ಮತ್ತೆ ಮಂಗಳಯಾನಕ್ಕೆ ಇಸ್ರೋ ಪ್ಲಾನ್; ಜಪಾನ್​ನೊಂದಿಗೆ ಚಂದ್ರ ಗ್ರಹದಲ್ಲಿ ಅನ್ವೇಷಣೆಗೆ ಚಿಂತನೆ

| Updated By: ಸುಷ್ಮಾ ಚಕ್ರೆ

Updated on: Nov 07, 2022 | 12:15 PM

ಜಪಾನ್ ದೇಶದ ಸಹಯೋಗದೊಂದಿಗೆ ಚಂದ್ರನ ಕಪ್ಪು ಭಾಗವನ್ನು ಅನ್ವೇಷಿಸಲು ಇಸ್ರೋ (ISRO) ಯೋಚಿಸಿದೆ. ಇಸ್ರೋ ಮಂಗಳ ಗ್ರಹಕ್ಕೆ ಪುನಃ ಉಪಗ್ರಹವನ್ನು ಕಳುಹಿಸಲು ಚಿಂತನೆ ನಡೆಸಿದೆ

ಮತ್ತೆ ಮಂಗಳಯಾನಕ್ಕೆ ಇಸ್ರೋ ಪ್ಲಾನ್; ಜಪಾನ್​ನೊಂದಿಗೆ ಚಂದ್ರ ಗ್ರಹದಲ್ಲಿ ಅನ್ವೇಷಣೆಗೆ ಚಿಂತನೆ
ಚಂದ್ರ
Follow us on

ನವದೆಹಲಿ: ಚಂದ್ರ ಮತ್ತು ಮಂಗಳ ಗ್ರಹಕ್ಕೆ ತೆರಳಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಶುಕ್ರ ಗ್ರಹದ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಜಪಾನ್ ದೇಶದ ಸಹಯೋಗದೊಂದಿಗೆ ಚಂದ್ರನ ಕಪ್ಪು ಭಾಗವನ್ನು ಅನ್ವೇಷಿಸಲು ಇಸ್ರೋ (ISRO) ಯೋಚಿಸಿದೆ. ಆಕಾಶ್ ತತ್ವ ಸಮ್ಮೇಳನದಲ್ಲಿ ಇಸ್ರೋದ ಭವಿಷ್ಯದ ಕಾರ್ಯಗಳ ಕುರಿತು ಪ್ರಸ್ತುತಿ ಮಾಡಿದ ಅಹಮದಾಬಾದ್ ಮೂಲದ ಭೌತಿಕ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕ ಅನಿಲ್ ಭಾರದ್ವಾಜ್, ಇಸ್ರೋ ಮಂಗಳ ಗ್ರಹಕ್ಕೆ ಪುನಃ ಉಪಗ್ರಹವನ್ನು ಕಳುಹಿಸಲು ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.

ಚಂದ್ರನಲ್ಲಿರುವ ಶಾಶ್ವತ ನೆರಳಿನಂತಹ ಪ್ರದೇಶವನ್ನು ಅನ್ವೇಷಣೆ ಮಾಡಲು ಲೂನಾರ್ ರೋವರ್ ಅನ್ನು ಕಳುಹಿಸಲು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ (JAXA)ಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅನಿಲ್ ಭಾರದ್ವಾಜ್ ಹೇಳಿದ್ದಾರೆ. ಸದ್ಯದ ಯೋಜನೆಗಳ ಪ್ರಕಾರ, ಇಸ್ರೋ ನಿರ್ಮಿಸಿದ ಚಂದ್ರನ ಲ್ಯಾಂಡರ್ ಮತ್ತು ರೋವರ್ ಅನ್ನು ಜಪಾನಿನ ರಾಕೆಟ್ ಮೂಲಕ ಚಂದ್ರನ ದಕ್ಷಿಣ ಧ್ರುವದ ಬಳಿ ಯೋಜಿತ ಲ್ಯಾಂಡಿಂಗ್ ಮೂಲಕ ಕಕ್ಷೆಗೆ ಸೇರಿಸಲಾಗುತ್ತದೆ.

ಇದನ್ನೂ ಓದಿ: Chandrayaan-3: 2023ರ ಜೂನ್​ನಲ್ಲಿ ಚಂದ್ರಯಾನ-3 ಉಡಾವಣೆ: ಇಸ್ರೋ

ಆ ರೋವರ್ ನಂತರ ಸೂರ್ಯನ ಬೆಳಕು ಬೀಳದ ಚಂದ್ರನ ಶಾಶ್ವತ ನೆರಳಿನಂತಹ ಪ್ರದೇಶಕ್ಕೆ ಪ್ರಯಾಣಿಸುತ್ತದೆ. ಆದಿತ್ಯ L-1 ಒಂದು ವಿಶಿಷ್ಟವಾದ ಮಿಷನ್ ಆಗಿದ್ದು, ಇದರಲ್ಲಿ ಪೇಲೋಡ್ ಅನ್ನು ಹೊತ್ತ 400-ಕೆಜಿ ವರ್ಗದ ಉಪಗ್ರಹವನ್ನು ಸೂರ್ಯನ ಸುತ್ತ ಕಕ್ಷೆಯಲ್ಲಿ ಇರಿಸಲಾಗುವುದು. ಮುಂದಿನ ವರ್ಷದ ಆರಂಭದಲ್ಲಿ ಆದಿತ್ಯ ಎಲ್-1 ಮತ್ತು ಚಂದ್ರಯಾನ-3 ಮಿಷನ್‌ಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅನಿಲ್ ಭಾರದ್ವಾಜ್ ಮಾಹಿತಿ ನೀಡಿದ್ದಾರೆ.

ಇದರ ಜೊತೆಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2023ರ ಜೂನ್‌ನಲ್ಲಿ ಚಂದ್ರಯಾನ-3 ಉಡಾವಣೆ ಮಾಡಲು ಯೋಜನೆ ರೂಪಿಸಿದೆ. ಅಬಾರ್ಟ್ ಮಿಷನ್ ಯಶಸ್ವಿಯಾಗಿ ನಡೆಸಿದ ಬಳಿಕ 2024 ರ ಕೊನೆಯ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಕಕ್ಷೆಗೆ ಹಾರಿಸಲು ಇಸ್ರೋ ಯೋಜಿಸಿದೆ. 2019ರಲ್ಲಿ ಕೈಗೊಳ್ಳಲಾಗಿದ್ದ ಚಂದ್ರಯಾನ -2 ಕಾರ್ಯಾಚರಣೆಯಲ್ಲಿ ರೋವರ್ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಕೊನೇ ಕ್ಷಣದಲ್ಲಿ ವಿಫಲವಾಗಿತ್ತು. ಚಂದ್ರಯಾನ 3 ಇದೀಗ ಸಜ್ಜಾಗಿದೆ. ಇದು ಭವಿಷ್ಯದ ಅಂತರ-ಗ್ರಹ ಪರಿಶೋಧನೆಗಳಿಗೆ ನಿರ್ಣಾಯಕವಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನ ಯಾನಕ್ಕಾಗಿ ಅಬಾರ್ಟ್ ಮಿಷನ್ ನ ಮೊದಲ ಪರೀಕ್ಷಾರ್ಥ ಹಾರಾಟ ಮಾಡಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ