Amarnath shrine cloudburst ಅಮರನಾಥ ಗುಹೆ ಬಳಿ ಮೇಘ ಸ್ಫೋಟ; ಹಠಾತ್​​ ಪ್ರವಾಹದಲ್ಲಿ 15 ಸಾವು, ಕರ್ನಾಟಕದವರಿಗಾಗಿ ಹೆಲ್ಪ್​​ ಲೈನ್​

| Updated By: ಸಾಧು ಶ್ರೀನಾಥ್​

Updated on: Jul 08, 2022 | 10:38 PM

ಸಂಜೆ 5.30ರ ವೇಳೆ  ಮೇಘ ಸ್ಫೋಟವುಂಟಾಗಿದ್ದು ಕಮ್ಯುನಿಟಿ ಕಿಚನ್ ಮತ್ತು ಟೆಂಟ್ ಗಳಿಗೆ ಹಾನಿಯಾಗಿವೆ.  ಗಾಯಗೊಂಡವರನ್ನು ಚಿಕಿತ್ಸೆಗಾಗಿ ಏರ್ ಲಿಫ್ಟ್ ಮಾಡಲಾಗಿದೆ.

Amarnath shrine cloudburst ಅಮರನಾಥ ಗುಹೆ ಬಳಿ ಮೇಘ ಸ್ಫೋಟ; ಹಠಾತ್​​ ಪ್ರವಾಹದಲ್ಲಿ 15 ಸಾವು, ಕರ್ನಾಟಕದವರಿಗಾಗಿ ಹೆಲ್ಪ್​​ ಲೈನ್​
ಅಮರನಾಥದಲ್ಲಿ ಮೇಘ ಸ್ಫೋಟ
Follow us on

ಜಮ್ಮು ಕಾಶ್ಮೀರದ (Jammu and Kashmir) ಅಮರನಾಥ ಕ್ಷೇತ್ರ (Amarnath shrine) ಬಳಿ ಶುಕ್ರವಾರ ಸಂಜೆ ಮೇಘ ಸ್ಫೋಟದಿಂದಾಗಿ (cloudburst) ಹಠಾತ್ ಪ್ರವಾಹವುಂಟಾಗಿದ್ದು 15 ಮಂದಿ ಸಾವಿಗೀಡಾಗಿದ್ದು, 40 ಮಂದಿ ನಾಪತ್ತೆಯಾಗಿದ್ದಾರೆ. ಸಂಜೆ 5.30ರ ವೇಳೆ  ಮೇಘ ಸ್ಫೋಟವುಂಟಾಗಿದ್ದು ಕಮ್ಯುನಿಟಿ ಕಿಚನ್ ಮತ್ತು ಟೆಂಟ್​ಗಳಿಗೆ ಹಾನಿಯಾಗಿವೆ.  ಗಾಯಗೊಂಡವರನ್ನು ಚಿಕಿತ್ಸೆಗಾಗಿ ಏರ್​​ಲಿಫ್ಟ್ ಮಾಡಲಾಗಿದೆ. ಕೆಟ್ಟ ಹವಾಮಾನದಿಂದಾಗಿ  ಅಮರನಾಥ ಯಾತ್ರೆಯನ್ನು ಇದೀಗ ರದ್ದು ಮಾಡಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. ಕೊವಿಡ್​​ನಿಂದಾಗಿ ಎರಡು ವರ್ಷದ ಅಂತರದ ನಂತರ ಈ ವರ್ಷ ಜೂನ್ 30ರಂದು ಅಮರನಾಥ ತೀರ್ಥ ಯಾತ್ರೆ ಆರಂಭವಾಗಿತ್ತು. ಅಲ್ಲಿಂದ 72,000ಕ್ಕಿಂತಲೂ ಹೆಚ್ಚು ಯಾತ್ರಾರ್ಥಿಗಳು ದೇವರ ದರ್ಶನ ಪಡೆದಿದ್ದಾರೆ. ಸಾಮಾನ್ಯವಾಗಿ ರಕ್ಷಾ ಬಂಧನದ ದಿನ ಅಂದರೆ ಆಗಸ್ಟ್ 11ರಂದು ತೀರ್ಥಯಾತ್ರೆ ಮುಕ್ತಾಯವಾಗಬೇಕಿತ್ತು. ಜಮ್ಮು ಕಾಶ್ಮೀರದ ಆಡಳಿತದೊಂದಿಗೆ ತಾನು ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಕೇಂದ್ರ ಸಚಿವ ಡಾ ಜಿತೆಂದ್ರ ಸಿಂಗ್ ಹೇಳಿದ್ದಾರೆ. ಎಸ್​​ಡಿಆರ್​​ಎಫ್ ಮತ್ತು ಎನ್​​ಡಿಆರ್​​ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದು ಅಗತ್ಯ ಸಹಾಯಗಳನ್ನು ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.

ಶ್ರೀ ಅಮರನಾಥ ಗುಹೆಯ ಬೇಸ್​ ಕ್ಯಾಂಪ್​ ಬಳಿ ಮೇಘಸ್ಫೋಟದ ಕುರಿತು ಪತ್ರಿಕಾ ಟಿಪ್ಪಣಿ:

ಇಂದು ಸಾಯಂಕಾಲ 5.30 ರ ಸುಮಾರಿಗೆ ಶ್ರೀ ಅಮರನಾಥ ಗುಹೆಯ ಬಳಿ ಮೇಘಸ್ಫೋಟ ಸಂಭವಿಸಿದ್ದು ಹಠಾತ್ ಪ್ರವಾಹ ಉಂಟಾಗಿದೆ. ಇದರಿಂದ ಅಮರನಾಥ ಯಾತ್ರಾರ್ಥಿಗಳ ವಾಸಸ್ಥಳಗಳಿಗೆ ಹಾನಿಯಾಗಿದೆ. ಎನ್‌ಡಿಆರ್‌ಎಫ್, ಐಟಿಬಿಪಿ, ಭಾರತೀಯ ಸೇನೆ, ಸಿಆರ್‌ಪಿಎಫ್, ಬಿಎಸ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರಿಂದ ಜಂಟಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಮೇಘ ಸ್ಫೋಟ ಸಂತ್ರಸ್ತರಿಗಾಗಿ ಸಹಾಯ ಒದಗಿಸಲು ಜಮ್ಮು ಕಾಶ್ಮೀರ ಸರ್ಕಾರದಿಂದ ಪರಿಹಾರ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಶ್ರೀ ಅಮರನಾಥ ಗುಹೆಯ ಬಳಿ ಕರ್ನಾಟಕದಿಂದ ಯಾವುದೇ ವ್ಯಕ್ತಿ ಸಿಲುಕಿದ್ದರೆ ರಾಜ್ಯ ತುರ್ತು ನಿಯಂತ್ರಣ ಕೊಠಡಿಯನ್ನು ಈ ಕೆಳಗಿನ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು:
080 1070, 22340676, ಇಮೇಲ್: incomedmkar@gmail.com ಜಮ್ಮು ಕಾಶ್ಮೀರ ಸರ್ಕಾರದ ಮೂಲಕ ಸಹಾಯ ಹಸ್ತ ಚಾಚಲಾಗಿದೆ.
NDRF: 011-23438252, 011-23438253
Kashmir Divisional Helpline: 0194-2496240
Shrine Board Helpline: 0194-2313149

 


ಮೇಘ ಸ್ಫೋಟದಿಂದಾಗಿ ಭಾರೀ ನೀರು ಹರಿದಿದ್ದು ಅಮರನಾಥ ಗುಹೆಯ ಕೆಳಭಾಗ ಜಲಾವೃತವಾಗಿದೆ. ಐಟಿಬಿಪಿ ತಂಡಗಳು ಇತರ ರಕ್ಷಣಾ ಕಾರ್ಯಾಚರಣೆಯ ತಂಡಗೊಳೊಂದಿಗೆ ಕಾರ್ಯ ನಿರತವಾಗಿವೆ. ಗುಹೆ ಬಳಿ ಇದ್ದ ಲಂಗಾರ್ ಮತ್ತು ಟೆಂಟ್​​ಗಳು ಕೊಚ್ಚಿ ಹೋಗಿವೆ. ಎನ್​ಡಿಆರ್​​ಎಫ್ ಮತ್ತು ರಾಜ್ಯ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಗಾಯಗೊಂಡವರನ್ನು ಏರ್ ಲಿಫ್ಟ್ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.

ಸಂಜೆ 5.30 ವೇಳೆ ಭಾರೀ ಮಳೆಯಾಗುತ್ತಿದ್ದಂತೆ ದಿಢೀರನೆ ನೀರು ಧುಮ್ಮಿಕ್ಕಿ ಬಂತು. ಅಮರನಾಥ  ಗುಹೆಯ ಮೇಲ್ಭಾಗದಲ್ಲಿ ಮೇಘ ಸ್ಫೋಟ ಸಂಭವಿಸಿದೆ. ತಕ್ಷಣವೇ ಎಚ್ಚರಿಕೆ ಸಂದೇಶ ರವಾನೆ ಮಾಡಲಾಯಿತು. ಅಲ್ಲಿರುವ ಟೆಂಟ್​​ನಲ್ಲಿದ್ದ ಜನರನ್ನು  10-15 ನಿಮಿಷಗಳಲ್ಲಿ ಹೊರ ತರಲಾಗಿದೆ ಎಂದು ಐಟಿಬಿಪಿ ಪಿಆರ್​​ಒ ವಿವೇಕ್ ಕುಮಾರ್ ಪಾಂಡೆ ಹೇಳಿದ್ದಾರೆ. ಹಲವಾರು ಟೆಂಟ್​ಗಳು ಕೊಚ್ಚಿ ಹೋಗಿವೆ. ರಕ್ಷಣಾ ಪಡೆಗಳು ತಕ್ಷಣವೇ ಕಾರ್ಯ ನಿರತವಾಗಿವೆ. ಭಾರತೀಯ ಸೇನೆ ಮತ್ತು ಇತರ ರಕ್ಷಣಾ ತಂಡ ಜತೆಗೆ ನಾವು ಕೆಲಸ ಮಾಡುತ್ತಿದ್ದೇವೆ. ಕೊಚ್ಚಿ ಹೋದ ಕೆಲವರನ್ನು ನದಿಯಿಂದ ನಾವು ಪಾರು ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

Published On - 7:49 pm, Fri, 8 July 22