ಜಮ್ಮು ಕಾಶ್ಮೀರದ ಡಿಡಿಸಿ ಚುನಾವಣಾ ಫಲಿತಾಂಶ: ಕಾಶ್ಮೀರದಲ್ಲೂ ಖಾತೆ ತೆರೆದ ಬಿಜೆಪಿ
ಬಿಜೆಪಿ ಪಕ್ಷವು ಕಾಶ್ಮೀರದಲ್ಲೂ ಖಾತೆ ತೆರೆದಿದೆ. ಜಮ್ಮು ಪ್ರಾಂತ್ಯದ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಭಯೋತ್ಪಾದನೆಯಿಂದ ಕುಖ್ಯಾತಿ ಪಡೆದಿರುವ ಪುಲ್ವಾಮದ ಕಾಕಪೋರದಲ್ಲಿ ಬಿಜೆಪಿಯ ಮಹಿಳಾ ಅಭ್ಯರ್ಥಿ ಮಿನ್ನಾ ಲತೀಫ್ ಜಯಗಳಿಸಿದ್ದಾರೆ.
ನವದೆಹಲಿ: ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಈ ತಿಂಗಳು ಜಮ್ಮು ಕಾಶ್ಮೀರದ ಡಿಸ್ಟ್ರಿಕ್ ಡೆವಲಪ್ ಮೆಂಟ್ ಕೌನ್ಸಿಲ್‌ಗೆ ಚುನಾವಣೆ ನಡೆದಿತ್ತು. ಇದರ ಮತಎಣಿಕೆ ಬೆಳಿಗ್ಗೆಯಿಂದ ನಡೆಯುತ್ತಿದೆ. ಒಟ್ಟು 280 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಇವುಗಳ ಪೈಕಿ ಇದುವರೆಗೂ 268 ವಾರ್ಡ್ ಗಳ ಮತಎಣಿಕೆಯ ಮಾಹಿತಿ ಲಭ್ಯವಾಗಿದೆ. ಈ ಪೈಕಿ ಬಿಜೆಪಿ ಕೂಡ ಕಾಶ್ಮೀರದಲ್ಲಿ ಖಾತೆ ತೆರೆದಿದೆ.
ಜಮ್ಮು ಕಾಶ್ಮೀರದ ಫಾರೂಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಪರೆನ್ಸ್ ಹಾಗೂ ಮೆಹಬೂಬ್ ಮುಫ್ತಿ ನೇತೃತ್ವದ ಪಿಡಿಪಿ ಹಾಗೂ ಸಿಪಿಐ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಗುಪ್ಕರ್ ಮೈತ್ರಿಕೂಟದ ಹೆಸರಿನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಬಿಜೆಪಿ ಪಕ್ಷವು ಕಾಶ್ಮೀರದಲ್ಲಿ ಕಮಲವನ್ನು ಅರಳಿಸಲು ಹೋರಾಟ ನಡೆಸಿತ್ತು. ಕಾಂಗ್ರೆಸ್ ಪಕ್ಷವು ತನ್ನ ಆಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಿತ್ತು.
ಕಾಂಗ್ರೆಸ್ ತಾನು ಗುಪ್ಕರ್ ಮೈತ್ರಿಕೂಟದ ಭಾಗವಲ್ಲ ಎಂದು ಚುನಾವಣೆಗೂ ಮುನ್ನ ಘೋಷಿಸಿತ್ತು. ಗುಪ್ಕರ್ ಮೈತ್ರಿಕೂಟದ ನಾಯಕರು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮತ್ತೆ ನೀಡಬೇಕೆಂಬ ಬೇಡಿಕೆಯನ್ನು ಇಟ್ಟುಕೊಂಡು ಚುನಾವಣೆ ಎದುರಿಸಿದ್ದರು. ಹೀಗಾಗಿ ಕಾಂಗ್ರೆಸ್ ಗುಪ್ಕರ್ ಮೈತ್ರಿಕೂಟದ ಹೊರಗೆ ಉಳಿದು ಪ್ರತೇಕವಾಗಿ ಚುನಾವಣೆಗೆ ಸ್ಪರ್ಧೆ ಮಾಡಿತ್ತು. ಕಾಶ್ಮೀರ ಕಣಿವೆಯಲ್ಲಿ ಪ್ರತಿ ಚುನಾವಣೆಗಳಲ್ಲೂ ಪ್ರತೇಕತಾವಾದಿಗಳು ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡ್ತಾರೆ. ಇದರಿಂದ ಮತದಾನದ ಪ್ರಮಾಣ ಕಡಿಮೆಯಾಗ್ತಿದೆ . ಈ ಬಾರಿಯೂ ಮತದಾನದ ಪ್ರಮಾಣ ಕಡಿಮೆಯಾಗಿದ್ದರೂ , ಚುನಾವಣೆ ನಡೆದಿರುವುದು ವಿಶೇಷ.
ಬಿಜೆಪಿ ಪಕ್ಷವು ಕಾಶ್ಮೀರದಲ್ಲೂ ಖಾತೆ ತೆರೆದಿದೆ. ಜಮ್ಮು ಪ್ರಾಂತ್ಯದ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಭಯೋತ್ಪಾದನೆಯಿಂದ ಕುಖ್ಯಾತಿ ಪಡೆದಿರುವ ಪುಲ್ವಾಮದ ಕಾಕಪೋರದಲ್ಲಿ ಬಿಜೆಪಿಯ ಮಹಿಳಾ ಅಭ್ಯರ್ಥಿ ಮಿನ್ನಾ ಲತೀಫ್ ಜಯಗಳಿಸಿದ್ದಾರೆ. ಇನ್ನೂ ಶ್ರೀನಗರದ ಕನ್ನಮೋವ 2ನೇ ವಾರ್ಡ್ ನಲ್ಲಿ ಇಂಜಿನಿಯರ್ ಐಜಾಜ್ ಹುಸೇನ್ ಎನ್ನುವ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ. ಇದುವರೆಗೂ ಮೂವರು ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಗುಪ್ಕರ್ ಮೈತ್ರಿಕೂಟವು ಇದುವರೆಗೂ ಒಟ್ಟು 108 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಪೈಕಿ ಈಗಾಗಲೇ 47 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆ. ಇನ್ನೂಳಿದ 61 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಇದುವರೆಗೂ ಒಟ್ಟು 76 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಪೈಕಿ 3 ವಾರ್ಡ್ ನಲ್ಲಿ ಗೆಲುವು ಸಾಧಿಸಿದೆ. ಇನ್ನೂಳಿದ 73 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಕಾಂಗ್ರೆಸ್ ಪಕ್ಷವು 22 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದೆ. 7 ವಾರ್ಡ್ ಗಳಲ್ಲಿ ಈಗಾಗಲೇ ಕಾಂಗ್ರೆಸ್ ಜಯಗಳಿಸಿದ್ದು , 15 ವಾರ್ಡ್ ಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜಮ್ಮು ಕಾಶ್ಮೀರದ ಅಪ್ನಿ ಪಾರ್ಟಿಯು 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಪೈಕಿ 6 ವಾರ್ಡ್ ಗಳಲ್ಲಿ ಗೆಲವು ದಾಖಲಿಸಿದೆ. 4 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದೆ. ಪಕ್ಷೇತರ ಸೇರಿದಂತೆ ಇತರೆ ಅಭ್ಯರ್ಥಿಗಳು ಒಟ್ಟು 55 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇವುಗಳ ಪೈಕಿ 21 ವಾರ್ಡ್ ಗಳಲ್ಲಿ ಈಗಾಗಲೇ ಪಕ್ಷೇತರ ಸೇರಿದಂತೆ ಇತರೆ ಅಭ್ಯರ್ಥಿಗಳು ಜಯ ದಾಖಲಿದ್ದಾರೆ. 34 ವಾರ್ಡ್ ಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕಾಶ್ಮೀರದಲ್ಲಿ ಖಾತೆ ತೆರೆದ ಕಮಲ: 113 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಗುಪ್ಕಾರ್ ಮೈತ್ರಿಕೂಟ