಂಡಿದ್ದರು. ಇದೀಗ ಸೌಮ್ಯಾ ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕುಟುಂಬಕ್ಕೆ ಕರುಣಿಸಲಿ ಎಂದು ರಾನ್ ಮಲ್ಕಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಗಾಜಾದಿಂದ ಇಸ್ರೇಲ್ ಮೇಲೆ ಹಮಾಸ್ ಉಗ್ರರು ರಾಕೆಟ್ ದಾಳಿ ನಡೆಸಿದ್ದರು. ಈ ವೇಳೆ ಇಸ್ರೇಲ್ನ ಅಶ್ಕೆಲೋನ್ನಲ್ಲಿರುವ ಮನೆಯಲ್ಲಿ ಕುಳಿತು ಕೇರಳದಲ್ಲಿರುವ ಪತಿಯೊಂದಿಗೆ ವಿಡಿಯೋ ಕಾಲ್ ಮೂಲಕ ಸೌಮ್ಯಾ ಮಾತನಾಡುತ್ತಿದ್ದಾಗ ಈ ರಾಕೆಟ್ ಬಂದು ಬಡಿದಿತ್ತು. ಅಲ್ಲಿಗೆ ಆಕೆಯ ಜೀವವೂ ಹೋಗಿತ್ತು. ಪತಿ ಹಾಗೂ ಮಗ ಇಡುಕ್ಕಿಯ ಕೀರಿತೋಡು ಎಂಬಲ್ಲಿ ವಾಸವಾಗಿದ್ದಾರೆ. ಇದೀಗ ಸೌಮ್ಯಾ ಮೃತದೇಹವನ್ನು ಅಲ್ಲಿಯೇ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮನೆಯ ಪಕ್ಕದ ಸಭಾಭವನವನ್ನೇ ಕೊವಿಡ್ ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ
ಆಗಸ್ಟ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ 200 ಕೋಟಿ ಡೋಸ್ ಕೊವಿಡ್ ಲಸಿಕೆ ದೊರೆಯುವ ಸಾಧ್ಯತೆ
Published On - 11:03 pm, Thu, 13 May 21