ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಪರ ಒಲವು ಹೊಂದಿದ್ದ 700 ಶಂಕಿತ ವ್ಯಕ್ತಿಗಳು ಭದ್ರತಾ ಪಡೆಗಳ ವಶಕ್ಕೆ

| Updated By: guruganesh bhat

Updated on: Oct 10, 2021 | 10:27 PM

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೇರುವುದಕ್ಕೂ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ದಾಳಿಗಳು ನಡೆಯುವುದಕ್ಕೂ ಇರಬಹುದಾದ ಸಂಬಂಧಗಳನ್ನೂ ಭದ್ರತಾ ಪಡೆಗಳು ಪರಿಶೀಲಿಸುತ್ತಿವೆ.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಪರ ಒಲವು ಹೊಂದಿದ್ದ 700 ಶಂಕಿತ ವ್ಯಕ್ತಿಗಳು ಭದ್ರತಾ ಪಡೆಗಳ ವಶಕ್ಕೆ
ಸಾಂಕೇತಿಕ ಚಿತ್ರ
Follow us on

ಶ್ರೀನಗರ: ಇತ್ತೀಚಿಗಷ್ಟೇ ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಪಂಡಿತ, ಸಿಖ್ ಮತ್ತು ಮುಸ್ಲಿಂ ಸಮುದಾಯದವರೂ ಸೇರಿ 7 ನಾಗರಿಕರು ಭಯೋತ್ಪಾದಕರ ಗುಂಡಿಗೆ ಬಲಿಯಾದ ಬೆನ್ನಲ್ಲೇ ಉಗ್ರಗಾಮಿಗಳ ಪರ ಒಲವು ಹೊಂದಿದ್ದ 700 ಜನರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಅವರಲ್ಲಿ ಹಲವರು ಜಮಾತ್ ಎ ಇಸ್ಲಾಮ್ ಸಂಘಟನೆಗಾಗಿ ಭೂಗತರಾಗಿದ್ದುಕೊಂಡು ಕೆಲಸ ಮಾಡುತ್ತಿದ್ದರು ಎಂದು ಸಂಶಯಿಸಲಾಗಿದೆ. ಭವಿಷ್ಯದಲ್ಲಿ ನಡೆಯಬಹುದಾದ ಸರಣಿ ದಾಳಿಗಳನ್ನು ತಡೆಯಲೆಂದು ಸಂಶಯಾಸ್ಪದ ವ್ಯಕ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈಕುರಿತು ಎನ್​ಡಿಟಿವಿಗೆ ಭದ್ರತಾ ಪಡೆಯ ಉನ್ನತ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೇರುವುದಕ್ಕೂ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ದಾಳಿಗಳು ನಡೆಯುವುದಕ್ಕೂ ಸಂಬಂಧ ಇರಬಹುದಾದ ಸಾಧ್ಯತೆಗಳನ್ನೂ ಭದ್ರತಾ ಪಡೆಗಳು ಪರಿಶೀಲಿಸುತ್ತಿವೆ.

ಸಾರ್ವಜನಿಕ ಸ್ಥಳಗಳಲ್ಲಿ ನಡೆದ ಪ್ರತ್ಯೇಕ ಭಯೋತ್ಪಾದಕ ದಾಳಿಗಳಲ್ಲಿ ನಾಗರಿಕರು ಮೃತಪಟ್ಟ ಘಟನೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಿವೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪ್ರಧಾನಿ ನರೇಂದ್ರ ಮೋದಿ ಕಣಿವೆ ರಾಜ್ಯಕ್ಕೆ ಭೇಟಿ ನೀಡಿ ಉಗ್ರರ ಗುಂಡಿಗೆ ಬಲಿಯಾದವರಿಗೆ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಲ್ಲಿ ನಾಗರಿಕರ ಹತ್ಯೆ ಹೆಚ್ಚಾಗಿದೆ. ಮಹಿಳಾ ಪ್ರಾಚಾರ್ಯರು ಮತ್ತು ಶಿಕ್ಷಕಿಯನ್ನು ಗುರುವಾರ ಅತ್ಯಂತ ಸನಿಹದಿಂದ ಗುಂಡಿಕ್ಕಿ ಕೊಲ್ಲಲಾಗಿದೆ. ಮಂಗಳವಾರವಷ್ಟೇ ಮರ್ಖನ್ ಲಾಲ್ ಬಿಂದ್ರೋ ಹೆಸರಿನ ಕಾಶ್ಮೀರಿ ಪಂಡಿತ್ ಮುಖಂಡನನ್ನು ಶ್ರೀನಗರದಲ್ಲಿ ಭಯೋತ್ಪಾದಕರು ಕೊಂದಿದ್ದರು.

ಶ್ರೀನಗರದ ಸಾಫಾ ಕಡಲ್​ ಪ್ರದೇಶದಲ್ಲಿರುವ ಶಾಲೆಯೊಂದರ ಪ್ರಿನ್ಸಿಪಾಲ್​ ಮತ್ತು ಶಿಕ್ಷಕರೊಬ್ಬರನ್ನು ಉಗ್ರರು (Terrorists) ಹತ್ಯೆಗೈದಿದ್ದಾರೆ. ಶ್ರೀನಗರ ಮತ್ತು ಬಂಡಿಪೋರಾದಲ್ಲಿ ಎರಡು ದಿನಗಳ ಹಿಂದೆ ಒಟ್ಟು ಮೂವರು ನಾಗರಿಕರನ್ನು ಉಗ್ರರು ಗುಂಡುಹೊಡೆದು ಕೊಂದಿದ್ದರು. ಇದೀಗ ಇಬ್ಬರು ಶಿಕ್ಷಕರನ್ನು ಹತ್ಯೆಗೈದಿದ್ದಾರೆ. ಮೃತರನ್ನು ಸತೀಂದರ್​ ಕೌರ್​ ಮತ್ತು ದೀಪಕ್​ ಚಾಂದ್​ ಎಂದು ಗುರುತಿಸಲಾಗಿದ್ದು, ಇಬ್ಬರೂ ಅಲೋಚಿಬಾಗ್ ನಿವಾಸಿಗಳು ಎನ್ನಲಾಗಿದೆ. ಉಗ್ರರಿಂದ ಗುಂಡೇಟು ತಿಂದು ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಕರೆದುಕೊಂಡು ಬರುವಷ್ಟರಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: 

ಜಮ್ಮು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ: ವಿದೇಶಾಂಗ ವ್ಯವಹಾರಗಳ ಇಲಾಖೆ ಆತಂಕ

100 ಸಿಸಿ ಬೈಕ್​ನಲ್ಲಿ ಕಾಶ್ಮೀರಕ್ಕೆ ರೈಡ್; ಧಾರವಾಡದ ಯುವಕನಿಂದ ಕೊರೊನಾ ಜಾಗೃತಿ ಅಭಿಯಾನ

Published On - 9:35 pm, Sun, 10 October 21